ಎವಿಕೆ ಮಹಿಳಾ ಕಾಲೇಜಿನಲ್ಲಿ ಸಂಭ್ರಮದಿಂದ ಆಹಾರ ಮೇಳ

ದಾವಣಗೆರೆ.ಜು.24; ನಗರದ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ “ಆಹಾರ ಮೇಳ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಆಹಾರ ಮೇಳಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ, ವಿದ್ಯಾರ್ಥಿನಿಯರಿಂದ ತಯಾರಿಸಲಾದ ವಿವಿಧ ತಿನಿಸುಗಳನ್ನು ಸವಿಯುವ ಮೂಲಕ ‘ಆಹಾರ ಮೇಳ’ವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಹೆಣ್ಣು, ಕಾಲ ಬದಲಾದಂತೆ ಪುರುಷನಷ್ಟೇ ಸಮಾನವಾಗಿ ದುಡಿಯಲು ಪ್ರಾರಂಭಿಸಿದ ಮೇಲೆ ಹೆಣ್ಣು ಮಕ್ಕಳಿಗೆ ಅಡುಗೆ ಮನೆ ಕನಸಾಗಿದೆ. ಇಂತಹ ಕಾಲದಲ್ಲಿ ಮತ್ತೆ ಹೆಣ್ಣು ಮಕ್ಕಳಿಗೆ ಅಡುಗೆ ಮಾಡುವ ಅಭಿರುಚಿಯನ್ನು ಬೆಳೆಸುವಂತೆ ಇಂದಿನ ಕಾರ್ಯಕ್ರಮ ಮೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಆಹಾರ ಮೇಳಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ವಿ.ವಿ. ಮತ್ತು ಕಾಲೇಜು ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಎ.ವಿ.ಕೆ. ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಸಿ.ಹೆಚ್. ಮುರಿಗೇಂದ್ರಪ್ಪ ಮುಖ್ಯ ಅತಿಥಿಗಳ ನುಡಿಗಳನ್ನಾಡುತ್ತಾ, ಈ ರೀತಿಯ ಆಹಾರಮೇಳ ಆಗಾಗ ಕಾಲೇಜು ಮಟ್ಟದಲ್ಲಿ ನಡೆಯುತ್ತಿರಬೇಕು. ಬೋಧನೆಯೊಂದೇ ಶಿಕ್ಷಣವಲ್ಲ ವಿದ್ಯಾರ್ಥಿನಿಯರ ಪ್ರತಿಭೆಯನ್ನು ಅನಾವರಣಗೊಳಿಸುವ ಇಂತಹ ವಿನೂತನ ಚಟುವಟಿಕೆಗಳನ್ನು ಆಗಾಗ ಆಯೋಜಿಸುವುದು ಕಾಲೇಜುಗಳ ಮುಖ್ಯ ಕಾರ್ಯವಾಗಿದೆ. ಈ ಆಹಾರ ಮೇಳವು ಮನಮೋಹಕವಾಗಿ ಮೂಡಿಬಂದಿದೆ. ಅಲ್ಲದೆ, ಎಲ್ಲಾ ವಿದ್ಯಾರ್ಥಿನಿಯರ ಮುಖದಲ್ಲಿ ಹೊಸ ಚೈತನ್ಯವನ್ನುಂಟು ಮಾಡಿದೆ ಎಂದು ಪ್ರಶಂಸಿಸಿದರು.ಈ ಮೇಳದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಪಿ. ಕುಮಾರ್‌ರವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ನಮ್ಮ ವಿದ್ಯಾರ್ಥಿನಿಯರ ಉತ್ಸಾಹವು ಚಿಲುಮೆಯಂತೆ ಇಂದು ರಂಜಿಸಿದೆ. ನಿಮ್ಮೆಲ್ಲರ ಆಸಕ್ತಿ-ನಿಷ್ಠೆಯಿಂದ ಈ ಆಹಾರ ಮೇಳವು ಯಶಸ್ವಿಯಾಗಿದೆ ಎಂದು ನುಡಿದರು. ಎ.ವಿ.ಕೆ. ಪದವಿ ಪೂರ್ವ ಕಾಲೇಜಿ ಪ್ರಾಂಶುಪಾಲರಾದ ಎ.ಬಿ. ಶಿವನಗೌಡ ಉಪಸ್ಥಿತರಿದ್ದರು. ಅಲ್ಲದೆ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.ಆಹಾರ ಮೇಳದಲ್ಲಿ ಒಟ್ಟು 50ಕ್ಕೂ ಹೆಚ್ಚು ಮಳಿಗೆಗಳು ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಈ ಅಂಗಡಿಗಳಲ್ಲಿ ನಿಯಮದಂತೆ ಶಾಖಾ ಸಹಿತ ಮತ್ತು ಶಾಖ ರಹಿತ ಊಟ-ಉಪಾಹಾರ-ಲಘು ಉಪಾಹಾರ, ಸಿಹಿ ತಿನಿಸು, ಹಣ್ಣು, ವಿವಿಧ ಬಗೆಯ ಪಾನಕ , ಟೀ-ಕಾಫಿ ಮತ್ತು ತಾಂಬೂಲ ಹೀಗೆ ವಿವಿಧ ಬಗೆಯ ಪಾನೀಯ ಹಾಗೂ ಭಕ್ಷ್ಯ ಭೋಜನಗಳು ಬೆಳಗ್ಗೆಯಿಂದಲೇ ವ್ಯಾಪಾರಕ್ಕೆ ಅಣಿಯಾಗಿದ್ದವು. ವಿಧ ವಿಧವಾದ ತಿನಿಸುಗಳನ್ನು ಸವಿದ ದಾವಣಗೆರೆ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು, ಪೋಷಕರು, ಬಹಳ ಸಂತಸಪಡುತ್ತಾ ಎ.ವಿ.ಕೆ. ಕಾಲೇಜಿನ ಆಹಾರ ಮೇಳ ನಮ್ಮೆಲ್ಲರ ಉದರದ ಆಸೇ ತೀರಿಸಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು.