ಎಳೆಯರಲ್ಲಿ ಯಕ್ಷಗಾನ ಸಂವಹನ ಮಾಡಬೇಕಾದುದು ಇಂದಿನ ಅಗತ್ಯ

ಮಂಗಳೂರು, ಡಿ೨೯- “ಯಕ್ಷಗಾನವು ಸರ್ವಸಂಸ್ಕಾರವನ್ನು ಕಲಿಸುವ ಭಾರತೀಯ ಶ್ರೇಷ್ಠ ಕಲೆ. ಸರಯೂ ತಂಡವು ಇಪ್ಪತ್ತು ವರ್ಷಗಳಿಂದ ಈ ಜಾಗೃತಿಯನ್ನು ಎಳೆಯ ಮಕ್ಕಳಿಗೆ ಬಿತ್ತಿ ಅವರಿಗೆ ಈ ಕಲೆಯತ್ತ ಆಕರ್ಷಿಸುತ್ತಾ, ಅವರಿಗೆ ಈ ಕಲೆಯ ಸಂವಹನ ಮಾಡುತ್ತಾ ಬರುತ್ತಿದೆ. ಅಲ್ಲದೆ ಸಮಾಜದ ಆಢ್ಯರನ್ನು ಗುರುತಿಸುತ್ತಾ, ಗೌರವಿಸುತ್ತಾ ಸನ್ಮಾನಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯ.
ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂದರ್ಭದಲ್ಲಿ ಜೀವನದ ಶ್ರೇಷ್ಠ ಸಾಧನಾ ಪ್ರಶಸ್ತಿ ಪುರಸ್ಕೃತ ಧರ್ಮದರ್ಶಿ ಹರಿಕೃಷ್ಣ ಪುನರೂರವರಿಗೂ ಇಂದಿಲ್ಲಿ ಸನ್ಮಾನ ಸಲ್ಲುವುದು ತುಳುವಿಗೆ ಸಂದ ಗೌರವ” ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕಲಾವಿದ ಶ್ರೀ ದಯಾನಂದ ಜಿ.ಕತ್ತಲ್ಸಾರ್ ಸರಯೂ ಸಪ್ತಾಹದ ತುಳುವೆರೆ ಏಳಾಟೊದ ಉದ್ಘಾಟನೆಯನ್ನು ನೆರವೇರಿಸಿ ತುಳುಭವನದ ಸಿರಿ ಚಾವಡಿಯಲ್ಲಿ ಹೇಳಿದರು. ಸಂಸ್ಥೆಯ ನಿರ್ದೇಶಕರು ಸ್ವಾಗತ ಮಾಡಿದರೆ ನಿವೃತ್ತ ಅಧ್ಯಾಪಕ ಶ್ರೀ ಸುಧಾಕರ ರಾವ್ ಪೇಜಾವರ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಂಜೀವ ಕಜೆಪದವು ಪ್ರಾರ್ಥನೆ ಮಾಡಿದರು. ಉದ್ಘಾಟನಾ ಕಾಯಕ್ರಮದಲ್ಲಿ ಶಿಕ್ಷಣ ತಜ್ಞ ಡಾ.ಶ್ರೀಪತಿ ರಾವ್ ಡಿ.ಯವರನ್ನೂ, ಶ್ರೀ ಗುರುವನ ದುರ್ಗಾ ಕ್ಷೇತ್ರದ ಪ್ರಧಾನ ಅರ್ಚಕ ಕಡೆಕಾರು ಶ್ರೀ ವೆಂಕಟರಾಜ ಕಾರಂತ ಕುಕ್ಕಾಜೆಯವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ್ ಶೆಟ್ಟಿ, ಇಷುದಿ ಜಂಬೂಸವಾರಿ ಪತ್ರಿಕೆಯ ಸಂಪಾದಕ ಶರತ್ ಕುಮಾರ್ ಭಟ್,ಕಲಾವಿದರಾದ ಸಂಜಯಕುಮಾರ್ ಶೆಟ್ಟಿ ಗೋಣಿಬೀಡು, ಸೀತಾರಾಮ್ ಕುಮಾರ್ ಕಟೀಲ್, ಮನಪಾ ಸದಸ್ಯ ಮನೋಜ್ ಕುಮಾರ್, ಗೌರವ ಸಂಚಾಲಕರಾದ ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು.
ಮಾಧವ ನಾವಡರು, ಡಾ.ದಿನೇಶ್ ನಾಯಕ್, ಶಾಂತಾ ಆರ್ ಎರ್ಮಾಳ್ ಸನ್ಮಾನ ಪತ್ರ ವಾಚಿಸಿದರು. ತುಳು ಅಕಾಡೆಮಿಯ ಸದಸ್ಯ ಚೇತಕ್ ಪೂಜಾರಿ ಧನ್ಯವಾದವಿತ್ತರು. ಸನ್ಮಾನ ಸಭಾ ಕಾರ್ಯಕ್ರಮದ ಬಳಿಕ ದಕ್ಷಿಣೋತ್ತರ ಜಿಲ್ಲೆಯ ನುರಿತ ಕಲಾವಿದರು ಮತ್ತು ಸರಯೂ ತಂಡದ ಸದಸ್ಯರಿಂದ ಕೋಟಿ ಚೆನ್ನಯ್ಯ ಯಕ್ಷಗಾನ ಬಯಲಾಟ ನಡೆಯಿತು.