ಎಳೆನೀರು ಮಾರುಕಟ್ಟೆಗೆ ಶಾಸಕ ಹೆಚ್.ಟಿ.ಮಂಜು ಭೇಟಿ-ಚರ್ಚೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.31:- ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಎಳೆನೀರು ಮಾರುಕಟ್ಟೆಗೆ ಶಾಸಕ ಹೆಚ್.ಟಿ.ಮಂಜು ಭೇಟಿ ನೀಡಿ ಎಳೆನೀರು ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸಿದರು.
ನಮ್ಮ ತಾಲ್ಲೂಕಿನ ಎಳೆನೀರಿಗೆ ವಿವಿಧ ರಾಜ್ಯಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಇಲ್ಲಿನ ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಬೆಳೆಗಾರರಿಗೆ ಉತ್ತಮ ಬೆಲೆ ನೀಡಿ ಎಳೆನೀರನ್ನು ಖರೀದಿಸಿದರೆ ನಿಮಗೂ ಒಳ್ಳೆಯದಾಗುತ್ತದೆ ರೈತರಿಗೂ ಅನುಕೂಲವಾಗುತ್ತದೆ. ರೈತ ಕಷ್ಟಪಟ್ಟು ಬೆಳೆದರೆ ಮಾತ್ರ ವ್ಯಾಪಾರಿಗಳು ಖರೀದಿಸಲು ಸಾಧ್ಯ. ರೈತನೇ ಇಲ್ಲದಿದ್ದಲ್ಲಿ ವ್ಯಾಪಾರಿಗಳು ಏನು ಮಾಡಲು ಸಾಧ್ಯ ? ಎಳೆನೀರು ಮಾರುಕಟ್ಟೆಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಾನು ಸಿದ್ದನಿದ್ದೇನೆ. ರೈತರಿಗೆ ಉತ್ತಮ ಬೆಲೆ ನೀಡಿ ಅವರನ್ನು ಪೆÇ್ರೀತ್ಸಾಹಿಸುವ ಕೆಲಸ ಮಾಡಿ. ಪ್ರತಿದಿನ ವ್ಯಾಪಾರ ಮಾಡುವ ಸ್ಥಳವಾಗಿರುವುದರಿಂದ ಅಧಿಕಾರಿಗಳು ಮತ್ತು ವ್ಯಾಪಾರಸ್ಥರು ಮಾರುಕಟ್ಟೆಯ ಸ್ವಚ್ಚತೆಯ ಕಡೆಗೆ ಗಮನ ನೀಡಿ ಸಾರ್ವಜನಿಕರಿಂದ ಹಾಗೂ ರೈತರುಗಳಿಂದ ಯಾವುದೇ ರೀತಿಯ ದೂರುಗಳು ಬರದಂತೆ ಕೆಲಸ ನಿರ್ವಹಿಸಬೇಕು. ರೈತರು ಉಳಿದರೆ ಮಾತ್ರ ನಾವು, ನೀವೆಲ್ಲರೂ ವ್ಯಾಪಾರ ವಹಿವಾಟು ಮಾಡಲು ಸಾಧ್ಯ ಆದ್ದರಿಂದ ವ್ಯಾಪಾರಿಗಳು ರೈತರಿಗೆ ಯಾವುದೇ ರೀತಿಯ ಮೋಸ ವಂಚನೆ ಮಾಡದೆ ಬೆಳೆಗಾರರ ಏಳಿಗೆಗೆ ಸಹಾಕಾರಿಯಾಗಬೇಕು ಎಂದು ತಿಳಿಸಿದರು.