ಎಳನೀರು ಕುಲ್ಫಿ

ಬೇಕಾಗುವ ಸಾಮಾಗ್ರಿಗಳು:
ಸೀಯಾಳದ ಕಾಯಿ/ಗಂಜಿ : ಅರ್ಧ ಕಪ್ ಮತ್ತು ಎರಡು ದೊಡ್ಡಚಮಚ ಆಗುವಷ್ಟು
ಸೀಯಾಳದ ನೀರು : ಮುಕ್ಕಾಲು ಕಪ್
ಕಂಡೆನ್ಸ್ಡ್ ಮಿಲ್ಕ್ : ಅರ್ಧ ಕಪ್
ತೆಂಗಿನ ಹಾಲು : ಒಂದೂವರೆ ಕಪ್
ಸಕ್ಕರೆ(ಸಿಹಿ ಜಾಸ್ತಿ ಬೇಕಿದ್ದರೆ ಮಾತ್ರ) :
೧ ದೊಡ್ಡ ಚಮಚ
ಪಿಸ್ತಾ ಚೂರುಗಳು : ಅಲಂಕಾರಕ್ಕೆ
ಮಾಡುವ ವಿಧಾನ:
ಒಂದು ಮಿಕ್ಸರ್ ಜಾರಿನಲ್ಲಿ ಅರ್ಧ ಕಪ್ ಆಗುವಷ್ಟು ಸೀಯಾಳದ ಕಾಯಿ ಅಥವಾ ಗಂಜಿಯನ್ನು ತೆಗೆದುಕೊಂಡು ಅದಕ್ಕೆ ಕಾಲು ಕಪ್ ಆಗುವಷ್ಟು ಸೀಯಾಳದ ನೀರನ್ನು ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.

ತಯಾರಾದ ಸೀಯಾಳದ ಪೇಸ್ಟ್ ಒಂದು ಪಾತ್ರೆಗೆ ವರ್ಗಾಯಿಸಿ ಮತ್ತು ಅದರೊಂದಿಗೆ ಅರ್ಧ ಕಪ್ ಕಂಡೆನ್ಸ್ಡ್ ಹಾಲು, ಒಂದೂವರೆ ಕಪ್ ತೆಂಗಿನ ಹಾಲು ಸೇರಿಸಿ ಚೆನ್ನಾಗಿ ಬೆರೆಸಿ.

ಈಗ ಈ ಪಾತ್ರೆಯನ್ನು ಒಲೆಯ ಮೇಲೆ ಇಡಿ.ನಿಮಗೆ ಸಿಹಿ ಜಾಸ್ತಿ ಬೇಕು ಎಂದಿದ್ದರೆ ಸ್ವಲ್ಪ ಸಕ್ಕರೆ ಹಾಕಿ ಕಲಕಿಕೊಳ್ಳಿ.

೩ ನಿಮಿಷ ಸಣ್ಣ ಅಥವಾ ಮಧ್ಯಮ ಉರಿಯಲ್ಲಿ ಕುದಿಸಿ.

೧ ದೊಡ್ಡ ಚಮಚ ಸಣ್ಣಗೆ ಕತ್ತರಿಸಿದ ಸೀಯಾಳದ ಕಾಯಿಯನ್ನು ಹಾಕಿ ಚೆನ್ನಾಗಿಕಲಸಿ. ಈ ದ್ರವ ಮಿಶ್ರಣವನ್ನು ಸಂಪೂರ್ಣವಾಗಿ ತಣಿಯಲು ಬಿಡಿ.

ಪೂರ್ತಿಯಾಗಿ ತಣಿದ ಮೇಲೆ ಕುಲ್ಫಿ ಮಿಶ್ರಣವನ್ನು ಕುಲ್ಫಿ ಮೌಲ್ಡ್ ನೊಳಗೆ ಹಾಕಿ ಮೇಲ್ಗಡೆ ಮತ್ತೆ ಸ್ವಲ್ಪ ಸೀಯಾಳದ ಚೂರುಗಳನ್ನು ಹಾಗು ಪಿಸ್ತಾ ಚೂರುಗಳನ್ನು ಹಾಕಿಅಲಂಕರಿಸಿ.

ಸರಿಯಾಗಿ ಮುಚ್ಚಿ,ಮೌಲ್ಡ್ಗಳನ್ನು ಫ್ರೀಜರ್ ನಲ್ಲಿ ೭ ರಿಂದ ೮ ಗಂಟೆ ಇಟ್ಟು ಗಟ್ಟಿಯಾಗಿಸಿ.ರುಚಿಯಾದ ಎಳನೀರಿನ ಕುಲ್ಫಿ ಸವಿಯಲು ಸಿದ್ಧ !