ಎಲ್ ಕೆಜಿ- ಯುಕೆಜಿಯಿಂದಅಂಗನವಾಡಿ ವ್ಯವಸ್ಥೆಗೆ ಧಕ್ಕೆ ; ಪ್ರತಿಭಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೫; ರಾಜ್ಯಸರ್ಕಾರ ಎಸ್.ಡಿ.ಎಂ.ಸಿ.ಮೂಲಕ ಶಾಲೆಗಳಲ್ಲಿ ಎಲ್.ಕೆ.ಜಿ. ಯು.ಕೆ.ಜಿ ಯನ್ನು ಪ್ರಾರಂಭಿಸುವ ಮೂಲಕ ಪ್ರಕ್ರಿಯೆಯನ್ನು ತಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರಫೆಡರೇಷನ್ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ  ಪ್ರತಿಭಟನೆ ನಡೆಸಿದರು.ಈ ವೇಳೆ ಜಿಲ್ಲಾ ಸಂಚಾಲಕ ಆವರಗೆರೆ ಚಂದ್ರು ಮಾತನಾಡಿ ರಾಜ್ಯ ಶಿಕ್ಷಣ ನೀತಿ ರೂಪಿತವಾಗುವ ಮುನ್ನವೆ ಶಾಲಾ ಶಿಕ್ಷಣ ಇಲಾಖೆ ಅಂಗನವಾಡಿಗೆ ತೆರಳಬೇಕಾದ 3 ರಿಂದ 6 ವರ್ಷ ವಯೋಮಾನದ ಮಕ್ಕಳಿಗಾಗಿ ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಡುತ್ತಿರುವುದು ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ವಿರುದ್ಧವಾದ ಪ್ರಕ್ರಿಯೆಯಾಗಿರುತ್ತದೆ. ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಒಂದನೇ ತರಗತಿಗೆ ದಾಖಲಾಗುವ ಮಕ್ಕಳನ್ನು 6 ವರ್ಷ ಪೂರ್ಣಗೊಂಡಿರಬೇಕೆಂದು ನಿಗಧಿಪಡಿಸಿದೆ. ಇಂತಹ ಸಂದರ್ಭದಲ್ಲಿ ಶಾಸನ ಸಭೆಯಲ್ಲಿ ಚರ್ಚೆಗೆ ಬಾರದೇ ಇನ್ನೂ ರಾಜ್ಯ ಶಿಕ್ಷಣ ನೀತಿ ರೂಪಿಸಿ ಜಾರಿಗೊಳಿಸುವ ಮುಂಚಯೇ ಏಕಪಕ್ಷಿವಾಗಿ ಶಾಲೆಗಳಲ್ಲಿ ಎಲ್.ಕೆ.ಜಿ. ಯು.ಕೆ.ಜಿ.ಗಳನ್ನು ಪ್ರಾರಂಭಿಸಿದರೆ ಮಕ್ಕಳ ಬೆಳವಣಿಗೆಯು ಕುಂಠಿತ ಗೊಳ್ಳುವುದರೊಂದಿಗೆ ಅಂಗನವಾಡಿಗಳು ದುರ್ಬಲಗೊಳ್ಳಲಿದೆ.ಆದ್ದರಿಂದ ರಾಜ್ಯಸರ್ಕಾರ ಎಸ್.ಡಿ.ಎಂ.ಸಿ.ಮೂಲಕ ಶಾಲೆಗಳಲ್ಲಿ ಎಲ್.ಕೆ.ಜಿ. ಯು.ಕೆ.ಜಿ ಯನ್ನು ಪ್ರಾರಂಭಿಸುವ ಮೂಲಕ ಪ್ರಕ್ರಿಯೆಯನ್ನು ತಡೆಯಬೇಕು ಹಾಗೂ ಹೊಸದಾಗಿ ರೂಪಗೊಳ್ಳಲಿರುವ ರಾಜ್ಯ ಶಿಕ್ಷಣ ನೀತಿಯ ಅಂಶಗಳನ್ನು ಪರಮಾರ್ಶಿಸಿ ಅಂಗನವಾಡಿಗೆ ದಾಖಲಿಸುವ ಮಕ್ಕಳ ಹಾಗೂ ಶಾಲಾ ಪೂರ್ವ ತರಗತಿಗಳಿಗೆ ಸೇರ್ಪಡೆಗೊಳಿಸುವ ಮಕ್ಕಳ ವಯೋಮಾನ ನಿಗಧಿಪಡಿಸುವ ಮೂಲಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು  ಒತ್ತಾಯಿಸಿದರು. ಹಾಗೂ ಈ ಕುರಿತು ಸರ್ಕಾರ ಒಂದು ದೃಢ ನಿಲುವು ತೆಗೆದುಕೊಳ್ಳಲು ಕೂಡಲೇ ಅಂಗನವಾಡಿ ಸಂಘಟನೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಕ್ಷಣ ಇಲಾಖೆ ಕಾರ್ಮಿಕ ಇಲಾಖೆಯ ಅಧಿಕಾರಿಯೊಂದಿಗೆ ಸಭೆ ನಡೆಸಿ ಉಲ್ಬಣಗೊಳ್ಳಲಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಹೆಚ್.ಜಿ ಉಮೇಶ್, ಸರ್ವಮ್ಮ,ಗೀತಾ, ಕೆಸಿ ನಿರ್ಮಲಾ ,ಆವರಗೆರೆ ವಾಸು,ಮಲ್ಲಮ್ಮ,ರೇಣುಕಾ,ಸುಧಾ ಮತ್ತಿತರರಿದ್ದರು.