ಎಲ್‌ಪಿಜಿ ಸಿಲಿಂಡರ್ ತೂಕ ಇಳಿಕೆಗೆ ಕೇಂದ್ರದ ಚಿಂತನೆ

ನವದೆಹಲಿ, ಡಿ. ೮- ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ತೂಕವನ್ನು ಇಳಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಸದ್ಯ ೧೪.೨ ಕೆ.ಜಿ. ತೂಕದ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಈಗಿರುವ ಸಿಲಿಂಡರ್ ತೂಕ ಹೆಚ್ಚಾಗಿದ್ದು, ಮಹಿಳೆಯರಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೂಕ ಕಡಿಮೆ ಮಾಡಲು ಮುಂದಾಗಿದೆ.
ಸಂಸತ್‌ನಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಸರ್ಕಾರ ಎಲ್‌ಪಿಜಿ ಸಿಲಿಂಡರ್‌ಗಳ ತೂಕ ಇಳಿಸುವ ಸುಳಿವು ನೀಡಿದರು.
ಜನರ ಅನುಕೂಲಕ್ಕಾಗಿ ಸಿಲಿಂಡರ್ ತೂಕದ ಇಳಿಕೆ ಅನಿವಾರ್ಯವಾಗಿದೆ. ೧೪.೨ ಕೆ.ಜಿ. ಯಿಂದ ೫ ಕೆ.ಜಿ. ಯವರೆಗೆ ಇಳಿಸುವ ಪ್ರಸ್ತಾಪವಿದೆ. ಶೀಘ್ರದಲ್ಲೇ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಇಳಿಕೆ ಮಾಡುವ ಕುರಿತ ಗಂಭೀರ ಚಿಂತೆನೆ ನಡೆಸಿದೆ.
ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುವ ಸಿಲಿಂಡರ್ ದರವನ್ನು ಡಿ. ೧ ರಂದು ೧೦೦ ರೂ. ೫೦ ಪೈಸೆಯಷ್ಟು ಹೆಚ್ಚಿಸಲಾಗಿತ್ತು.
ದೆಹಲಿಯಲ್ಲಿ ೧೯ ಕೆ.ಜಿ. ತೂಕದ ವಾಣಿಜ್ಯ ಸಿಲಿಂಡರ್‌ಗಳ ದರ ೨೧೦೧ ರೂ. ನಷ್ಟಿದೆ. ಕಳೆದ ನ. ೧ ರಂದು ವಾಣಿಜ್ಯ ಸಿಲಿಂಡರ್ ಗಳು ೨೬೬ ರೂ. ೫೦ ಪೈಸೆಯಷ್ಟು ಹೆಚ್ಚಿಸಲಾಗಿತ್ತು.
ಗೃಹ ಬಳಕೆಯ ಸಿಲಿಂಡರ್ ದರ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ದೆಹಲಿಯಲ್ಲಿ ಸಬ್ಸಿಡಿ ರಹಿತ ೧೪.೨ ಕೆ.ಜಿ. ಗೃಹ ಬಳಕೆ ಸಿಲಿಂಡರ್ ದರ ೮೯೯. ೫೦ ಪೈಸೆಯಷ್ಟಿದೆ.