ಎಲ್ಲ ಸಮುದಾಯಗಳ ಭ್ರಾತೃತ್ವ ಭಾವನೆ ಮುಂದುವರಿಯಲಿ: ನಾಗೇಶ ಡಿ.ಎಲ್.

ಬೀದರ, ಮಾ. 26: ಹೋಳಿ ಹಬ್ಬ, ಷಬ್-ಎ-ಬರಾತ್, ಗುಡ್ ಫ್ರೈಡೆ ಮತ್ತು ಮುಂಬರಲಿರುವ ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಮತ್ತು ಬಸವ ಜಯಂತಿ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರ ಅಧ್ಯಕ್ಷತೆಯಲ್ಲಿ ಮಾರ್ಚ 25ರಂದು ಶಾಂತಿ ಸಭೆ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮುದಾಯದ ಗಣ್ಯರನ್ನುದ್ದೇಶಿಸಿ ಮಾತನಾಡಿದ ಎಸ್ಪಿ ನಾಗೇಶ ಡಿ.ಎಲ್. ಅವರು, ವಿವಿಧ ಹಬ್ಬಗಳ ಆಚರಣೆ ವೇಳೆಯಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯ ದಕ್ಕೆಯಾಗದಂತೆ ಚರ್ಚಿಸಲು, ಸಮಸ್ಯೆಗಳು ಮತ್ತು ಸಲಹೆಗಳೇನಾದರು ಇದ್ದಲ್ಲಿ ಅವುಗಳನ್ನು ಕೇಳಲು, ಅದಕ್ಕಾಗಿ ಜಿಲ್ಲಾಡಳಿತ ಇಲ್ಲವೇ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅದಕ್ಕೆ ಪರಿಹಾರ ಕಲ್ಪಿಸಲು ಮತ್ತು ಕಾನೂನು ಸುವಸ್ಥೆ ಕಾಪಾಡಲು ತಮ್ಮೊಂದಿಗೆ ಸಹಕರಿಸಲು ತಮ್ಮೆಲ್ಲರಲ್ಲಿ ಮನವಿ ಮಾಡಲು ವಿವಿಧ ಸಮುದಾಯಗಳ ಮುಖಂಡರುಗಳ ಸಭೆಯನ್ನು ಕರೆಯಲಾಗಿದೆ ಎಂದು ತಿಳಿಸಿದರು.
ಹಿಂದಿನ ವರ್ಷ ಕೋವಿಡ್-19 ಕಾಣಿಸಿಕೊಳ್ಳದೇ ಇರುವ ವೇಳೆಯಲ್ಲಿ ಹೋಳಿಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗಿತ್ತು. ಯಾವುದೇ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡದೇ ಸೂಕ್ತ ಪೊಲೀಸ್ ಬಂದೋಸ್ತ್ ವ್ಯವಸ್ಥೆ ಮಾಡಿ, ಅಹಿತಕರ ಘಟನೆಗಳು ಆಗದಂತೆ ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಿ, ಅಧಿಕಾರಿಗಳು ಕೂಡ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಹೋಳಿಹಬ್ಬವನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಲಾಗಿತ್ತು ಎಂಬುದನ್ನು ನೆನಪಿಸಿದ ಎಸ್ಪಿ ಅವರು, ಈ ವರ್ಷವೂ ಕೂಡ ಸಾರ್ವಜನಿಕರಿಗೆ ಯಾವುದೇ ರೀತಿಯ ನಿರ್ಬಂಧನೆಗಳನ್ನು ಹಾಕಬೇಕು ಎಂಬುದು ನಮ್ಮ ಉದ್ದೇಶವಲ್ಲ. ಆದರೆ, ಸದ್ಯದ ಪರಿಸ್ಥಿತಿಯು ನಮಗೆ ಅಂತಹ ಅನಿವಾರ್ಯತೆಯನ್ನು ತಂದಿದೆ ಎಂದು ಮನವರಿಕೆ ಮಾಡಿದರು.
ಈಗಾಗಲೇ ನಾವು ಕಳೆದೊಂದು ವರ್ಷದಿಂದ ಕೋರೋನಾದಿಂದ ಸಾಕಷ್ಟು ಸಂಕಟಗಳನ್ನು ಎದುರಿಸಿದ್ದೇವೆ. ಈಗ ಮತ್ತೆ ಬೀದರ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಈ ಹಿಂದೆ ಲಾಕ್‍ಡೌನ್ ಅವಧಿಯಲ್ಲಿದ್ದ ಪರಿಸ್ಥಿತಿಯನ್ನು ಈಗ ಮತ್ತೆ ಬೀದರ ಎದುರಿಸುವಂತ ಸ್ಥಿತಿ ಬರುತ್ತಿದೆ. ಆದ್ದರಿಂದ ಇದನ್ನು ಸಾರ್ವಜನಿಕರು ಅರಿತು ಹಬ್ಬ ಆಚರಣೆ ವೇಳೆಯಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆ ಮಾಡಬೇಕು ಎಂದರು.
ಕೋವಿಡ್-19 ಪರಿಸ್ಥಿತಿ ತೀವ್ರ ಗೊಳ್ಳುತ್ತಿರುವುದರಿಂದ ನಾವು ಪ್ರತಿಯೊಬ್ಬರ ಮನೆಗೆ ಹೋಗಿ ಮಾಸ್ಕ ಹಾಕಿರಿ, ಕೈತೊಳೆಯಿರಿ ಎಂದು ಹೇಳಲು ಆಗುವುದಿಲ್ಲ. ಆದ್ದರಿಂದ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿರಿ ಆದರೆ, ದೊಡ್ಡಮಟ್ಟದಲ್ಲಿ ಮಾಡಲು ಯಾವುದೇ ಯೋಜನೆ ಮಾಡಬೇಡಿರಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮತ್ತು ಉಪ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿರುವುದರಿಂದ ನಿಯಮಗಳನ್ನು ಪಾಲನೆ ಮಾಡಬೇಕು. ಜನರು ಗುಂಪಾಗಿ ಸೇರಬಾರದು. ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಹಬ್ಬ ಆಚರಣೆ ಮಾಡುವುದು ಸರಿಯಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡುವಾಗ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಮುಂಬರಲಿರುವ ವಿವಿಧ ಹಬ್ಬಗಳ ಆಚರಣೆ ವೇಳೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‍ಗೆ ವ್ಯವಸ್ಥೇ ಮಾಡಲಾಗುವುದು. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆಯಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲ ಸಮುದಾಯದವರಲ್ಲಿ ಭ್ರಾತೃತ್ವದ ಭಾವನೆಯಿದೆ. ಇದನ್ನು ಮುಂದುವರೆಸಬೇಕು. ಯಾವುದೇ ಕಡೆಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆದರೆ ಆ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ತಮ್ಮ ಗಮನಕ್ಕೆ ತರÀಬೇಕು. ಯಾರು ಕೂಡ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮೊದಲು ಪ್ರಾಸ್ತಾವಿಕ ಮಾತನಾಡಿದ ಪೊಲೀಸ್ ಉಪಾಧೀಕ್ಷಕರಾದ ಬಸವರಾಜ ಹೀರಾ ಅವರು, ಹೋಳಿ ಹಬ್ಬ, ಷಬ್-ಎ-ಬರಾತ್, ಗುಡ್ ಫ್ರೈಡೆ, ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಮತ್ತು ಬಸವ ಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವಿವಿಧ ಸಮುದಾಯಗಳ ಮುಖಂಡರನ್ನು ಕರೆಯಿಸಿ ಶಾಂತಿ ಸಭೆ ನಡೆಸಲಾಗುತ್ತಿದೆ. ಯಾರೇ ಆಗಲಿ ಇಂತಹ ಸಂದರ್ಭದಲ್ಲಿ ಹಬ್ಬಗಳನ್ನು ದೊಡ್ಡಮಟ್ಟದಲ್ಲಿ ಆಚರಣೆ ಮಾಡಬಾರದು. ಎಲ್ಲ ಸಮುದಾಯದವರ, ಸಮಾಜದ ಹಿತದೃಷ್ಟಿಯಿಂದಾಗಿ ಆಲೋಚಿಸಿ ಆಚರಣೆಗಳನ್ನು ಮನೆಗೆ ಸೀಮಿತಗೊಳಿಸಿಕೊಂಡು ಎಲ್ಲ ಸಮುದಾಯವರು ಕೂಡ ಪೊಲೀಸ್ ಇಲಾಖೆಯ ಜೊತೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಮಾತನಾಡಿ, ತಮ್ಮ ಸಲಹೆಗಳನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಸಿಪಿಐಗಳಾದ ಡಿ.ಜಿ.ರಾಜಣ್ಣ, ವಿಜಯಕುಮಾರ, ಚಂದ್ರಶೇಖರ, ಪಿಎಸ್‍ಐಗಳಾದ ಸಂತೋಷ, ಇಂದ್ರಮ್ಮ, ಸುವರ್ಣ, ಸಂಗೀತಾ, ಪ್ರಭಾಕರ ಹಾಗೂ ಇತರರು ಇದ್ದರು.