ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಕಾರ್ಯ ಬ್ರಹ್ಮಕುಮಾರಿ ಕೇಂದ್ರಗಳು ಮಾಡುತ್ತಿವೆ: ರಹಿಮ್ ಖಾನ್

(ಸಂಜೆವಾಣಿ ವಾರ್ತೆ)
ಬೀದರ್:ಮಾ.17: ಎಲ್ಲ ಸಮುದಾಯಗಳಿಗೆ ಉತ್ತಮ ಸಂಸ್ಕಾರ ಹಾಗೂ ಸಂಸ್ಕøತಿ ದಯಪಾಲಿಸಿ, ಮಾನವ ಧರ್ಮ ಒಂದೆ ಎಂದು ಸಾರಿ ಜಾತಿ ವೈಷಮ್ಯ ತಗ್ಗಿಸಿ, ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಭಾರತದ ಏಕತೆ ಹಾಗೂ ಅಖಂಡತೆ ಬಲಪಡಿಸುವ ಕಾರ್ಯ ಬ್ರಹ್ಮಾಕುಮಾರಿ ಕೇಂದ್ರಗಳು ಮಾಡುತ್ತಿವೆ ಎಂದು ಸ್ಥಳಿಯ ಶಾಸಕ ರಹಿಮ್ ಖಾನ್ ತಿಳಿಸಿದರು.
ಗುರುವಾರ ಸಂಜೆ ನಗರದ ಹೊರವಲಯದಲ್ಲಿರುವ ಜ್ಞಾನಸುಧಾ ವಿದ್ಯಾಲಯದ ಬಳಿ ಇರುವ ಓಂನಗರದಲ್ಲಿ ನೂತನವಾಗಿ ನಿರ್ಮಿಸಲಾದ ಬ್ರಹ್ಮಾಕುಮಾರಿ ಕೇಂದ್ರವಾದ ‘ಲೈಟ್ ಹೌಸ್’ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮನುಷ್ಯ ಯಾವ ಜಾತಿಯವನೇ ಆಗಿರಲಿ ಆದರೆ ಅವನಿಗೆ ಜನ್ಮ ನೀಡುವ ಪರಮಾತ್ಮ ಮಾತ್ರ ಒಬ್ಬನೆ. ಅವನು ಎಲ್ಲರಿಗೂ ಸಮಾನವಾಗಿ ಗಾಳಿ, ನೀರು, ಬೆಳಕು, ಅನ್ನ, ವಸ್ತ್ರ ಎಲ್ಲವನ್ನು ನೀಡುವಲ್ಲಿ ಭೇದ ಏಣಿಸಲಾರ. ಹಾಗೇ ಬ್ರಹ್ಮಾಕುಮಾರಿ ಸಹೋದರಿಯರು ಕೂಡ ವಿಶ್ವದಲ್ಲಿ ಶಾಂತಿ ನೆಲೆಸಲು ಎಲ್ಲರನ್ನು ಒಂದೆ ವೇದಿಕೆಯತ್ತ ಕೊಂಡೊಯ್ಯುವ ಮಹತ್ತರ ಕಾರ್ಯ ಮಾಡುತ್ತಿರುವರು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬ್ರಹ್ಮಾಕುಮಾರಿ ಪ್ರಧಾನ ಕೇಂದ್ರವಾದ ಮೌಂಟ್ ಅಬುದ ಕೃಷಿ ಹಾಗೂ ಗ್ರಾಮಿಣ ವಿಕಾಸ ಪ್ರಭಾರದ ಉಪಾದ್ಯಕ್ಷರಾದ ಬಿ.ಕೆ ರಾಜುಭಾಯಿ ಮಾತನಾಡಿ, ಒಂದು ಸೇವಾ ಸ್ಥಾನ ಸಕಾರಾತ್ಮಕ ಚಿಂತನೆಗಾಗಿ ನಿರ್ಮಿಸಿದರೆ ಅದು ಸಾವಿರಾರು ಆತ್ಮಗಳನ್ನು ಪವಿತ್ರಗೊಳಿಸುವ ಕಾರ್ಯ ಮಾಡುತ್ತದೆ. ಇಂದು ನಮ್ಮ ಸಂಸ್ಥೆಯಲ್ಲಿ ಶೇಕಡಾ 90 ಪ್ರತಿಶತ ಸಹೋದರ, ಸಹೋದರಿಯರು ಗ್ರಾಮೀಣ ಭಾಗದಿಂದ ಬಂದವರಾಗಿದ್ದಾರೆ. ದೇಶದ ಪ್ರತಿ ಗ್ರಾಮಗಳಿಗೆ ತೆರಳಿ, ಗೀತಾ ಪಠ ಶಾಲೆಗಳ ಮೂಲಕ ಗ್ರಾಮೀಣ ಜನರಿಗೆ ರಾಜಯೋಗ ಶಿಬಿರದ ಮೂಲಕ ಪರಮಾತ್ಮನ ಸಾಕ್ಷಾತ್ಕಾರ ಮಾಡುತ್ತಿರುವುದರಿಂದ ಈ ದೇಶ ಮತ್ತೆ ವಿಶ್ವಗುರುವಿನ ಸ್ಥಾನದಲ್ಲಿ ನಿಲ್ಲುವ ಸಮಯ ದೂರವಿಲ್ಲ ಎಂದರು.
ಹುಲಸೂರ ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಪೂಜ್ಯ ಮ.ನಿ.ಪ್ರ ಡಾ.ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿ, ಹುಟ್ಟು ಹಾಗೂ ಸಾವಿನ ಮಧ್ಯದ ಬದುಕಿನಲ್ಲಿ ಏನಾದರೊಂದು ಸತ್ಕಾರ್ಯ ಮಾಡಿದರೆ ಅದು ಶಾಶ್ವತವಾಗಿ ಉಳಿಯಬಲ್ಲದು. 12ನೇ ಶತಮಾನದಲ್ಲಿ ಬಸವಾದಿ ಶರಣರು ಮಾಡಿದ ರಚನಾತ್ಮಕ ಕಾರ್ಯ 22ನೇ ಶತಮಾನದಲ್ಲಿ ಬ್ರಹ್ಮಾಕುಮಾರಿ ಸಹೋದರಿಯರು ಮಾಡುತ್ತಿರುವರು. ಶ್ವೇತ ವಸ್ತ್ರಧಾರಿಗಳಾಗಿ ಸಮಾಜದಲ್ಲಿ ಶಿಸ್ತು, ಶಾಂತಿ ನೆಲೆಸುವ ಮಹತ್ತರ ಕಾರ್ಯದಲ್ಲಿ ತೊಡಗಿರುವ ಇವರ ನಿಸ್ವಾರ್ಥ ಕಾರ್ಯ ಇಡೀ ಜಗತ್ತು ಹಾಗೂ ಜಗದೀಶ್ವರನು ಮೆಚ್ಚುವಂಥದ್ದು ಎಂದು ಬಣ್ಣಿಸಿದರು.
ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್‍ಜಿ ಪ್ರಾಸ್ತಾವಿಕ ಮಾತನಾಡಿದರು. ಅಖಿಲ ಭಾರತೀಯ ವೀರಶೈವ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ, ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಪ್ರವರ್ತಕ ಬಿ.ಕೆ ಪ್ರಭಾಕರ ಭಾಯಿ ಹಾಗೂ ಹಿರಿಯರಾದ ಚಂದ್ರಕಾಂತ ವಸಮತೆ ಮಾತನಾಡಿದರು. ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಜ್ಞಾನಸುಧಾ ವಿದ್ಯಾಲಯದಿಂದ ನೂತನ ಕೇಂದ್ರದ ವರೆಗೆ ಶ್ವೇತ ವಸ್ತ್ರಧಾರಿಗಳಾಗಿ, ಕೈಯಲ್ಲಿ ಬ್ರಹ್ಮಾಕುಮಾರಿ ಧ್ವಜ ಹಿಡಿದು ವಾದ್ಯ ಮೇಳದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದರು. ನೂತನ ಕೇಂದ್ರದ ಪೂಜಾ ವಿಧಿ ಸಂಪನ್ನಗೊಂಡು ಸಪ್ತ ಋಷಿಗಳ ವೇಶದಲ್ಲಿ ಮಕ್ಕಳು ಅತಿಥಿ ಗಣ್ಯರನ್ನು ವೇದಿಕೆಗೆ ಬರಮಾಡಿಕೊಂಡರು. ಉಷಾ ಬ್ರಭಾಕರ ನೇತೃತ್ವದ ನೂಪೂರ ನೃತ್ಯ ಅಕಾಡೆಮಿ ಮಕ್ಕಳು ತಮ್ಮ ನೃತ್ಯದ ಮೂಲಕ ಜನಮನ ತಣಿಸಿದರು. ಪೂರ್ಣಚಂದ್ರ ಹಾಗೂ ತಂಡದವರು ಬ್ರಹ್ಮಾಕುಮಾರಿ ನೃತ್ಯ ಪ್ರಸ್ತುತಪಡಿಸಿದರು. ಬ್ರಹ್ಮಾಕುಮಾರಿ ಸಹೋದರಿಯರ ನೃತ್ಯ ಎಲ್ಲರನ್ನು ಭಕ್ತಿ ಭಾವದಲ್ಲಿ ತೇಲಿಸಿತು.
ಈ ಸಂದರ್ಭದಲ್ಲಿ ‘ಲೈಟ್ ಹೌಸ್’ ನಿರ್ಮಿಸಿ ಬ್ರಹ್ಮಾಕುಮಾರಿ ಪಾವನಧಾಮಕ್ಕೆ ಸಮರ್ಪಿಸಿರುವ ಬಿ.ಕೆ ಉಷಾ, ತಾಯಿ ಸುಖದೇವಿ ಹಾಗೂ ಅವರ ಪರಿವಾರದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೇಂದ್ರದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಾ ಭೋಜನ ಸವಿದು ಕಾರ್ಯಕ್ರಮಕ್ಕೆ ಮಂಗಲ ಹಾಡಲಾಯಿತು.