ಎಲ್ಲ ಸಮಸ್ಯೆಗಳಿಗೂ ಸಮಾಜವಾದಿ ಕ್ರಾಂತಿಯಿಂದಲೇ ಪರಿಹಾರ: ಕಾ. ದಿವಾಕರ್

ಕಲಬುರಗಿ,ಜ.21:ನಮ್ಮ ದೇಶಕ್ಕೆ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯೊಂದೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಹೆಚ್.ವ್ಹಿ. ದಿವಾಕರ್ ಅವರು ಹೇಳಿದರು.
ನಗರದ ಪಕ್ಷದ ಜಿಲ್ಲಾ ಸಮಿತಿಯಿಂದ ಪಕ್ಷದ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೇಡ್ ಲೆನಿನ್ ಅವರ 99ನೇ ಸ್ಮರಣ ದಿನದ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿ ನಂತರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಪಂಚದ ಅತ್ಯಂತ ರೋಗಿಷ್ಟ ರಾಷ್ಟ್ರವಾದ ರಷ್ಯಾದಲ್ಲಿ ತ್ಸಾರ್‍ನ ಕ್ರೂರ ಆಳ್ವಿಕೆಯು ನಡೆಯುತ್ತಿತ್ತು. ದೇಶದಲ್ಲಿ ಜಮೀನ್ದಾರರ ಶೋಷಣೆ ಅಟ್ಟಹಾಸದಿಂದ ಮೆರೆದಿತ್ತು. ಅಂತಹ ಸಂದರ್ಭದಲ್ಲಿ ಕಾರ್ಮಿಕ ವರ್ಗಕ್ಕೆ ವಿಮೋಚನೆಯ ಚಿಂತನೆಯನ್ನು ಕೊಟ್ಟ ಮಹಾನ್ ತತ್ವಜ್ಞಾನಿಗಳಾದ ಕಾರ್ಲ್ ಮಾಕ್ರ್ಸ್ ಮತ್ತು ಫೆಡರಿಕ್ ಎಂಗೆಲ್ಸ್ ಅವರ ಅಮೂಲ್ಯ ಬೋಧನೆಯನ್ನು ಅರ್ಥ ಮಾಡಿಕೊಂಡು, ಮಾಕ್ರ್ಸ್‍ವಾದ ಮಾತ್ರವೇ ವಿಶ್ವದ ಶೋಷಿತರ ವಿಮುಕ್ತಿಯನ್ನು ತೋರಿಸಿ ಕೊಡುವ ತತ್ವಶಾಸ್ತ್ರ ಎಂದು ಮನನ ಮಾಡಿಕೊಂಡು ನಂತರ ಆ ತತ್ವಶಾಸ್ತ್ರವನ್ನು ಗುಣಾತ್ಮಕವಾಗಿ ಅಭಿವೃದ್ಧಿ ಪಡಿಸಿ ಒಂದು ಜೈವಿಕ ಆಕಾರವನ್ನು ನೀಡಿದರು ಎಂದರು.
ನಂತರ ವಿಶ್ವದಲ್ಲಿ ಎಂದೂ ಕೇಳಿರದಂತಹ, ಎಂದೂ ಕಂಡಿರದಂತಹ ಕಾರ್ಮಿಕರ ಶೋಷಣಾ ಮುಕ್ತ ಸಮಾಜವನ್ನು ಕಟ್ಟಿದರು. ಶತಶತಮಾನಗಳಿಂದಲೂ ಶೋಷಣೆ ಸಂಕೋಲೆಯಲ್ಲಿ ಇರುವ ಕಾರ್ಮಿಕ ವರ್ಗವು ಬಂಧ ಮುಕ್ತವಾಯಿತು. ಈ ಅಭೂತಪೂರ್ವ ಕ್ರಾಂತಿಯು 1917ರಲ್ಲಿ ನೆರವೇರಿ ನಂತರ ಇಡೀ ವಿಶ್ವಕ್ಕೆ ಬಲಿಷ್ಠ ರಾಷ್ಟ್ರವಾಗಿ ಬೆಳೆಯಿತು ಎಂದು ಅವರು ತಿಳಿಸಿದರು.
ನಮ್ಮ ದೇಶದ ಅಪ್ರತಿಮ ಕ್ರಾಂತಿಕಾರಿಗಳಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಭಗತ್ ಸಿಂಗ್ ಅವರಂತಹ ಕ್ರಾಂತಿಕಾರಿಗಳೂ ಈ ರಷ್ಯಾದ ಸಮಾಜವಾದಿ ಕ್ರಾಂತಿಯಿಂದ ಪ್ರೇರಿತರಾಗಿ ಭಾರತವೂ ಸಮಾಜವಾದಿ ಕ್ರಾಂತಿಯ್ನು ನೆರವೇರಿಸಬೇಕೆಂದು ಹಂಬಲಿಸಿ ತಮ್ಮ ಹೋರಾಟಗಳನ್ನು ಹರಿತಗೊಳಿಸಿದರು. ದುರದೃಷ್ಟವಶಾತ್ ಅವರ ಕನಸಿನ ಭಾರತವು ಉದಯಿಸಲಿಲ್ಲ. ಈ ಹಿನ್ನೆಲೆಯಲ್ಲಿ ಎಸ್‍ಯುಸಿಐ (ಸಿ) ಪಕ್ಷದ ಸಂಸ್ಥಾಪಕರು ಹಾಗೂ ಈ ಯುಗದ ಇನ್ನೋರ್ವ ಮಹಾನ್ ಮಾಕ್ರ್ಸ್‍ವಾದಿ ಚಿಂತಕ ಕಾ. ಶಿವದಾಸ್ ಘೋಷ್ ಅವರು ನಮ್ಮ ದೇಶದ ನವೋದಯದ ಹರಿಕಾರರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳ ಕನಸನ್ನು ನನಸು ಮಾಡಲು ಮಾಕ್ರ್ಸ್‍ವಾದ ಲೆನಿನ್‍ವಾದವನ್ನು ಅನುಸರಿಸಬೇಕು ಎಂದು ತೋರಿಸಿಕೊಟ್ಟರು ಎಂದು ಅವರು ಹೇಳಿದರು.
ಈ ತತ್ವದಿಂದ ರಚಿಸಲ್ಪಟ್ಟ ಎಸ್‍ಯುಸಿಐ (ಸಿ) ಪಕ್ಷವನ್ನು ಬಲಪಡಿಸಿ ಈ ನೆಲದಲ್ಲಿಯೂ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರೆವೇರಿಸಬೇಕು. ಆಗ ಮಾತ್ರವೇ ನಮ್ಮ ದೇಶದಲ್ಲಿ 99% ಜನರನ್ನು ಕ್ರೂರವಾಗಿ ಶೋಷಣೆ ಮಾಡುತ್ತಿರುವ ಬಂಡವಾಳಶಾಹಿಗಳು ಹಾಗೂ ಅವರ ರಕ್ಷಣೆಗಾಗಿ ಏಜಂಟರಂತೆ ಇರುವ ಎಲ್ಲಾ ರಾಜಕೀಯ ಪಕ್ಷಗಳನ್ನು ಸೋಲಿಸಿ ನವ ಸಮಾಜವನ್ನು ಕಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ನಮ್ಮ ನೆಲದ ಎಲ್ಲ ಕ್ಷೇತ್ರದ ಜನತೆ ಒಂದಾಗಬೇಕೆಂದು ಅವರು ಕರೆ ನೀಡಿದರು.
ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಕಾ. ವಿ. ನಾಗಮ್ಮಾಳ್ ಅವರು ಸಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಎಸ್.ಎಂ. ಶರ್ಮಾ, ಮಹೇಶ್ ಎಸ್. ಬಿ. ಸದಸ್ಯರಾದ ಗೌರಮ್ಮ ಸಿ.ಕೆ., ರಾಧಾ ಜಿ. ತುಳಜಾರಾಮ್, ಶಿಲ್ಪ ಬಿ.ಕೆ., ವೆಂಕಟೇಶ್ ದೇವದುರ್ಗ, ಗೋವಿಂದ್, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.