ಎಲ್ಲ ಶಿಕ್ಷಕರಿಗೂ ಸಮಾನ ವೇತನ, ವಿಶೇಷ ಭತ್ಯೆ ನೀಡಲು ನಮೋಶಿ ಒತ್ತಾಯ

ಕಲಬುರಗಿ,ಜೂ.9-ಕೆಎಟಿಯಲ್ಲಿ ಪ್ರಶ್ನಿಸಿದ್ದ 813 ಮಂದಿಗೆ ಮಾತ್ರ ವೇತನ, ವಿಶೇಷ ಭತ್ಯೆ ತಾರತಮ್ಯ ಸರಿಪಡಿಸುವುದಾಗಿ ಶಿಕ್ಷಣ ಇಲಾಖೆ ಹೇಳುತ್ತಿರುವುದು ಅವೈಜ್ಞಾನಿಕವಾಗಿದ್ದು, ಒಂದೇ ಅಧಿಸೂಚನೆಯಲ್ಲಿ ನೇಮಕವಾದ ಎಲ್ಲ ಶಿಕ್ಷಕರಿಗೂ ಸಮಾನ ವೇತನ, ವಿಶೇಷ ಭತ್ಯೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, 2007-08ರಲ್ಲಿ 3,350 ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದೇ ಶೈಕ್ಷಣಿಕ ವರ್ಷದಲ್ಲಿ ಆಯ್ಕೆ ಪ್ರಕ್ರಿಯೆ ನಡೆದು ನೇಮಕಾತಿ ಆದೇಶವನ್ನು ನೀಡಿತ್ತು. ಕೆಲ ಅಭ್ಯರ್ಥಿಗಳು ಕನ್ನಡ ಮಾಧ್ಯಮ ಗ್ರಾಮೀಣ ಕೃಪಾಂಕ, ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಇಲಾಖೆಗೆ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾಗಲು ಒಂದುವರೆ ತಿಂಗಳು ಸಮಯವಾಗಿತ್ತು. ಈ ಪೈಕಿ ಶಿಕ್ಷಣ ಇಲಾಖೆ ಕೆಲವರಿಗೆ ವಿಶೇಷ ಭತ್ಯೆ ನೀಡಿಲ್ಲ, ಇನ್ನೂ ಕೆಲವರಿಗೆ ವಿಶೇಷ ಭತ್ಯೆ ಮರುಪಾವತಿಸುವಂತೆ ಸೂಚಿಸಿತ್ತು. ಇದರಿಂದಾಗಿ ಶಿಕ್ಷಕರಿಗೆ ಆರ್ಥಿಕ ಹೊರೆಯಾಗಿತ್ತು. 2008ರಲ್ಲಿ ಒಂದೇ ಅಧಿಸೂಚನೆಯಲ್ಲಿ ನೇಮಕವಾದ ಶಿಕ್ಷಕರು ಒಂದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ವಿಳಂಬವಾಗಿ ದಾಖಲೆಗಳನ್ನು ಸಲ್ಲಿಸಿದ ಶಿಕ್ಷಕರು ಹಾಗೂ ಮುಂಚಿತವಾಗಿ ದಾಖಲೆಗಳನ್ನು ಸಲ್ಲಿಸಿದ ಶಿಕ್ಷಕರ ನಡುವೆ ವೇತನ ತಾರತಮ್ಯ ಏರ್ಪಟ್ಟಿದೆ. ಮುಂಚಿತವಾಗಿ ದಾಖಲೆ ಸಲ್ಲಿಸಿದವರಿಗೆ ಮಾತ್ರ ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಿಸಲಾಗಿದೆ. ಸರ್ಕಾರ ದೃಢೀಕರಣ ಪ್ರಮಾಣಪತ್ರಗಳನ್ನು ಶೀಘ್ರವಾಗಿ ನೀಡಿದ್ದರೆ, ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಸಲ್ಲಿಸುತ್ತಿದ್ದರು. ಸರ್ಕಾರದ ತಪ್ಪಿಗೆ ಶಿಕ್ಷಕರು ಶಿಕ್ಷೆ ಅನುಭವಿಸುವಂತಾಗಿದೆ ಎಂದು ತಿಳಿಸಿದ್ದಾರೆ.
2020ರಲ್ಲಿ 813 ಶಿಕ್ಷಕರು ವೇತನಸ ವಿಶೇಷ ಭತ್ಯೆ ತಾರತಮ್ಯವನ್ನು ಕೆಎಟಿಯಲ್ಲಿ ಪ್ರಶ್ನಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವೇತನ, ವಿಶೇಷ ಭತ್ಯೆ ತಾರತಮ್ಯವನ್ನು ಎರಡು ತಿಂಗಳಲ್ಲಿ ಸರಿಪಡಿಸುವಂತೆ 2021ರ ಮೇ.5 ರಂದು ಆದೇಶ ನೀಡಿದೆ. ಇದೀಗ ಕೆಎಟಿಯಲ್ಲಿ ಪ್ರಶ್ನಿಸಿದ್ದ 813 ಮಂದಿಗೆ ಮಾತ್ರ ವೇತನ, ವಿಶೇಷ ಭತ್ಯೆ ತಾರತಮ್ಯ ಸರಿಪಡಿಸುವುದಾಗಿ ಶಿಕ್ಷಣ ಇಲಾಖೆ ಹೇಳುತ್ತಿರುವುದು ಅವೈಜ್ಞಾನಿಕವಾಗಿದೆ. ಒಂದೇ ಅವಧಿಯಲ್ಲಿ ನೇಮಕವಾದ ಎಲ್ಲ ಶಿಕ್ಷಕರಿಗೂ ಸಮಾನ ವೇತನ, ವಿಶೇಷ ಭತ್ಯೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.