ಎಲ್ಲ ಶಾಸಕರು ಶಿವನಗೌಡರ ಅನುಸರಿಸಲಿ-ವಜ್ಜಲ್

ದೇವದುರ್ಗ.ಜೂ.೨-ಕರೊನಾ ಸಂಕಷ್ಟ ಸಮಯದಲ್ಲಿ ಜನರ ಸಮಸ್ಯೆ ಅರಿತು ಶಾಸಕ ಕೆ.ಶಿವನಗೌಡ ನಾಯಕ, ಅವರ ತಾಯಿ ಆಶಯದಂತೆ ಕೆಎಸ್‌ಎನ್ ಅನ್ನದಾಸೋಹ ಕೇಂದ್ರ ತೆರೆದು ಬಡವರಿಗೆ ಊಟ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಹಟ್ಟಿಚಿನ್ನದಗಣಿ ನಿಗಮದ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಶಾಸಕ ಗೃಹ ಕಚೇರಿಯಲ್ಲಿ ಆರಂಭಿಸಿರುವ ಕೆಎಸ್‌ಎನ್ ಅನ್ನದಾಸೋಹ ಕೇಂದ್ರಕ್ಕೆ ಭೇಟಿ ನೀಡಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕ ಕೆ.ಶಿವನಗೌಡ ನಾಯಕರಂತೆ ಜಿಲ್ಲೆಯ ಎಲ್ಲ ಶಾಸಕರು ಅನ್ನದಾಸೋಹದಂಥ ಕಾರ್ಯಕ್ರಮ ಮಾಡಿದರೆ, ಜಿಲ್ಲೆಯ ಜನರಿಗೆ ಬಂದಿರುವ ಸಂಕಷ್ಟ ನಿವಾರಣೆಯಾಗಲಿದೆ. ಶಿವನಗೌಡರ ಕಾರ್ಯ ಮಾದರಿಯಾಗಿದ್ದು, ಹಿಂದೆ ಈ ತರಹ ಯಾರೂ ಮಾಡಿಲ್ಲ, ಮುಂದೆ ಮಾಡುವುದು ಕಷ್ಟವಿದೆ ಎಂದು ಬಣ್ಣಿಸಿದರು.
ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ಸತತ ತಿಂಗಳ ಪರ್ಯಾಂತ ಊಟ, ಕುಡಿವ ನೀರು, ಮಾಸ್ಕ್, ಮೊಟ್ಟೆ ವಿತರಣೆ ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ. ಲಾಕ್‌ಡೌನ್ ಸಮಯದಲ್ಲಿ ಜನರು ಕೂಲಿ, ಉದ್ಯೋಗವಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಜೀವನ ನಡೆಸುವುದು ಕಷ್ಟವಾಗಿದೆ. ಈ ಸಮಯದಲ್ಲಿ ಸಹಾಯ ಮಾಡಿದರೆ, ದೇವರು ಮೆಚ್ಚುತ್ತಾರೆ. ಶಿವನಗೌಡ ನಾಯಕರು ಇನ್ನೂ ಹೆಚ್ಚು ಹೆಚ್ಚು ದಾನ ಮಾಡುವ ಶಕ್ತಿ ದೇವರು ಕೊಡಲಿ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು, ಲಾಕ್‌ಡೌನ್‌ನಿಂದ ಸಮಸ್ಯೆ ಎದುರಿಸುತ್ತಿರುವ ಬಡವರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಪಡಿತರ ನೀಡುತ್ತಿದ್ದಾರೆ. ಅಲ್ಲದೆ ಸಂಕಷ್ಟಕ್ಕೆ ಗುರಿಯಾದ ಬಡವರಿಗೆ ಕರೊನಾ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಕರೊನಾ ಸಂಕಷ್ಟ ಅರಿತು ಹಟ್ಟಿಚಿನ್ನದಗಣಿ ಕಂಪನಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ೫ಕೋಟಿ ರೂ. ದೇಣಿಗೆ ನೀಡಲಾಗಿದೆ.
ಹಟ್ಟಿಚಿನ್ನದಗಣಿ ಕಂಪನಿಯಿಂದ ಹಟ್ಟಿಯಲ್ಲಿ ೧೦೦ ಬೆಡ್‌ಗಳ ಕೋವಿಡ್ ಕೇರ್ ಕೇಂದ್ರ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ೨೦೦ಬೆಡ್‌ಗಳ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ತೆರೆಯುವ ಗುರಿಯಿದೆ. ಜತೆಗೆ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನ್ ತೆರೆಯುವ ಯೋಚನೆಯಿದೆ. ಜಿಲ್ಲೆಯಲ್ಲಿ ಅಂಬ್ಯುಲೆನ್ಸ್ ಕೊರತೆಯಿದ್ದು, ಕಂಪನಿಯಿಂದ ಕೆಲ ವಾಹನ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಹಟ್ಟಿಚಿನ್ನದಗಣಿಗೆ ಸಹಕಾರ ನೀಡುತ್ತಿರುವ ಹೀರಾ, ಬುದ್ದಿನ್ನಿ, ಊಟಿ ಗ್ರಾಮಗಳಿಗೆ ಮೂಲಸೌಲಭ್ಯ ಕಲ್ಪಿಸಲಾಗುವುದು. ಕುಡಿವ ನೀರು, ಶಾಲಾ ಕಾಂಪೌಂಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಜತೆ ಅನ್ನದಾಸೋಹ ಕೇಂದ್ರ ಪರಿಶೀಲನೆ ನಡೆಸಿ, ಬೆಳಗಿನ ಉಪಾಹಾರ ಅವಲಕ್ಕಿ ಹೊಗ್ಗರಣೆ, ರೈಸ್ ಬಾತ್ ಸವಿದು, ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಕೆ.ಶಿವನಗೌಡ ನಾಯಕ, ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ, ಬಸವರಾಜ ಕೊಪ್ಪರ, ತಹಸೀಲ್ದಾರ್ ಮಧುರಾಜ್ ಯಾಳಗಿ, ಪಿಐ ಹನುಮಂತ ಸಣ್ಣಮನಿ, ಸಿಪಿಐ ಆರ್.ಎಂ.ನದಾಫ್ ಇತರರಿದ್ದರು.