ಎಲ್ಲ ವರ್ಗದವರಿಗೂ ನ್ಯಾಯ ಒದಗಿಸುವ ಬಜೆಟ್: ಬಬಲೇಶ್ವರ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.17:ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಹಣಕಾಸು ಸಚಿವರಾಗಿ ಅತಿ ಹೆಚ್ಚು ಬಾರಿ ಜನಪರ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಪರವಾದ ಬಜೆಟ್ ಮಂಡಿಸುವುದರ ಮೂಲಕ ಎಲ್ಲ ವರ್ಗದ ಜನರಿಗೂ ನ್ಯಾಯ ಕಲ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ. ರಾಜ್ಯದ ಜನರಿಗೆ ವಿವಿಧ ಭಾಗ್ಯಗಳನ್ನು ಕರುಣಿಸಿರುವ ಈ ಭಾಗ್ಯವಿಧಾತ ಅದು ಹೇಗೆ ಈ ರಾಜ್ಯವನ್ನು ಮುನ್ನಡೆಸಬಲ್ಲರು? ಎನ್ನುವ ಕುತೂಹಲಗಳೆಲ್ಲಕ್ಕೂ ತಮ್ಮ ಅಪಾರವಾದ ಆರ್ಥಿಕ ಕ್ಷೇತ್ರದ ಅನುಭವವನ್ನು ಧಾರೆ ಎರೆದು ಜನಮುಖಿ ಬಜೆಟ್ ಮಂಡಿಸಿದ್ದಾರೆ. ವಿಶೇಷವಾಗಿ ಬಸವ ನಾಡು ವಿಜಯಪುರ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ವಿನಂತಿಯ ಮೇರೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳ ಈ ಜನಪರ ಬಜೆಟ್‍ಗೆ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.