ಎಲ್ಲ ವಯಸ್ಕರು ಬೂಸ್ಟರ್ ಡೋಸ್ ಲಸಿಕೆ ಪಡೆಯಿರಿ

ವಾಷಿಂಗ್ಟನ್,ನ.೩೦- ಜಗತ್ತಿನಾದ್ಯಂತ ಒಮಿಕ್ರಾನ್ ರೂಪಾಂತರಿ ತಳಿ ತಲ್ಲಣ ಸೃಷ್ಟಿಸಿದೆ. ಇದರ ಬೆನ್ನಲ್ಲೆ ಅಮೆರಿಕದಲ್ಲಿ ಎಲ್ಲ ವಯಸ್ಕರಿಗೆ ಬೂಸ್ಟರ್ ಡೋಸ್ ಲಸಿಕೆ ಶಿಫಾರಸ್ಸು ಮಾಡಲಾಗಿದೆ.
೧೮ ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆಯುವಂತೆ ಅಮೆರಿಕದ ರೋಗನಿಯಂತ್ರಣ ಮತ್ತು ತಡೆಕೇಂದ್ರ ಶಿಫಾರಸ್ಸು ಮಾಡಿದೆ.
ಫೈಜರ್ ಮತ್ತು ಮಾರ್ಡೆನಾ ಲಸಿಕೆ ಪಡೆದವರು ೬ ತಿಂಗಳ ಬಳಿಕ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಪಡೆದವರು ೨ ತಿಂಗಳ ನಂತರ ಬೂಸ್ಟರ್ ಡೋಸ್ ಲಸಿಕೆ ಪಡೆಯುವಂತೆ ಸೂಚಿಸಿದೆ.
ಈ ಹಿಂದೆ ಎಲ್ಲ ವಯೋಮಾನದವರು ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಎಂದು ಅಮೆರಿಕ ಪ್ರಾಧಿಕಾರ ಘೋಷಿಸಿದ ಬಳಿಕ ಆರೋಗ್ಯ ನಿಯಂತ್ರಣಾ ಕೇಂದ್ರ ಈ ಆದೇಶ ಹೊರಡಿಸಿದೆ.
ಒಮಿಕ್ರಾನ್ (ಬಿ.೧.೧.೫೨೯) ಆತಂಕ ಸೃಷ್ಟಿಸಿರುವಾಗಲೇ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಮತ್ತು ಕೋವಿಡ್ ಸೋಂಕಿನಿಂದ ಸಂರಕ್ಷಣೆ ಪಡೆಯಲು ಅಗತ್ಯವಿರುವ ಮತ್ತು ಸೋಂಕು ಹರಡದಂತೆ ಪ್ರಾಮುಖ್ಯತೆ ನೀಡಲು ಅಮೆರಿಕ ಮುಂದಾಗಿದೆ.
ಅಮೆರಿಕದಲ್ಲಿ ಈಗಲೂ ೪.೭ ಕೋಟಿ ಜನರು ಲಸಿಕೆ ಪಡೆದಿಲ್ಲ. ಕೂಡಲೇ ಲಸಿಕೆ ಹಾಕಿಸಿಕೊಳ್ಳಬೇಕೆಂದು ಸಿಡಿಸಿ ನಿರ್ದೇಶಕ ರೋಚಲ್ ವಾಲೆನ್‌ಸ್ಕಿ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು.