ಎಲ್ಲ ಮತದಾರರು ಮತ ಚಲಾಯಿಸಬೇಕು

ಗದಗ, ಏ4 : ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಎಲ್ಲರಿಗೂ ಸಮಾನವಾದ ಮತದಾನ ಮಾಡುವ ಹಕ್ಕಿದೆ. ದೇಶದ ಸಂವಿಧಾನ ನಮಗೆಲ್ಲರಿಗೂ ನೀಡಿರುವ ಈ ಹಕ್ಕನ್ನು ಮರೆಯದೇ ಕಡ್ಡಾಯವಾಗಿ ಮತ ಚಲಾಯಿಸೋ ಮೂಲಕ ಸುವ್ಯವಸ್ಥಿತ ಆಡಳಿತ ರಚನೆಗೆ ಕಾರಣರಾಗೋಣ ಅಂತ ಚಿಕ್ಕನರಗುಂದ ಗ್ರಾಮ ಪಂಚಾಯತ ಪಿಡಿಓ ಕುಮಾರಿ ಶೈನಜಾ ಮುಜಾವರ ಹೇಳಿದರು.
ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಪಂ ಪಂಚಾಯತ ವ್ಯಾಪ್ತಿಯ ಚಿಕ್ಕನರಗುಂದ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆದ ಸಮುದಾಯ ಕಾಮಗಾರಿಯ ಬದು ನಿರ್ಮಾಣ ಕೆಲಸದ ಸಂದರ್ಭದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಂತರ ಮಾತನಾಡಿದ ಅವರು, ಮೇ 10 ರಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ. ಮತದಾನದ ದಿನದಂದು ನಿಮ್ಮ ನಿಮ್ಮ ಮಕ್ಕಳ ಭವಿಷ್ಯದ ದೃಷ್ಟಿಕೋನದಿಂದ ಕಡ್ಡಾಯವಾಗಿ ಮತದಾನ ಮಾಡಿ ಅಂತ ತಿಳಿಸಿದರು.
ನಮ್ಮ ಮತ ಮಾರಿಕೊಂಡರೇ ನಮ್ಮ ಆತ್ಮಸಾಕ್ಷಿಗೆ ನಾವು ದ್ರೋಹ ಬಗೆದಂತೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ನಿರ್ಭೀತಿಯಿಂದ ಮತದಾನ ಮಾಡಿ ಅಂತ ತಿಳಿಸಿದರು.
ಬೇಸಿಗೆ ಅವಧಿಯಲ್ಲಿ ಚುನಾವಣೆ ಬಂದಿರೋದ್ರಿಂದ ಹಿರಿಯ ನಾಗರೀಕರಿಗೆ ಮತ್ತು ದಿವ್ಯಾಂಗರಿಗೆ ಇದೇ ಮೊದಲ ಭಾರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮತದಾರರಿಗೆ ತಿಳಿಸಿದರು.
ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾ ವಿಧಿಯನ್ನು ತಾಲೂಕು ಪಂಚಾಯತ ನರೇಗಾ ವಿಭಾಗದ ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ ಬೋಧಿಸಿದರು. ಬಳಿಕ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ದಿನವೊಂದಕ್ಕೆ 316 ರೂಪಾಯಿ ನೀಡಲಾಗುತ್ತದೆ. ಬೇಸಿಗೆಯ ಅವಧಿಯಲ್ಲಿ ಕನಿಷ್ಟ 60 ದಿನಗಳವರೆಗೆ ನರೇಗಾದಲ್ಲಿ ಕೆಲಸ ಮಾಡಿದ ಕುಟುಂಬಕ್ಕೆ 18960 ರೂಪಾಯಿ ಕೂಲಿಮೊತ್ತ ಸಿಗುತ್ತದೆ. ಈ ಹಣವನ್ನು ಕೂಲಿಕಾರರು ಮುಂಗಾರು ಆರಂಭದಲ್ಲಿ ಕೃಷಿ ಚಟುವಟಿಕೆಗಳ ಬಳಕೆಗೆ ಸಹಾಯಕವಾಗುತ್ತದೆ ಅಂತ ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕನರಗುಂದ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಗ್ರಾಮಸ್ಥರು ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು.