ಎಲ್ಲ ಪ್ರಮಾಣದ ಕಬ್ಬನ್ನು ಸಕ್ಕರೆ ಕಾರ್ಖಾನೆಯವರುಸಾಗಾಣೆ ಮಾಡಿಕೊಳ್ಳುವಂತೆ ಕಬ್ಬು ಬೆಳೆದ ರೈತರ ಒತ್ತಾಯ

ವಿಜಯಪುರ :ನ.29: ಮುದ್ದೇಬಿಹಾಳದ ಬಾಲಾಜಿ ಸಕ್ಕರೆ ಕಾರ್ಖಾನೆಯವರು ಎಲ್ಲ ಪ್ರಮಾಣದ ಕಬ್ಬನ್ನು ಸಾಗಾಣೆ ಮಾಡಿಕೊಳ್ಳುವಂತೆ ಆಗ್ರಹಿಸಿ ಬಸವನ ಬಾಗೇವಾಡಿ ತಾಲೂಕಿನ ಕಾನ್ನಾಳ ಗ್ರಾಮದ ಕಬ್ಬು ಬೆಳೆದ ರೈತರು ಇಂದು ಉಪ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವಿಜುಪುರ ಇವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತರ ಹಿತಚಿಂತಕ, ರೈತ ಹೋರಾಟಗಾರ, ಅಖಂಡ ಕರ್ನಾಟಕ ರೈತ ಸಂಘ (ರಿ), ಜಿಲ್ಲಾ ಘಟಕ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡುತ್ತ, ಬಸವನ ಬಾಗೇವಾಡಿ ತಾಲೂಕಿನ ಕಾನ್ನಾಳ ಗ್ರಾಮದ ಕಬ್ಬು ಬೆಳೆದ ರೈತರು ಕಾನ್ನಾಳ ಗ್ರಾಮದಲ್ಲಿ ಈ ವರ್ಷವೂ ಕೂಡ ಅಂದಾಜು 150 ರಿಂದ 200 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಪ್ರತಿವರ್ಷವೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆದು ಮುದ್ದೇಬಿಹಾಳದ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಸಾಗಾಣೆ ಮಾಡುತ್ತಿದೆ. ಈ ಭಾರಿ ಭೀಕರ ಬರಗಾಲದ ನಡುವೆಯು ಕೂಡ ರೈತರು ಕಬ್ಬು ಬೆಳೆಯಲಾಗಿದೆ. ಆದರೆ ಈ ವರ್ಷ ಕಾರ್ಖಾನೆಯವರು ಎತ್ತರ ಮಟ್ಟದಲ್ಲಿ ಬೆಳೆದ ಹಾಗೂ ದಪ್ಪಗಿರುವ ಕಬ್ಬನ್ನು ಮಾತ್ರ ಕಾರ್ಖಾನೆಗೆ ತೆಗೆದುಕೊಂಡು ಹೋಗುತ್ತಿದ್ದು ಸ್ವಲ್ಪ ಪ್ರಮಾಣದಲ್ಲಿ ಎತ್ತರದಲ್ಲಿ ಕಡಿಮೆ ಇದ್ದ ಕಬ್ಬನ್ನು ಸಾಗಾಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಸಕಾಲಕ್ಕೆ ಮಳೆಯಾಗದೆ ಇರುವುದರಿಂದ ಕಬ್ಬು ಬೆಳವಣಿಗೆಯಲ್ಲಿ ಸ್ವಲ್ಪ ಕುಂಠಿತವಾಗಿದೆ ಇದನ್ನೇ ನೆಪವಾಗಿಟ್ಟುಕೊಂಡು ಕಾರ್ಖಾನೆಯ ಸೂಪರ್ ವೈಸರ್‍ಗಳು ನೀವು ಸರಿಯಾಗಿ ನೀರು ಉಣಿಸಿ ಎಂದು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಇಲ್ಲದಿದ್ದರೆ ನೀರು ಉಣಿಸುವುದಾದರೂ ಎಲ್ಲಿಂದ? ಇದರಿಂದ ಕಾರ್ಖಾನೆಯವರು ಕಬ್ಬು ಬೆಳೆದ ರೈತರಿಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಬರಗಾಲದಿಂದ ತತ್ತರಿಸಿದ ಕಬ್ಬು ಬೆಳೆದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಬಾಲಾಜಿ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಉಳಿದ ಕಬ್ಬನ್ನು ಕೂಡ ಸಾಗಾಣೆ ಮಾಡಲು ಕಟ್ಟುನಿಟ್ಟಿನ ಆದೇಶ ಮಾಡಬೇಕು ಮತ್ತು ಉತ್ತಮವಾಗಿರುವಂತಹ ಕಟ್ಟನ್ನು ಸಾಗಾಣೆ ಮಾಡಲು ನಾಲ್ಕು ಗ್ಯಾಂಗ್‍ಗಳು ಇರುತ್ತವೆ. ಆದರೆ ಸಣ್ಣ ಪ್ರಮಾಣದ ಕಬ್ಬಿಗೆ ಗ್ಯಾಂಗ್‍ಗಳು ಬರುತ್ತಿಲ್ಲ. ಗ್ಯಾಂಗಿನವರು ಪ್ರತಿ ಎಕರೆಗೆ ಕನಿಷ್ಠ 5 ರಿಂದ 6 ಸಾವಿರ ರೂ.ಲಗಾನೆ ಕೇಳುತ್ತಾರೆ. ಇದರಿಂದ ತುಂಬಾ ತೊಂದರೆಯಾಗಿದೆ. ಆದ್ದರಿಂದ ಎಲ್ಲ ಪ್ರಮಾಣದ ಕಬ್ಬನ್ನು ಸಾಗಿಸಲು ಕಡ್ಡಾಯವಾಗಿ ಗ್ಯಾಂಗ್‍ನ್ನು ಒದಗಿಸುವಂತಾಗಬೇಕು. ಹಾಗೂ ಒಂದು ವೇಳೆ ಸಾಧ್ಯವಾಗದಿದ್ದರೆ ಕಾರ್ಖಾನೆ ವತಿಯಿಂದ ಕಬ್ಬು ಕಟಾವು ಮಶೀನನ್ನು ರೈತರಿಗೆ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜಶೇಖರ ಸಜ್ಜನ, ಸಂಗಪ್ಪ ಸಜ್ಜನ, ಸತೀಶ ಸಜ್ಜನ, ಸೋಮೇಶ ಶ.ನಾಗರೆಡ್ಡಿ, ಶಿವನಗೌಡ ಮೇಟಿ, ಬಲವಂಪ್ಪ ಶೇಟರ, ಸಂಗಪ್ಪ ಸಜ್ಜನ, ಶಿವಶರಣ ನಾಗರೆಡ್ಡಿ, ಸಂಗಮೇಶ ಸಜ್ಜನ, ಬಸರಡ್ಡಿ, ನಾಗರೆಡ್ಡಿ, ಸಿಂದೂರ ಪೂಜಾರಿ, ಶ್ರವಣ ಇನ್ನಿತರರು ಉಪಸ್ಥಿತರಿದ್ದರು.