ಎಲ್ಲ ದಾನಗಳಿಗಿಂತ ರಕ್ತದಾನ ಮಿಗಿಲಾದುದು: ಹೆಚ್.ವಿ.ರಾಜೀವ್

ಮೈಸೂರು, ಡಿ.20: ಅನ್ನ, ಧನ, ವಿದ್ಯೆದಾನಗಳಿಗಿಂತ ರಕ್ತದಾನ ಬಹಳ ಮಿಗಿಲಾದುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಅಭಿಪ್ರಾಯ ಪಟ್ಟರು.
ಅವರು ಇಂದು ಬೆಳಿಗ್ಗೆ ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಆಚಾರ್ಯ ತುಳಸಿ ಡೈಯಾಗ್ನಸ್ಟಿಕ್ ಸೆಂಟರ್ ಅಂಡ್ ಡೆಂಟಲ್ ಕ್ಲಿನಿಕ್‍ನಲ್ಲಿ ತಾರಾಪಂಥ್ ಯುವಕ ಪರಿಷದ್ ವತಿಯಿಂದ ಆಯೋಜಿಸಿದ್ದ ರಕ್ತದಾನ, ನೇತ್ರ ತಪಾಸಣೆ ಮತ್ತು ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿದ್ದು ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ರಕ್ತ ನೀಡಿದರೆ ಅವರ ಅಮೂಲ್ಯ ಜೀವವನ್ನು ಉಳಿಸಿದಂತಾಗುತ್ತದೆ. ಹಾಗಾಗಿ ರಕ್ತದಾನ ಇತರ ಎಲ್ಲಾ ದಾನಗಳಿಗಿಂತ ಮಿಗಿಲಾದುದು ಎಂದು ರಾಜೀವ್ ಹೇಳಿದರು.
ತೇರಾಪಂಥ್ ಯುವಕ್ ಪರಿಷದ್ ಸಾರ್ವಜನಿಕರ ಸೇವೆಗಾಗಿ ಕಳೆದ ಕೆಲವು ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದು ಪ್ರತಿವರ್ಷ ರಕ್ತದಾನ ಶಿಬಿರ, ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕಡು ಬಡ ಜನತೆಯನ್ನು ಸ್ಪಂದಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದ ರಾಜೀವ್ ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಪರಿಷದ್‍ನ ಪದಾಧಿಕಾರಿಗಳಲ್ಲಿ ರಾಜೀವ್ ಮನವಿ ಮಾಡಿದರು.
ಇಂದಿನ ಕಾರ್ಯಕ್ರಮದಲ್ಲಿ ತೇರಾಪಂಥ್ ಯುವಕ ಪರಿಷದ್‍ನ ಕಾರ್ಯದರ್ಶಿ ವಿನೋದ್ ಜೈನ್ ಮುನೌಥ್, ಯೋಜನಾ ನಿರ್ದೇಶಕ ಸುರಿಲ್ ದೇರಾಸಾರಿಯಾ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ 300ಕ್ಕೂ ಹೆಚ್ಚು ಮಂದಿಯ ಆರೋಗ್ಯ ಮತ್ತು ನೇತ್ರ ತಪಾಸಣೆ ಮಾಡಲಾಯಿತು. 50ಕ್ಕೂ ಹೆಚ್ಚು ಮಂದಿ ಯುವಕರು ರಕ್ತದಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತೇರಾಪಂಥ್ ಯುವಕ ಪರಿಷದ್‍ನ ಅಧ್ಯಕ್ಷ ದಿನೇಶ್ ಜೈನ್ ಡಾಕ್ ಮಾತನಾಡಿ ಇಂದು ಸಂಗ್ರಹಿಸಲಾಗಿರುವ ರಕ್ತವನ್ನು ಅಗತ್ಯ ಇರುವ ರೋಗಿಗಳಿಗೆ ಮಾತ್ರ ನೀಡಲಾಗುವುದು. ಇದನ್ನು ಯಾವ ರೀತಿಯಲ್ಲೂ ದುರುಪಯೋಗವಾಗದಂತೆ ಎಚ್ಚರ ವಹಿಸಲಾಗುವುದು ತಿಳಿಸಿದ ದಿನೇಶ್ ಜೈನ್ ಡಾಕ್ ಇಂದು ರಕ್ತದಾನ ಮಾಡಿದ ಯುವಕರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.