ಎಲ್ಲ ದಾನಗಳಲ್ಲಿ ರಕ್ತದಾನ ಸರ್ವ ಶ್ರೇಷ್ಠ: ಡಾ. ಸಂಜೀವ್ ಎಂ.ವೈ. ಪಾಟೀಲ್

ಅಫಜಲಪುರ : ಮಾ.6:ಎಲ್ಲಾ ದಾನಗಳಲ್ಲಿ ರಕ್ತದಾನ ಅತೀ ಶ್ರೇಷ್ಠವಾಗಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಡಾ. ಸಂಜೀವಕುಮಾರ್ ಎಂ.ವೈ. ಪಾಟೀಲ್ ಅವರು ಹೇಳಿದರು.
ಪಟ್ಟಣದ ಶ್ರೀ ಮಳೆಂದ್ರ ಸಂಸ್ಥಾನ ಹಿರೇಮಠದಲ್ಲಿ ಇದೆ ತಿಂಗಳ ಮಾರ್ಚ್ 9 ಮತ್ತು 10 ರಂದು ನಡೆಯುವ ಲಿಂಗ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಕಲ್ಯಾಣ ಮಂಟಪದ ಉದ್ಘಾಟನೆ ನಿಮಿತ್ಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬಸವೇಶ್ವರ್ ಆಸ್ಪತ್ರೆ ಮತ್ತು ಕಲಬುರ್ಗಿ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ನಿಜಲಿಂಗಪ್ಪ ದಂತ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಸುಮಾರು ವರ್ಷಗಳಿಂದ ಘೋಷ ವಾಕ್ಯದೊಂದಿಗೆ ಹೇಳುತ್ತಿದ್ದೇವೆ. ತುರ್ತು ಪರಿಸ್ಥಿತಿಯಲ್ಲಿ ನಮಗೆ ಶೀಘ್ರದಲ್ಲಿ ರಕ್ತ ಸಿಗಬೇಕಾದರೆ ಕಷ್ಟವಾಗುತ್ತದೆ ಎಂದರು.
ರಕ್ತಗಳಲ್ಲಿ ನಾಲ್ಕು ಗುಂಪುಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಓ ಪಾಸಿಟಿವ್, ಬಿ ಪಾಸಿಟಿವ್ ರಕ್ತವು ಸಾಮಾನ್ಯವಾಗಿ ಸಿಗುತ್ತದೆ. ನೆಗೆಟಿವ್ ಗುಂಪಿನ ರಕ್ತ ಅವಶ್ಯಕತೆ ಹೆಚ್ಚು ಇದೆ. ಬಹಳ ಕಡಿಮೆ ಜನರಲ್ಲಿ ನೆಗೆಟಿವ್ ಗ್ರೂಪ್ ಇರುತ್ತದೆ. ಓ ನೆಗೆಟಿವ್ ಎಬಿ ನೆಗೆಟಿವ್ ಇಂತಹ ಗ್ರೂಪ್‍ನವರು ಇಂತಹವರು ಬಹಳ ಜನ ವಿರಳವಾಗಿರುತ್ತಾರೆ. ನಾವು ಇಂತಹ ಒಂದು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಾಗ ಶಿಬಿರದಲ್ಲಿ ಸುಮಾರು 25 ಜನರಲ್ಲಿಯಾದರೂ ಇಂತಹವರು ಇದ್ದೇ ಇರುತ್ತಾರೆ. ಅಂಥವರ ರಕ್ತವನ್ನು ಮುಂದಿನ ದಿನಗಳಲ್ಲಿ ಯಾರಿಗಾದರೂ ಅಪಘಾತವಾದಾಗ ದೊಡ್ಡ ಶಸ್ತ್ರ ಚಿಕಿತ್ಸೆ ಇರಬಹುದು, ಮಕ್ಕಳಿಗೆ ತೊಂದರೆಯಾಗಿರಬಹುದು. ಅಂತಹ ಸಂದರ್ಭದಲ್ಲಿ ಇದರ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ರಕ್ತದಾನ ಮಾಡಿದರೆ ಜೀವ ಉಳಿಸಿದ ಉಪಕಾರ ಸಿಗುತ್ತದೆ. ಅಲ್ಲದೇ ಹೆಮ್ಮೆಯೂ ಆಗುತ್ತದೆ. ಅದಕ್ಕಾಗಿ ಯಾರು ಬೇಕಾದರೂ ರಕ್ತದಾನ ಮಾಡಬಹುದು. 60 ವರ್ಷದೊಳಗಿನ ವ್ಯಕ್ತಿಗಳಿಂದ ಹಿಡಿದು 18 ವರ್ಷ ಮೇಲ್ಪಟ್ಟವರು ರಕ್ತದಾನ ಮಾಡಿದರೆ ಒಳ್ಳೆಯದು. ಅಲ್ಲದೇ ಪ್ರತಿ ಮನುಷ್ಯನ ದೇಹದಲ್ಲಿ 5 ರಿಂದ 6 ಲೀಟರ್‍ವರೆಗೆ ರಕ್ತ ಶೇಖರಣೆಯಾಗುತ್ತದೆ. ಇದರಿಂದ ಶಿಬಿರದಲ್ಲಿ ವೈದ್ಯರು ರಕ್ತ ತೆಗೆದುಕೊಳ್ಳುವುದು ಕೇವಲ 300 ಮಿಲಿ ಲೀಟರ್ ಮಾತ್ರ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಅದು ಸಾಧ್ಯವಾಗದಿದ್ದರೆ ಒಂದು ವರ್ಷಕ್ಕೆ ಒಂದು ಸಲವಾದರೂ ರಕ್ತದಾನ ಮಾಡಬೇಕು. ಹೀಗೆ ರಕ್ತದಾನ ಮಾಡಿದಾಗ ನಮ್ಮಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಹೀಗಾಗಿ ನಮ್ಮ ಆರೋಗ್ಯವೂ ಕೂಡ ಸದೃಢವಾಗುತ್ತದೆ ಎಂದು ಅವರು ತಿಳಿಸಿದರು.
ಇಂದಿನ ಒತ್ತಡದ ಜೀವನದಲ್ಲಿ ಎಲ್ಲರೂ ಒಂದಿಲ್ಲ ಒಂದು ಕಾಯಿಲೆಗೆ ಸಿಲುಕುತ್ತಿದ್ದು, ಕಾಯಿಲೆಗಳಿಂದ ಗುಣಮುಖರಾಗಲು ಆಗಾಗ ವೈದ್ಯರ ಸಲಹೆ ಅತ್ಯಗತ್ಯವಾಗಿದೆ. ಹೀಗಾಗಿ ಬಡ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಕಾಲು, ಕೀಲು ನೋವು, ಕಣ್ಣಿನ ಸಮಸ್ಯೆ, ಬಿಪಿ, ಶುಗರ್ ಸೇರಿದಂತೆ ಹಲವು ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದು ಬಹುತೇಕ ಕುಟುಂಬಗಳು ಆರ್ಥಿಕ ಸಮಸ್ಯೆಗಳಿಂದ ದೂರದ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲು ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಬದಲಾದ ಜೀವನ ಶೈಲಿ ಮತ್ತು ಒತ್ತಡ ಬದುಕಿನಲ್ಲಿ ಇಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಕಾಯಿಲೆ ಬರುವ ಮುನ್ನವೇ ಎಚ್ಚರವಹಿಸಿದರೆ ಆಸ್ಪತ್ರೆ, ಗುಳಿಗೆಗಳ ಮುಂತಾದ ಕಷ್ಟಗಳಿಂದ ಪಾರಾಗಬಹುದು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಆರೋಗ್ಯ ಇದ್ದರೆ ನಾವು ಸುಖವಾಗಿ ಬಾಳಬಹುದು. ಕಷ್ಟಪಟ್ಟು ದುಡಿದ ಹಣವನ್ನು ಆಸ್ಪತ್ರೆಗೆ ಸುರಿಯುವ ಬದಲಿಗೆ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಜಾಣತನವಾಗಿದೆ ಎಂದು ಅವರು ತಿಳಿಸಿದರು.
ಶಿಬಿರದಲ್ಲಿ ಫಿಜಿಷಿಯನ್, ಪ್ರಸೂತಿ ತಜ್ಞರು, ಶಸ್ತ್ರ
ಚಿಕಿತ್ಸಾ ವಿಭಾಗ, ಎಲುಬು ಮತ್ತು ಕೀಲು ತಜ್ಞರು, ಚರ್ಮರೋಗ ತಜ್ಞರು, ಕಿವಿ, ಮೂಗು, ಗಂಟಲು ವಿಭಾಗ ನೇತ್ರ ತಜ್ಞರು, ರೇಡಿಯೋಲಾಜಿ, ದಂತ ವೈದ್ಯರು, ಲ್ಯಾಬ್, ರಕ್ತದಾನ, ಔಷಧ ವಿಭಾಗ ಹೀಗೆ ಸುಮಾರು 25 ಕ್ಕೂ ಹೆಚ್ಚು ವೈದ್ಯರೂ ಸೇರಿದಂತೆ 66 ಕ್ಕೂ ಹೆಚ್ಚು ಆರೋಗ್ಯ ಇಲಾಖೆ ಸಿಬ್ಬಂದಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. 11 ವಿಭಾಗಗಳನ್ನಾಗಿ ಕೌಂಟರ್ ತೆರೆಯಲಾಗಿದೆ. ರೋಗಿಗಳಿಗೆ ಔಷಧಿಗಳೂ ಸೇರಿದಂತೆ ಇತರೆ ಶಸ್ತ್ರಚಿಕಿತ್ಸೆ ಯಾವುದೇ ನಯಾಪೈಸೆ ಖರ್ಚಾಗದಂತೆ ಆರೋಗ್ಯ ಸೇವೆ ಒದಗಿಸಲಾಗುವುದು ಎಂದು ಅವರು ಹೇಳಿದರು.
ಸಾನಿಧ್ಯ ವಹಿಸಿದ್ದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಆರೋಗ್ಯಕ್ಕೆ ಮಿಗಿಲಾದದ್ದು ಯಾವುದೂ ಇಲ್ಲ. ಮನುಷ್ಯನ ಜೀವನದಲ್ಲಿ ಆರೋಗ್ಯ ಭಾಗ್ಯಕ್ಕಿಂತ ಮಹಾಭಾಗ್ಯ ಬೇರೊಂದಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಸತತವಾಗಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಬಡ ಜನರಿಗೆ ಆರೋಗ್ಯದ ಅನುಕೂಲ ಮಾಡಿಕೊಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಶ್ರೀಮತಿ ರೇಣುಕಾ ಸಿಂಗೆ, ಪುರಸಭೆ ಮಾಜಿ ಸದಸ್ಯೆ ನೇಮಿನಾಥ್ ಅಂಬೂರೆ, ನ್ಯಾಯವಾದಿ ಎಸ್.ಎಸ್. ಪಾಟೀಲ್, ಅನಿಲ್ ಕಾಚಾಪುರ್, ಮಲ್ಲಯ್ಯ ಹೊಸಮಠ್, ಸಿದ್ದು ವಾಳಿ, ಪ್ರಕಾಶ್ ಕಲಕೇರಿ, ಚಿದಾನಂದ್ ಮಠ್ ಮಂಗಳೂರು, ಪಿಆರ್‍ಓ ಮುಂತಾದವರು ಉಪಸ್ಥಿತರಿದ್ದರು.