ಎಲ್ಲ ತಾಲೂಕು ಕೇಂದ್ರಗಳಲ್ಲೂ ವಾಕಥಾನ್ ಕಾರ್ಯಕ್ರಮ ಆಯೋಜನೆ: ಡಿ.ಸಿ

ಬೀದರ್: ಮಾ.29:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಆ ಪ್ರಭುಗಳಿಗೆ ತಮ್ಮ ಹಕ್ಕಿನ ಅರಿವು ಅಗತ್ಯವಾಗಿದ್ದು, ಬರುವ ಲೋಕಸಭೆ ಚುನಾವಣೆಯಲ್ಲಿ ಶತ ಪ್ರತಿಶತ ಮತದಾನ ಆಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಆಯಾ ತಾಲೂಕು ಅಡಳಿತದ ಜೊತೆ ಕೈ ಜೋಡಿಸಿ ಎಲ್ಲ ತಾಲೂಕುಗಳಲ್ಲಿಯೂ ಮತದಾನ ಜಾಗೃತಿಗಾಗಿ ವಾಕಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಶುಕ್ರವಾರ ನಗರದ ಬರೀದ್ ಶಾಹಿ ಉದ್ಯಾನವನದಿಂದ ನೆಹರು ಸ್ಟೇಡಿಯಮ್ ವರೆಗೆ ಜರುಗಿದ ಮತದಾನ ಜಾಗೃತಿಗಾಗಿನ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬರುವ ಲೋಕಸಭೆ ಚುನಾವಣೆಯಲ್ಲಿ ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕು. ಅಕ್ಕಪಕ್ಕದವರಿಗೂ ಮತದಾನ ಕುರಿತು ತಿಳಿ ಹೇಳಬೇಕು ಎಂದರು.
ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ.ಎಸ್.ಎಲ್ ಮಾತನಾಡಿ, ಮತದಾನ ಮಾಡುವುದು ಈ ದೇಶದ ಪ್ರತಿಯೊಬ್ಬ ಜವಾಬ್ದಾರಿ ನಾಗರಿಕರ ಕರ್ತವ್ಯ. ಹೆಚ್ಚೆಚ್ಚು ಮತದಾನ ಮಾಡಿ ಬಲಿಷ್ಟ ಪ್ರಜಾಪ್ರಭುತ್ವ ನಿರ್ಮಾಣವಾಗಲು ಕೈಜೋಡಿಸಬೇಕಿದೆ. ಸ್ವೀಪ್ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಸಕ್ತಿ ತೋರಿರುವುದು ಉತ್ತಮ ಬೆಳವಣಿಗೆ. ವಾಕಥಾನ್ ಕಾರ್ಯಕ್ರಮದಲ್ಲಿ ನಮ್ಮ ಪೋಲಿಸ್ ಇಲಾಖೆಯ ಎಲ್ಲ ಸಿಬ್ಬಂದಿಗಳು, ಎಲ್ಲ ಸ್ತರದ ಅಧಿಕಾರಿಗಳು, ವಿಶೇಷವಾಗಿ ಶ್ವಾನಗಳು ಭಾಗವಹಿಸಿ ಜಿಲ್ಲೆಯ ಜನರಿಗೆ ಹೊಸ ಸಂದೇಶ ರವಾನಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ ಬದೌಲೆ ಮಾತನಾಡಿ, ಈ ಸ್ವೀಪ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾವುದೇ ಸಂಕೋಚ ಇಲ್ಲ;ದೇ ಭಾಗವಹಿಸಿ ಯಶಸ್ವಿ ಮಾಡಿರುತ್ತಾರೆ. ಒಟ್ಟಾರೆ ಜಿಲ್ಲೆಯಲ್ಲಿ ಈ ವರ್ಷ ಲೋಕಸಭೆ ಚುನಾವಣೆಯಲ್ಲಿ ಶತ ಪ್ರತಿಶತ ಮತದಾನ ಆಗಬೇಕೆಂಬ ಗುರಿ ನಮ್ಮದಿದೆ. ಅದಕ್ಕಾಗಿ ವಿಭಿನ್ನ ಸ್ವೀಪ್ ಕಾರ್ಯಕ್ರಮಗಳು ಜರುಗಲಿವೆ. ಇಂದು ವಾಕಥಾನ್ ಕಾರ್ಯಕ್ರಮ ಜರುಗಿದ್ದು, ಕ್ರೀಕೇಟ್ ಪಂದ್ಯಾವಳಿ ಸಹ ನಡೆಯಿತು ಎಂದರು.
ಈ ಸಂದರ್ಭದಲ್ಲಿ ಮತದಾನ ಜಾಗೃತಿಗಾಗಿ ಈ ವರ್ಷದ ಘೋಷಣೆಯಾದ ‘ಚುನಾವಣೆ ಪರ್ವ ದೇಶದ ಗರ್ವ’ ಎಂಬ ಶ್ಲೋಗನ್ ಸಾಮೂಹಿಕವಾಗಿ ಹೇಳಲಾಯಿತು. ಶತ ಪ್ರತಿಶತ ಮತದಾನಕ್ಕಾಗಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಜರುಗಿತು. ಹಾಗೇ ನಾಲ್ಕು ಚುನಾವಣೆ ಆ್ಯಪ್‍ಗಳಾದ ಈವಿಸಿಲ್, ಕೆ.ವಾಯ್.ಸಿ, ಓಟರ್ ಹೆಲ್ಪಲೈನ್ ಹಾಗೂ 1950ಟೋಲ್ ಫ್ರಿ ಸಂಖ್ಯೆ ಎಂಬ ತಂಡಗಳನ್ನು ಮಾಡಿ ಎಲ್ಲ ಅಧಿಕಾರಿಗಳಿನ್ನು ಸೇರಿಸಿ ಸ್ವೀಪ್ ಜಾಗೃತಿಗಾಗಿ ಕ್ರಿಕೇಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಯಿತು.
ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗೌತಮ ಅರಳಿ ಕಾರ್ಯಕ್ರಮ ನಿರೂಪಿಸಿದರು.