ಎಲ್ಲ ಜ್ಞಾನ ಶಿಸ್ತುಗಳ ಓದು ವೈಚಾರಿಕತೆ ಹೆಚ್ಚಿಸುತ್ತದೆ : ಡಾ. ಅಪ್ಪಗೆರೆ

ಶಹಾಪೂರ:ಸೆ.14:ಓದು ವಿಸ್ತಾರವಾದಂತೆ ವೈಚಾರಿಕ ಪ್ರಜ್ಞೆ ಬೆಳೆಯುತ್ತದೆ. ಪ್ರತಿಯೊಂದು ಜ್ಞಾನ ಶಿಸ್ತುಗಳು ವೈಚಾರಿಕತೆಯನ್ನು ಪ್ರತಿಪಾದಿಸುತ್ತವೆ ಎಂದು ಕಲಬುರ್ಗಿ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ ಅವರು ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಭೀಮರಾಯನಗುಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಹಾಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ ಕಾಲೇಜು ಅಂಗಳದಲ್ಲಿ ಸಾಹಿತ್ಯ ಚಿಂತನೆ ಕಾರ್ಯಕ್ರಮದಲ್ಲಿ “ಕನ್ನಡ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ಶರಣರ, ಸೂಫಿ ಸಂತರ, ತತ್ವಪದಕಾರರ, ಕೀರ್ತನಕಾರರ, ಸಾಹಿತ್ಯ ಚಿಂತನಗಳಲ್ಲಿ ಸೌಹಾರ್ದತೆ, ಧಾರ್ಮಿಕ ಸಾಮರಸ್ಯೆ, ಸಹಿಷ್ಣುತೆ, ಸಮಾನತೆಯ ವಿಚಾರಗಳು ಮತ್ತು ವೈಚಾರಿಕತೆ ನೆಲೆಗಳು ಕಂಡುಬರುತ್ತವೆ. ಇಂತಹ ಚಿಂತನೆಗಳ ಮೂಲಕ ಜನರಲ್ಲಿ ವೈಚಾರಿಕತೆಯ ವಿವೇಕವನ್ನು ಮೂಡಿಸಿದ್ದಾರೆ. ಸಾಹಿತ್ಯ ಪರಂಪರೆಯ ಎಲ್ಲಾ ಪ್ರಕಾರಗಳಲ್ಲಿ ವೈಚಾರಿಕ ಪ್ರಜ್ಞೆಯ ಚಿಂತನೆಗಳು ಕಾಣಬಹುದು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮುಂತಾದ ಮಹಾತ್ಮರ ತತ್ವ ವಿಚಾರಗಳಲ್ಲಿನ ವೈಚಾರಿಕತೆಯನ್ನು ವಿದ್ಯಾರ್ಥಿಗಳು ಓದಿಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ದೇವಿಂದ್ರಪ್ಪ ಮಡಿವಾಳಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಓದಿನ ಆಸಕ್ತಿ ಮೂಡಿಸುತ್ತಿರುವ ತಾಲೂಕ ಕನ್ನಡ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು. ನಿಕಟಪೂರ್ವ ಕ.ಸಾ.ಪ. ಅಧ್ಯಕ್ಷ ಸಿದ್ಧಲಿಂಗಣ್ಣ ಆನೆಗುಂದಿ ವಿದ್ಯಾರ್ಥಿ ಯುವಸಮುದಾಯ ವೈಚಾರಿಕ ಮನೋಭಾವನೆ ಬೆಳೆಸಿಕೊಳ್ಳಲು ಕರೆ ನೀಡಿದರು.
ಕ.ಸಾ.ಪ. ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ಅಬ್ದುಲ್ ಕರೀಂ ಕನ್ಯಾಕೋಳುರು, ಕೋಶಾಧ್ಯಕ್ಷ ಶಂಕರ ಹುಲಕಲ್ (ಕೆ), ಗೌರವ ಕಾರ್ಯದರ್ಶಿ ರಾಘವೇಂದ್ರ ಹಾರಣಗೇರಾ, ಉಪನ್ಯಾಸಕರಾದ ರಾಮಚಂದ್ರರಾವ್ ಗುಂಡೇಕರ್, ಶಿವಾನಂದ, ಶಿವುಕುಮಾರ, ವರ್ಷಾ, ದಯಾನಂದ, ಅಶ್ವಿನಿ, ರೀನಾ ರಮೇಶ, ಮಾನಪ್ಪ, ಭೀಮಶಂಕರ ಮುಂತಾದವರು ಉಪಸ್ಥಿತರಿದ್ದರು.