ಎಲ್ಲ ಜಿಲ್ಲೆಗಳಲ್ಲಿ ಮೇಕ್‌ಶಿಫ್ಟ್ ಆಸ್ಪತ್ರೆ ಸ್ಥಾಪನೆ


ಬೆಂಗಳೂರು, ಏ. ೨೫- ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಐಸಿಯು ಮತ್ತು ವೆಂಟಿಲೇಟರ್ ಒಳಗೊಂಡಿರುವ ಮೇಕ್‌ಶಿಫ್ಟ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು. ಬೆಂಗಳೂರಿನಲ್ಲಿ ೨೫೦೦ ಐಸಿಯು ಬೆಡ್‌ಗಳು ತಾತ್ಕಾಲಿಕ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಮೈಲ್ಡ್ ಸೋಂಕಿತರಿಗೆ ಆಕ್ಸಿಜನ್ ಒದಗಿಸಲು ಪೋರ್ಟಬಲ್ ಉಪಕರಣಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಬೆಂಗಳೂರಿಗೆ ೫ ಸಾವಿರ ಹಾಗೂ ಪ್ರತಿ ಜಿಲ್ಲೆಗೆ ೧ ಸಾವಿರ ಪೋರ್ಟಬಲ್ ಆಕ್ಸಿಜನ್ ಉಪಕರಣಗಳನ್ನು ಒದಗಿಸುವುದಾಗಿ ಅವರು ಹೇಳಿದರು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ಪೆಗೆ ಭೇಟಿ ನೀಡಿ ಅಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿರ್ಮಾಣವಾಗಲಿರುವ ಮೇಕ್ ಶಿಪ್ಟ್ ಐಸಿಯು ಆಸ್ಪತ್ರೆಯ ಸ್ಥಳವನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ವಿದೇಶದಿಂದ ಪೋರ್ಟಬಲ್ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ೫ ಸಾವಿರಕ್ಕೂ ಹೆಚ್ಚು ಐಸಿಯು ವೆಂಟಿಲೇಟರ್ ಹಾಸಿಗೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಖಾಸಗಿ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಶೇ. ೮೦ ರ ಹಾಸಿಗೆ ಬದಲಿಗೆ ಶೇ. ೭೫ ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಮೀಸಲಿಡಲು ಆದೇಶ ಹೊರಡಿಸಲಾಗಿದೆ ಎಂದರು.
ಈ ಮೊದಲು ಶೇ. ೮೦ ರಷ್ಟು ಹಾಸಿಗೆ ಮೀಸಲಿರಿಸಲು ತೀರ್ಮಾನಿಸಲಾಗಿತ್ತು. ಆದರೆ ನಾನ್ ಕೋವಿಡ್ ರೋಗಿಗಳು ಮತ್ತು ತುರ್ತು ಚಿಕಿತ್ಸೆಯ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ಶೇ. ೭೫ ರಷ್ಟು ಹಾಸಿಗೆಗಳನ್ನು ಒದಗಿಸುವಂತೆ ಖಾಸಗಿ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದರು.
ರಾಜ್ಯಕ್ಕೆ ಅಗತ್ಯವಾದ ಆಕ್ಸಿಜನ್ ಮತ್ತು ರೆಮಿಡಿಸಿವಿರ್ ಔಷಧಿಯನ್ನು ಪೂರೈಸಲು ಕೇಂದ್ರ ಒಪ್ಪಿದೆ. ಏಪ್ರಿಲ್ ೩೦ರ ವರೆಗೆ ೮೦೦ ಟನ್ ಆಕ್ಸಿಜನ್ ಮತ್ತು ೧.೨೨ ಲಕ್ಷ ರೆಮಿಡಿಸಿವಿರ್ ಔಷಧಿಗಳು ಪೂರೈಕೆಯಾಗಲಿವೆ. ಹಾಗಾಗಿ ರಾಜ್ಯದಲ್ಲಿ ಆಕ್ಸಿಜನ್ ಆಗಲೀ, ಔಷಧಿಯ ಕೊರತೆಯಾಗಲೀ ಆಗುವುದಿಲ್ಲ ಎಂದು ಅವರು ಹೇಳಿದರು.