ಎಲ್ಲೆ ಮೀರಿತು ಸೋಲು- ಗೆಲುವಿನ ಲೆಕ್ಕಾಚಾರ:ಜೂ.4 ರ ಫಲಿತಾಂಶದತ್ತ ಎಲ್ಲರ ಚಿತ್ತ…!

ರುದ್ರಪ್ಪ ಆಸಂಗಿ

ವಿಜಯಪುರ,ಮೇ.9: ಲೋಕಸಭೆ ಚುನಾವಣೆ ಮೀಸಲು ಮತಕ್ಷೇತ್ರದ ಮತದಾನ ಮಂಗಳವಾರ ನಡೆದಿದ್ದು, ಮತಯಂತ್ರಗಳನ್ನು ಭದ್ರತಾಕೊಠಡಿಗಳಲ್ಲಿ ಭದ್ರಪಡಿಸಲಾಗಿದೆ. ಇನ್ನೇನಿದ್ದರೂ ಜೂ.4 ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಉರಿ ಬಿಸಿಲನ್ನು ಲೆಕ್ಕಿಸದೇ ಮತದಾರರು ಬಿರುಸಿನ ಮತದಾನ ಮಾಡಿದ್ದರಿಂದ ಜಿಲ್ಲೆಯಲ್ಲಿ ಒಟ್ಟು ಶೇ. 66.32 ರಷ್ಟು ಮತದಾನವಾಗಿದೆ. ಬಿಸಿಲಿನ ಹೊಡೆತಕ್ಕೆ ಮತದಾನ ಕಡಮೆಯಾಗಬಹುದು ಎಂಬ ಆತಂತಕ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಮತದಾರರು ಉರಿ ಬಿಸಿಲಿಗೆ ಜಗ್ಗದೆ ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಸ್ಟ್ರಾಂಗ್ ರೂಮಿನಲ್ಲಿ ಮತಪೆಟ್ಟಿಗೆ ಭದ್ರ:
ಮತ ಯಂತ್ರ ಗಳನ್ನು ನಗರದ ಸೈನಿಕ ಶಾಲೆಯ ಭದ್ರತಾ ಕೊಠಡಿಯಲ್ಲಿ ಬಿಗಿ ಪೆÇಲೀಸ್ ಭದ್ರತೆಯಲ್ಲಿ ಇಡಲಾಗಿದೆ.
ಜಿಲ್ಲೆಯಲ್ಲಿ ಸ್ಥಾಪನೆಗೊಂಡ 2086 ಮತಗಟ್ಟೆಗಳಲ್ಲಿ ಸುಸೂತ್ರವಾಗಿ ಮತದಾನ ಪ್ರಕ್ರಿಯೆ ನಡೆದಿದ್ದು, ಚುನಾವಣೆ ಅಖಾಡದಲ್ಲಿರುವ 8 ಜನ ಅಭ್ಯರ್ಥಿಗಳ ಹಣೆಬರಹ ಮತದಾರರು ಇವಿಎಂ ಮತಯಂತ್ರಗಳಲ್ಲಿ ಭದ್ರಪಡಿಸಿದ್ದು, ಇನ್ನು ಒಂದು ತಿಂಗಳ ವರೆಗೆ ಅಂದರೆ ಜೂ. 4ರಂದು ಮತ ಎಣಿಕೆ ನಡೆಯಲಿದೆ. ಫಲಿತಾಂಶಕ್ಕೆ ಎಲ್ಲರೂ ಅಲ್ಲಿಯವರೆಗೆ ಕಾಯಬೇಕಿದೆ.

ಸೋಲು- ಗೆಲುವಿನ ಲೆಕ್ಕಾಚಾರ:
ಏತನ್ಮಧ್ಯೆ ಲೋಕಸಭೆ ಚುನಾವಣೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು, ಅವರ ಬೆಂಬಲಿಗರು ಹಾಗೂ ಸಾರ್ವಜನಿಕರ ವಲಯದಲ್ಲಿ ಸದ್ಯ ಸೋಲು- ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೋ ? ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೋ ? ಎನ್ನುವ ಕುತೂಹಲದ ಚರ್ಚೆಗಳು ನಗರ ಸೇರಿದಂತೆ ಜಿಲ್ಲಾದ್ಯಂತ ಊರುಗಳ ಚಾವಡಿ, ಕಟ್ಟೆ, ಬಸ್‍ನಿಲ್ದಾಣ ಹಾಗೂ ಗುಡಿ, ಗುಂಡಾರ ಬಳಿ ಕುಳಿತುಕೊಳ್ಳುವ ಹಿರಿಯರು, ಯುವಕರ ಮಧ್ಯೆ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಗೆಲುವಿನ ಕುರಿತೇ ಚರ್ಚೆಗಳು ಬಲು ಜೋರಾಗಿ ನಡೆಯುತ್ತಿವೆ.
ಈ ಮಧ್ಯೆ ಆಯಾ ಪಕ್ಷದ ಕಾರ್ಯಕರ್ತರು ತಮ್ಮ ಮುಖಂಡರ ನಿವಾಸಕ್ಕೆ ತೆರಳಿ ಫಲಿತಾಂಶದ ಚರ್ಚೆ ನಡೆಸುತ್ತಿದ್ದು, ನಮ್ಮ ಪಕ್ಷಕ್ಕೆ ಹೆಚ್ಚು ಲೀಡ್ ಬರುತ್ತೆ. ಒನ್ ವೇ ವೋಟಿಂಗ್ ಆಗಿದೆ ಸಾಹೇಬರೆ. ಗೆಲವು ನಮ್ಮದೆ ಎಂಬ ಮಾತುಗಳು ಎಲ್ಲೆಲ್ಲೂ ಕೇಳಿ ಬರುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಲೆಕ್ಕಾಚಾರಕ್ಕೆ ರೆಕ್ಕೆಪುಕ್ಕಗಳು ಮೂಡಿವೆ. ಎಲ್ಲೆ ಕುಳಿತರೂ ನಿಂತರೂ ಈಗ ಚುನಾವಣೆ ಗೆಲುವಿನ ಲೆಕ್ಕಾಚಾರ ನಾಗಾಲೋಟ ಜೋರಾಗಿದೆ.

ಮುಗಿಲು ಮುಟ್ಟಿದ ಗೆಲುವಿನ ಲೆಕ್ಕಾಚಾರ:
ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಗೆಲುವಿನ ಲೆಕ್ಕಾಚಾರದ ಜೊತೆ ಜೊತೆಯಲ್ಲಿ ಬೆಟ್ಟಿಂಗ್ ಕೂಡಾ ಜೋರಾಗಿದೆ. ಜನರು ಮಾತನಾಡುತ್ತಲೇ ಪರಸ್ಪರರು ಶರ್ತ ಏನಂತಿ ಗೆಲ್ಲುವುದು ನಾವೇ ಎಂದು ಬೀಗುತ್ತಿದ್ದಾರೆ. ಹಣ, ಬಂಗಾರ, ಜಮೀನು ಹಚ್ಚುತ್ತೇನೆ ಎಂದು ಬೆಟ್ಟಿಂಗಕ್ಕೆ ಮುಂದಾಗಿದ್ದಾರೆ. ಏನೇಯಾದರೂ ಜೂ. 4 ರಂದು ನಡೆಯುವ ಮತ ಎಣಿಕೆ ಬಳಿಕ ಹೊರ ಬೀಳುವ ಫಲಿತಾಂಶ ಎಲ್ಲ ಲೆಕ್ಕಾಚಾರಕ್ಕೆ ತೆರೆ ಎಳೆಯಲಿದೆ.