ಎಲ್ಲೆಡೆ ಹಬ್ಬದ ವಾತಾವರಣ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜ23: ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಯಾಗುತ್ತಿದ್ದಂತೆ ಎಲ್ಲೆಡೆಯೂ ಸಂಭ್ರಮ ಮನೆ ಮಾಡಿತಲ್ಲದೆ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿತ್ತು.
ಪಟ್ಟಣದ ಯಾವ ದಿಕ್ಕಿನಲ್ಲಿ ಹೋದರೂ ಕೇಳಿ ಬಂದ ಜೈ ಶ್ರೀ ರಾಮ್ ಜೈ ಜೈ ರಾಮ್ ಎಂಬ ಘೋಷಣೆಗಳು ಆಕಾಶದ ಎತ್ತರಕ್ಕೆ ಮೊಳಗಿದ್ದವು ಯುವಕರು ಕೊರಳಲ್ಲಿ ಕೇಸರಿ ಶಾಲು ಧರಿಸಿ ವಾಹನಗಳಿಗೆ ಶ್ರೀರಾಮಚಂದ್ರನ ಬಾವುಟಗಳನ್ನು ಹಾಕಿ ಮೋಟರ್ ಸೈಕಲ್‍ಗಳ ರ್ಯಾಲಿ ಒಂದು ಕಡೆಯಾದರೆ ಶ್ರೀರಾಮಚಂದ್ರನೇ ಅಯೋಧ್ಯೆಯಿಂದ ಊರಿಗೆ ಬರುತ್ತಿದ್ದಾನೆ ಎಂಬ ಅಭಿಮಾನದಿಂದ ಭಕ್ತಿ ಪೂರ್ವಕವಾಗಿ ತಳಿರು ತೋರಣಗಳನ್ನು ಕಟ್ಟಿ, ಶೃಂಗಾರ ಮಾಡಿ ಮನೆಯ ಮುಂಭಾಗದಲ್ಲಿ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ ಮಹಿಳೆಯರು ಸಂಭ್ರಮಿಸಿದರು. ಪಟ್ಟಣದಾದ್ಯಂತ ಸ್ವಯಂ ಪ್ರೇರಿತರಾಗಿ ಎಲ್ಲೆಡೆಯೂ ಅನ್ನ ದಾಸೋಹದ ಚಿತ್ರ ಕಂಡುಬಂದಿತು.
ಪಟ್ಟಣದ ಶಂಕರ ಮಠದಲ್ಲಿ ಕೈಗೊಂಡಿದ್ದ ಕೋಟಿ ರಾಮನಾಮ ಜಪ ಸಂಪನ್ನಗೊಂಡ ಹಿನ್ನೆಲೆಯಲ್ಲಿ ರಾಮ ತಾರಕ ಯಜ್ಞ ಬಾಲಚಂದ್ರ ಶಾಸ್ತ್ರಿ ಹುಲಮನಿ ಅವರ ನೇತೃತ್ವದಲ್ಲಿ ಹೋಮ ಹವನಗಳು ಜರುಗಿ ಸರಿಯಾಗಿ ಅಯೋಧ್ಯೆಯ ಭ್ಯವಾದ ರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ಆಗುತ್ತಿದ್ದಂತೆಯೇ ನೆರೆದಿದ್ದ ಭಕ್ತಗಣ ಸಮ್ಮುಖದಲ್ಲಿ ಪೂರ್ಣಾಹುತಿ ನೀಡಿ ಜೈ ಶ್ರೀರಾಮ್ ಎಂಬ ಘೋಷಣೆಯೊಂದಿಗೆ ರಾಮ ತಾರಕ ಯಜ್ಞ ಸಂಪನ್ನಗೊಂಡಿತು.
ಶ್ರೀ ಸೋಮೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಹೋಮ ನಡೆಯುತ್ತಿದ್ದ ಸಂದರ್ಭದಲ್ಲಿ ಕೋತಿಯೊಂದು ಕುಂಡದ ಮುಂದೆ ಕುಳಿತುಕೊಂಡಿದ್ದು ಎಲ್ಲರ ಗಮನ ಸೆಳೆಯಿತು.
ಪಟ್ಟಣದ ಹಾವಳಿ ಹನುಮಂತ ದೇವರ ದೇವಸ್ಥಾನದ ಮುಂದೆಯೂ ಅತ್ಯಂತ ಸಡಗರ ಸಂಭ್ರಮ ಮನೆ ಮಾಡಿತ್ತು ಒಟ್ಟಾರೆ ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿ ಎಲ್ಲೆಂದರಲ್ಲಿ ಜೈ ಶ್ರೀರಾಮ ಘೋಷಣೆಗಳು ಮುಗಿಲು ಮುಟ್ಟಿದ್ದವು.