ಎಲ್ಲೆಡೆ ಶಂಖ ಊದಲು ನಾನೇ ಹೋಗಬೇಕು:ಹೆಚ್‌ಡಿಕೆ

ಬೆಂಗಳೂರು,ನ.೨೩ -ಜೆಡಿಎಸ್ ಪಕ್ಷದಲ್ಲಿ ಶಂಖ ಊದಲಿಕ್ಕೆ ಜನ ಇಲ್ಲ ಎನ್ನುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ , ಹೌದು, ಅವರು ಹೇಳಿದ್ದು ನಿಜ. ಎಲ್ಲ ಕಡೆ ಶಂಖ ಊದುವುದಕ್ಕೆ ನಾನೇ ಹೋಗಬೇಕು ಎಂದು ತಿರುಗೇಟು ನೀಡಿದ್ದಾರೆ.
ಎಲ್ಲೆಲ್ಲಿ ಶಂಖ ಊದಲು ಸಾಧ್ಯವಿದೆಯೋ ಅಂತಹ ಕಡೆ ವಿಧಾನಪರಿಷತ್ ಚುನಾವಣೆಯಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ಸ್ಥಳೀಯ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ, ಸಲಹೆ ಪಡೆದು ೭ ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದೇವೆ ಎಂದು ಅವರು ತಿಳಿಸಿದ್ದಾರೆ
ವಿಧಾನ ಪರಿಷತ್ ಚುನಾವಣೆಯಲ್ಲಿ ಆರರಿಂದ ಎಂಟು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಈ ಮೊದಲೇ ನಾನು ಹೇಳಿದ್ದೆ. ಈ ಕಾರಣಕ್ಕಾಗಿಯೇ ಮೈಸೂರು, ಕೊಡಗು, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದ್ದೇವೆ” ಎಂದರು.
ಕಳೆದ ಚುನಾವಣೆಯಲ್ಲಿ ನಾವು ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವು. ಈಗ ಏಳೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ನನಗಿದೆ. ಸಮಯ ಕಡಿಮೆ ಇದೆ. ಪ್ರಬಲ ಹೋರಾಟ ನಡೆಸಿ ಜಯ ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ನಮ್ಮ ಗುರಿ ೨೦೨೩ ರ ಕಡೆಗೆ

ಪಕ್ಷದ ಶಕ್ತಿಗನುಸಾರವಾಗಿ ಉಪ ಚುನಾವಣೆಗಳನ್ನು ಎದುರಿಸಿದ್ದೇವೆ.ವಿಧಾನ ಪರಿಷತ್ ಚುನಾವಣೆಯಲ್ಲೂ ಸ್ಪರ್ಧೆ ಮಾಡುತ್ತಿದ್ದೇವೆ. ನಮ್ಮ ಗುರಿ ೨೦೨೩ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲಿದೆ. ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಎಲ್ಲ ಹಂತಗಳಲ್ಲೂ ಪಕ್ಷ ಸಂಘಟನೆ ಮಾಡಲು ಏನೆಲ್ಲ ಕ್ರಮ ವಹಿಸಬೇಕೋ ಅದನ್ನೆಲ್ಲ ಮಾಡುತ್ತಿದ್ದೇನೆ ಎಂದು ಹೇಳಿದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಶಕ್ತಿ ತುಂಬುವ ರೀತಿಯಲ್ಲಿ ಈ ಚುನಾವಣೆಯಲ್ಲಿ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಹಿಂದೆ ಗೆದ್ದ ಕೆಲವರು ನಮ್ಮ ಪಕ್ಷದಿಂದ ದೂರ ಆಗಿದ್ದಾರೆ. ಅದು ಮುಗಿದ ಅಧ್ಯಾಯ. ಪಕ್ಷಕ್ಕೆ ಕಾರ್ಯಕರ್ತರನ್ನು ಹೊರತುಪಡಿಸಿ ಯಾರು ಅನಿವಾರ್ಯವಲ್ಲ. ಕಾರ್ಯಕರ್ತರ ದುಡಿಮೆ ಮೇಲೆ ನಾಯಕರು ಸೃಷ್ಟಿಯಾಗುತ್ತಾರೆ. ಈ ಕಾರ್ಯಕರ್ತರೇ ಮುಂದಿನ ಹಂತಕ್ಕೆ ಹೊಸ ನಾಯಕರು ಎಂದು ಅವರು ತಿಳಿಸಿದರು ಮಾರ್ಮಿಕವಾಗಿ ತಿಳಿಸಿದರು.