ಎಲ್ಲೆಡೆ ಮಾನವೀಯ ಮೌಲ್ಯಗಳು ಕುಸಿದಿರುವಾಗ ಶರಣರ ಈ ನಾಡಿನಲ್ಲಿ ಇನ್ನೂ ಮೌಲ್ಯಗಳು ಜೀವಂತಃ ವಿವೇಕಾನಂದ ಎಚ್.ಕೆ

ವಿಜಯಪುರ, ಜ.6-ಎಲ್ಲೆಡೆ ಮಾನವೀಯ ಮೌಲ್ಯಗಳು ಕುಸಿದಿರುವಾಗ ಶರಣರ ಈ ನಾಡಿನಲ್ಲಿ ಇನ್ನೂ ಮೌಲ್ಯಗಳು ಜೀವಂತವಾಗಿವೆ. ಅಧಿಕಾರ, ಹಣ ಮತ್ತು ಪ್ರಚಾರಗಳು ಮಾನವೀಯ ಮೌಲ್ಯಗಳು ಕುಸಿತಕ್ಕೆ ಕಾರಣ ಎಂದು ಚಿಂತಕ ವಿವೇಕಾನಂದ ಎಚ್.ಕೆ ಅಭಿಪ್ರಾಯಪಟ್ಟರು.
ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ನಡೆಸಿರುವ ಜ್ಞಾನ ದೀಕ್ಷಾ ಪಾದಯಾತ್ರೆ ನಿಮಿತ್ತ ಬಿ.ಎಲ್.ಡಿ.ಇ ವಚನಪಿತಾಮಹ ಡಾ.ಫ,ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡ ಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಿಯವರೆಗೆ ಕಳ್ಳರಿದ್ದಾರೆ ಎಂಬ ಬೋರ್ಡ್ ಹಾಕಿರುತ್ತವೆಯೋ ಅಲ್ಲಿಯವರೆಗೆ ಈ ಸಮಾಜ, ನಾಗರಿಕ ಸಮಾಜವಾಗಲು ಸಾಧ್ಯವಿಲ್ಲ. ನಾವು ನಮ್ಮ ದೃಷ್ಠಿ ವಿಶಾಲವಾಗಿಸಬೇಕು. ಜಾತಿ, ಮತ, ಭಾಷೆ, ಪ್ರಾಂತಗಳಿಗೆ ಸೀಮಿತರಾಗಿ ನಮ್ಮ ಚಿಂತನೆ ಸುತ್ತುವ ಕಾರಣ ಸರ್ವೇಜನ ಸುಖಿನೋ ಭವಂತು ಎನ್ನಲು ಆಗುತ್ತಿಲ್ಲ ಎಂದರು.
ಕಳಚುತ್ತಿರುವ ಸಂಬಂಧಗಳ ಕುರಿತು ಮಾತನಾಡಿದ ಅವರು ಸ್ವಾಮಿಜಿಗಳು-ಭಕ್ತರು, ವೈದ್ಯ-ರೋಗಿಗಳು, ಶಿಕ್ಷಕರು-ವಿದ್ಯಾರ್ಥಿಗಳು, ನ್ಯಾಯಾಲಯಗಳು-ಕಕ್ಷಿದಾರರು ಸೇರಿದಂತೆ ಎಲ್ಲ ಸಂಬಂಧಗಳು ಕಳಚುತ್ತಿವೆ. ಪರಸ್ಪರ ಒಬ್ಬರಿಗೊಬ್ಬರು ಅವಿಶ್ವಾಸದಿಂದ ನೋಡುವ ಸನ್ನಿವೇಶಗಳು ನಿರ್ಮಾಣವಾಗಿವೆ. ಇಂತಹ ಸನ್ನಿವೇಶಗದಲ್ಲಿ ನಮ್ಮ ಯುವ ಪೀಳಿಗೆಯನ್ನು ಎತ್ತ ದೂಡುತ್ತೇವೆ? ಎಂದರು.
ಜೈ ಹನುಮಾನ ಯಂತ್ರ, ಮಹಾಲಕ್ಷ್ಮೀ ಯಂತ್ರ 2ಸಾವಿರ ರೂ. ಕೊಟ್ಟು ತೆಗೆದುಕೊಂಡರೆ ನಿಮ್ಮ ಎಲ್ಲ ಕಷ್ಟಗಳು ಪರಿಹಾರ ಆಗುತ್ತವೆ ಎಂಬ ಜಾಹಿರಾತುಗಳು ಬರುತ್ತಿವೆ. ಜಾಹಿರಾತು ಎನ್ನುವದು ಸತ್ಯದ ಪ್ರಚಾರವೇ ಹೊರತು ಸುಳ್ಳಿನ ಸರಕು ಆಗಬಾರದು ಎಂದರು.
ಕೆ.ಸಿ.ರೆಡ್ಡಿ ಕಾಲದಿಂದಲೂ, ಎಸ್.ಎಂ.ಕೃಷ್ಣಾರವರೆಗೆ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಪತ್ರಿಕಾ ಸಂಪಾದಕರನ್ನು, ಚಿಂತಕರನ್ನು ಅವರು ಸಂಪರ್ಕಿಸುತ್ತಿದ್ದರು. ಇಂದು ಆ ರೀತಿ ಸರ್ಕಾರಕ್ಕೆ ಸಲಹೆ ಕೊಡುವ ಮಟ್ಟದಲ್ಲಿ ಯಾವ ವ್ಯಕ್ತಿಗಳು ತಮ್ಮ ಮೌಲ್ಯಗಳನ್ನು ಉಳಿಸಿಕೊಂಡಿಲ್ಲ ಎಂದು ವಿಷಾಧಿಸಿದ ಅವರು ನನ್ನದು ನಿಮ್ಮ ಮನಸ್ಸುಗಳ ಮೇಲೆ ಸರ್ಜಿಕಲ್ ಸ್ಟ್ರೈಕ್. ಇದರಿಂದ ಸ್ವಲ್ಪಮಟ್ಟಿಗೆ ಬದಲಾವಣೆಯಾದರೆ ಸಾಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಮಹಾಂತೇಶ ಬಿರಾದಾರ ಬೀದರ ಜಿಲ್ಲೆಯಿಂದ ಸತತ 66ದಿನಗಳವರೆಗೆ ಪಾದಯಾತ್ರೆ ಮಾಡಿಕೊಂಡು, ಇದೀಗ ವಿಜಯಪುರಕ್ಕೆ ಆಗಮಿಸಿರುವ ವಿವೇಕಾನಂದರವರು ತಿಕೋಟಾ, ಬಬಲೇಶ್ವರ, ಕೋಲ್ಹಾರ, ನಿಡಗುಂದಿ, ಕೂಡಲಸಂಗಮ ಮಾರ್ಗವಾಗಿ ಸಾಗುತ್ತಾ 250ದಿನಗಳವರೆಗೆ ನಿರಂತರ ಏಕವ್ಯಕ್ತಿ ಪಾದಯಾತ್ರೆ ಮಾಡುವ ಮೂಲಕ ಸಾಮಾಜಿಕ ಬದಲಾವಣೆಗೆ ಸಂದೇಶ ನೀಡಲಿದ್ದಾರೆ ಎಂದರು.
ಡಾ.ವಿ.ಡಿ.ಐಹೊಳ್ಳಿ ಸ್ವಾಗತಿಸಿದರು. ಡಾ.ಎಂ.ಎಸ್.ಮದಭಾವಿ, ಇಬ್ರಾಹಿಂ ನಿಡಗುಂದಿ, ಸುಭಾಶ ಯಾದವಾಡ, ಬಿ.ಬಿ.ಡೆಂಗನವರ, ಜಿ.ಆರ್.ಅಂಬಲಿ, ಇಂದುಶೇಖರ ಮಣೂರ, ಡಾ.ಸುನೀಲಕುಮಾರ ಹೆಬ್ಬಿ, ಚೇತನಾ ಸಂಕೊಂಡ, ಎಸ್.ಪಿ.ಶೇಗುಣಶಿ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.