ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್

ಕಲಬುರಗಿ,ಮೇ.28-ಸಂಪೂರ್ಣ ಲಾಕ್ ಡೌನ್ ನ ಎರಡನೇ ದಿನವಾದ ಇಂದು ನಗರದೆಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಗರದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ, ಬಡಾವಣೆಗಳಲ್ಲಿಯೂ ಸಹ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಪೊಲೀಸ್ ವಾಹನಗಳು ಸೈರನ್ ಸದ್ದು ಮಾಡುತ್ತ ನಗರದ ಪ್ರಮುಖ ಬೀದಿಗಳು ಸೇರಿದಂತೆ ಎಲ್ಲೆಡೆ ಸಂಚರಿಸಿದವು.
ರಸ್ತೆಗಿಳಿದ ವಾಹನ ಸವಾರರನ್ನು ಪೊಲೀಸರು ತಡೆದು ವಿಚಾರಣೆ ನಡೆಸಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು. ಸುಖಾಸಮುಮ್ಮನೆ ರಸ್ತೆಗಿಳಿದ ವಾಹನ ಸವಾರರ ವಿಚಾರಣೆ ನಡೆಸುವುದರ ಜೊತೆಗೆ ದಂಡ ಸಹ ವಿಧಿಸಿದರು.
ಸಂಪೂರ್ಣ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಜನರ ಓಡಾಟವಿಲ್ಲದೆ ನಗರದ ಪ್ರಮುಖ ರಸ್ತೆಗಳು ಭಣಗುಡುತ್ತಲ್ಲಿದ್ದವು. ಪ್ರಮುಖ ಬೀದಿಗಳಲ್ಲಿನ ಅಂಗಡಿ, ಮುಂಗಟ್ಟುಗಳು ಮಾತ್ರವಲ್ಲದೆ ಬಡಾವಣೆಗಳಲ್ಲಿನ ಅಂಗಡಿಗಳು ಸಹ ಬಂದ್ ಆಗಿದ್ದವು.
ಜನರ ಓಡಾಟವಿಲ್ಲದೆ ಇಡೀ ನಗರವೇ ಮೌನ ಹೊದ್ದು ಮಲಗಿದಂತಿತ್ತು. ಸಂಪೂರ್ಣ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಜನ ಮನೆಯಲ್ಲಿಯೇ ಕಾಲ ಕಳೆಯುವಂತಾಯಿತು. ಇಷ್ಟಾಗಿಯೂ ಅಲ್ಲಲ್ಲಿ ಜನ ಓಡಾಡುತ್ತಿದ್ದದ್ದು ಕಂಡುಬಂತು.