ಎಲ್ಲೆಡೆ ಗಣೇಶೋತ್ಸವದ ಸಂಭ್ರಮ

(ಸಂಜೆವಾಣಿ ವಾರ್ತೆ)
ಔರಾದ :ಸೆ.6: ತಾಲೂಕಿನಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.
ನಗರ ಪ್ರದೇಶ, ಗ್ರಾಮೀಣ?ಪ್ರದೇಶದ ಕೇರಿಗಳಲ್ಲಿ, ಪಟ್ಟಣ ಪ್ರದೇಶಗಳಲ್ಲಿ ಹೀಗೆ ವಿವಿಧೆಡೆ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಗಳಿಗೆ ಪ್ರತಿನಿತ್ಯ ಬಗೆಬಗೆಯ ಪೂಜೆಗಳು ನಡೆಯುತ್ತಿವೆ. ನಾನಾ ಆಕಾರ, ಅವತಾರಗಳಲ್ಲಿ ಮೂಡಿಬಂದಿರುವ ಮೂರ್ತಿಗಳು ಎಲ್ಲರ ಗಮನ ಸೆಳೆಯುತ್ತಿವೆ.
ಕೆಲವು ಸಮಿತಿಗಳು ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಬ್ಬಕ್ಕೆ ಮೆರಗು ತುಂಬುತ್ತವೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೂಡ ವಿನಾಯಕನ ಆರಾಧನೆ ಬಹು ಜೋರಿನಿಂದಲೇ ನಡೆದಿದ್ದು, ಬಗೆ ಬಗೆಯಲ್ಲಿ ಮಂಟಪವನ್ನು ನಿರ್ಮಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಯುವ ಸಮೂಹದಿಂದ ಭಕ್ತಿ ಭಾವದಿಂದ ಪೂಜೆ ಸಲ್ಲಿಸಲಾಗುತ್ತಿದೆ.
ತಾಲೂಕಿನ ಚಾಂದೋರಿ ಗ್ರಾಮದಲ್ಲಿ ಸ್ಥಾಪಿಸಿರುವ ಶಿವ ಛತ್ರಪತಿ ಗಣೇಶ ಮಂಡಳಿ ವತಿಯಿಂದ ಸ್ಥಾಪಿಸಿದ ಗಣೇಶನನ್ನು ಯುವ ಮುಖಂಡ ದೀಪಕ ಪಾಟೀಲ ಚಾಂದೋರಿ, ಶಿವಾಜಿ ಪಾಟೀಲ ಹಾಗೂ ಸರ್ವ ಸದಸ್ಯರ ವತಿಯಿಂದ ಪೂಜೆ ಸಲ್ಲಿಸಿ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ವಿಘ್ನೇಶ್ವರನ ಕೃಪೆಗೆ ಪಾತ್ರರಾದರು.