ಎಲ್ಲಿ ಅರ್ಚನೆ ಅರ್ಪಣೆ ಅನುಭಾವ ಅದುವೇ ಬಸವಕಲ್ಯಾಣ

ಭಾಲ್ಕಿ:ಡಿ.6:ಬಸವಣ್ಣ, ಅಲ್ಲಮ ಪ್ರಭುಗಳು ಸ್ಪರ್ಶಮಾಡಿದ ಚನ್ನಬಸವಣ್ಣ ನಂತಹ ಶ್ರೇಷ್ಠ ಜ್ಞಾನಿಗಳು ಓಡಾಡಿದ ಪುಣ್ಯಭೂಮಿ ಇದು. ಇವರೆಲ್ಲಾ ಶರಣರ ಸುಂದರ ಸುಂದರ ಮಾತುಗಳು ಈ ವಾತಾವರಣದಲ್ಲಿ ಹರಡಿಕೊಂಡಿವೆ. ಅಂತಲ್ಲಿ ತಾವೆಲ್ಲಾ ಬದುಕುತ್ತಿದ್ದಿರಲ್ಲ ಇದಕ್ಕಿಂತ ಪವಿತ್ರ ಸಂಗತಿ ಯಾವುದು. ಜೀವನ ಸಾರ್ಥಕವಾಗಲಿಕ್ಕೆ ಈ ನೆನೆಹ ಸಾಕು. ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಕಲ್ಯಾಣ ಪಟ್ಟಣ ನೋಡಲಿಕ್ಕೆ ಜನ ಬರುತ್ತಾರೆ ಆದರೆ ನೀವೆಲ್ಲ ಇಲ್ಲೇ ಹುಟ್ಟಿರುವಿರಿ ವಾಸವಾಗಿದ್ದಿರಿ ಬದುಕುತ್ತಿದ್ದಿರಿ ಇದು ಎಂತಹ ವೈಭವ. ಬಹಳ ಅಚ್ಚರಿ ನಿಮಗೆಲ್ಲಾ ನೋಡಿದರೆ ಆವಾಗಿನ ಶಿವಶರಣರು ನಿಮ್ಮ ರೂಪತಾಳಿ ಇಲ್ಲಿ ಬಂದಿರುವಂತೆ ಕಾಣುತ್ತದೆ. ಶರಣರು ಎಂದರೆ ಏನು ಮೇಲೆ ಕಾಣುವುದಿಲ್ಲ ಒಳಗಡೆ ಇರುತ್ತಾರೆ ನಿಮ್ಮೊಳಗೆ ಶರಣ ಸತ್ವ ಇದೆ ನಿಮ್ಮ ಮುಖದ ಮೇಲೆ ಕೂಡಲಸಂಗಮನ ಕಳೆಯಿದೆ ಮತ್ತೆ ಇನ್ನೇನು ಬೇಕು. ಬಸವಣ್ಣನವರು ಇದನ್ನೆಲ್ಲಾ ನೋಡಿದರೆ ಎಷ್ಟು ಆನಂದವನ್ನು ಪಡೆಯಬಹುದಿತ್ತು.
ಅವರೇನು ಹೇಳಿದ್ದರು ಶರಣರು ಎಂದರೆ
ಮನೆ ನೋಡಾ ಬಡವರು
ಮನ ನೋಡಾ ಬಲ್ಲಿದರು
ಧನದಲ್ಲಿ ಬಡವರು ಧನಮನದಲ್ಲಿ ಸಂಪನ್ನರು
ಎಮ್ಮ ಕೂಡಲಸಂಗಮದೇವ.
ನಿನ್ನ ಕಿಸೆ ಖಾಲಿ ಇರಬಹುದು ಆದರೆ ನಿಮ್ಮ ಮನಸ್ಸು ತುಂಬಿದೆ ಬರಿ ವಚನಗಳಿಂದಲೇ ವಚನಗಳಿಂದ ಅನುಭವಗಳಿಂದ ತುಂಬಿದೆ. ಅವರ ಸ್ಮರಣೆಯಿಂದ ತುಂಬಿದೆ ಆದ್ದರಿಂದಲೇ ಈ ನಾಡಿಗೆ ಕಲ್ಯಾಣ ನಾಡು ಎಂದು ಕರೆಯುತ್ತೇವೆ.
ಇಲ್ಲಿ ಯಾರು ಬರುತ್ತಾರೆ ಅವರ ಬದುಕೆಲ್ಲ ಕಲ್ಯಾಣ. ಎಂತಹ ಭೂಮಿಯಲ್ಲಿ ತಾವೆಲ್ಲ ವಾಸ ಮಾಡುತ್ತಿದ್ದೀರಿ ಉಳಿದವರಿಗೆ ಇದನ್ನು ನೋಡಿ ಹೊಟ್ಟೆಕಿಚ್ಚು ಬರುತ್ತದೆ ಅಸೂಹೆ ಎನ್ನಿಸಬಹುದು. ನೀವೆಲ್ಲ ಇಲ್ಲಿ ಹೀಗೆ ಬದುಕಬೇಕು ಎಂದರೆ ಸಿರಿವಂತರಾಗಿ ಇರಬೇಕು. ಶರಣರಿಗಿಂತಹ ಸಿರಿವಂತರು ಯಾರು?. ನಿಜವಾದ ಸಂಪತ್ತು ಇರುವುದು ಎದೆಯೊಳಗೆ ಅದು ಭಕ್ತಿ ಸಂಪತ್ತು ಇದೆ, ಅಷ್ಟೇ ಅಲ್ಲ ತೃಪ್ತಿ ಸಂಪತ್ತು ಇದೆ. ಹೌದಲ್ಲ ಹೇಳಿ ಎಂತಹ ಸಂಪತ್ತು ಈ ಮನಸ್ಸಿನಲ್ಲಿದೆ. ಇಷ್ಟೊತ್ತು ನೀವು ಇಲ್ಲಿ ಕುಳಿತಿರುವಿರಲ್ಲ ನಿಮಗೆ ಮನೆಯ ನೆನಪು ಬಂದಿದೆ ಏನು? ಕಿಸೆಯಲ್ಲಿ ಏನಿದೆ ಎನ್ನುವ ಕಲ್ಪನೆಯಾದರೂ ಬಂದಿದೆ ಏನು? ಎಲ್ಲಿ ಕುಳಿತಿರುವಿರಿ ಎನ್ನುವುದರ ಸ್ಮರಣೆಯಾದರೂ ಇದೆಯೇನು?, ಏನಿಲ್ಲ ಎಲ್ಲವನ್ನೂ ಮರೆತು ಬಸವಣ್ಣನವರ ನೆನಹಿನಲ್ಲಿ ಒಂದಾಗಿರುವಿರಲ್ಲ ಇದೇ ಸಾರ್ಥಕತೆ. ಎಷ್ಟು ಅದ್ಭುತ ಎಲ್ಲಿ ಬಸವಣ್ಣನವರ ನೆನೆಹ ಇರುತ್ತದೆಯೋ ಅಲ್ಲಿ ಹೊರಗೂ ಸ್ವಚ್ಛ ಒಳಗೂ ಸ್ವಚ್ಛ ಅಲ್ಲಿ ಮಲಿನತೆ ಇರುವುದಿಲ್ಲ. ನಿಮ್ಮ ಮನಸ್ಸು ಅಷ್ಟೇ ಸ್ವಚ್ಛ ನಿಮ್ಮ ಕೈಯಷ್ಟೇ ಸ್ವಚ್ಛ ನಿಮ್ಮ ಮಾತು ಅಷ್ಟೇ ಸ್ವಚ್ಛ ಆದ್ದರಿಂದ ಬಸವಕಲ್ಯಾಣ.
ಬಸವಣ್ಣನವರನ್ನು ನೆನೆಸುತ್ತಾ ಬದುಕು ಸಾವಿರ ಸಾವಿರ ಜನರ ಕಲ್ಯಾಣ. ಇಂತಲ್ಲಿ ತಾವು ಬಾಳುತ್ತಿದ್ದಿರಲ್ಲ, ನಾವು ಬಂದಿರುವುದು ಏಕೆಂದರೆ ಇಷ್ಟು ಜನ ಶರಣರು ಇಲ್ಲಿರುವವರು ಒಂದು ಕ್ಷಣ ನೋಡೋಣ ಎಂದು ಬಂದೆ. ಪ್ರತಿಯೊಬ್ಬರಲ್ಲೂ ಬಸವಣ್ಣ ಪ್ರತಿಯೊಬ್ಬರಲ್ಲೂ ಅಕ್ಕಮಹಾದೇವಿ. ಎಂತಹ ಪವಿತ್ರ ಜೀವನವನ್ನು ಸಾಗಿಸುತ್ತಿದ್ದಿರಿ ಇಂತಹವರಿಗೆ ಬಿಸಿಲನ್ನು ಲೆಕ್ಕಿಸದೆ ತಾಸುಗಳ ಕಾಲ ಒಳ್ಳೆಯ ಮಾತುಗಳನ್ನು ಕೇಳುವುದರಲ್ಲಿ ಮಗ್ನರಾಗಿರುವರಲ್ಲ ಇದಕ್ಕಿಂತ ದೊಡ್ಡ ಸಾಧನೆ ಯಾವುದು.
ಬಸವಣ್ಣನವರಿಗೆ, ಶರಣರಿಗೆ ಎಷ್ಟು ಆನಂದವಾಗಿರಬೇಕು ಹೇಳಿ ಆದ್ದರಿಂದಲೇ ಇದಕ್ಕೆ ಅನುಭವ ಮಂಟಪ ಎಂದು ಕರೆದರು. ಇಲ್ಲಿ ಏನು ಇಲ್ಲ ಬರಿ ಅನುಭವ, ಸಂಪತ್ತಿನ ಮಂಟಪ ಅಲ್ಲ, ಸೌಂದರ್ಯದ ಮಂಟಪವಲ್ಲ, ಅನುಭಾವದ ಮಂಟಪ ಅಂತಹ ಮಂಟಪದ ಉತ್ಸವ ಇಂದು.
ಉತ್ಸವ ಎಂದರೆ ಒಳಗಿರುವ ಉಮ್ಮೆದ. ಸುಮ್ಮನೆ ನೆನಪು ಮಾಡಿಕೊಂಡು ಆನಂದ ಪಡುವಂತಹ ಕ್ಷಣ. ಎಷ್ಟು ಚೆನ್ನಾಗಿದೆ ನಿಮ್ಮ ಜೀವನ ನೋಡಿದರೆ ಸಾಕು.
ಇಷ್ಟು ಜನ ಶರಣರಿದ್ದಾರೆ ಇಲ್ಲ ಅಂತ ಯಾಕೆ 770 ಅಮರ ಗಣಗಳು ಅವಾಗ ಇದ್ದರು ಇವಾಗ 7700 ಶರಣರು ನೀವು ಇಲ್ಲಿ ಕುಳಿತಿರುವಿರಿ ಇನ್ನೇನು ಬೇಕು ಸಂತೋಷಪಡಲು. 800-900 ವರ್ಷಗಳ ನಂತರ ಏನು ಬಸವಜ್ಯೋತಿ ಬೆಳಗುತ್ತಿದೆ ಬೆಳಕು ಹರವುತ್ತಿದೆ. ಅವರ ಮಾತುಗಳು ಎಷ್ಟು ಸರಳ ಬರೀ ಬಸವಣ್ಣನವರು ಅಲ್ಲ ಆಗಿನ ಶರಣರ ಮಾತುಗಳು ಎಷ್ಟು ಸರಳ, ತಲೆಗೆ ತಾಪಿಲ್ಲ, ಹೃದಯಕ್ಕೆ ಅಭ್ಯಾಯನ, ಹೃದಯದಲ್ಲಿ ತಂಪನ್ನು ಸುರಿಯುತ್ತೆ ತಲೆಯಲ್ಲಿ ಬೆಳಕನ್ನು ಚೆಲ್ಲುತ್ತವೆ ಅಂತಹ ಮಾತುಗಳನ್ನು ಆಡಿದರು. ಏಕೆಂದರೆ ಅವರಿಗೆ ಅವರ ಕೈಯಲ್ಲಿ ಕಾಯಕ ಇತ್ತು ಹೃದಯದಲ್ಲಿ ಕೂಡಲಸಂಗಮ ತಲೆಯೊಳಗೆಲ್ಲ ಮುಕ್ತತೆ ಇತ್ತು.
ಯಾವುದಕ್ಕೂ ಬಂಧಿತವಾಗಿರುವ ಮುಕ್ತವಾಗಿತ್ತು ಆದ್ದರಿಂದಲೇ ಆಗಿನಕಾಲದ ವಾತಾವರಣದಲ್ಲಿ ಎಂತೆಂತಹ ವ್ಯಕ್ತಿಗಳು ತಯಾರಾದರು. ಅವರೇನು ಒಂದು ಶಾಲೆ ತೆಗೆದು ಕಲಿಸಲಿಲ್ಲ, ಎಲ್ಲರಿಗೂ ಕೂಡಿಸಿಕೊಂಡು ಉಪದೇಶ ಮಾಡಲಿಲ್ಲ, ಇದನ್ನು ತಿಳಿದುಕೊಳ್ಳಿ ಎಂದು ಹೇಳಲಿಲ್ಲ ಏನು ಮಾಡಿದರು? ಬನ್ನಿ ಅಂತ ಕರೆದರು ತಲೆಬಾಗಿದರು ಕೈಮುಗಿದರು ವಂದಿಸಿದರು ನೀವು ದೊಡ್ಡವರು ಎಂದರು ಸಾಕು ಆ ನಾಲ್ಕು ಮಾತುಗಳು ಎಲ್ಲರನ್ನೂ ಶರಣನನ್ನಾಗಿ ಮಾಡಿದ್ದು. ನೀವೆಲ್ಲ ಶರಣರು ನಾನೊಬ್ಬನೇ ಭಕ್ತ ನೀವೆಲ್ಲಾ ಕೂಡಲಸಂಗಮನ ಅವತಾರ ಎಂದು ಕರೆದರು.
ಯಾರು ಹೇಳುತ್ತಾರೆ ಹೇಳಿ ನಾನೊಬ್ಬನೇ ಭಕ್ತ ನೀವೆಲ್ಲಾ ಕೂಡಲಸಂಗಮನ ಅವತಾರವೆಂದು ಎಂತಹ ಅದ್ಭುತ ದೃಷ್ಟಿಕೋನ ಬಸವಣ್ಣನವರದ್ದು. ಆದ್ದರಿಂದಲೇ ನಮ್ಮ ಅರವಿಂದ ಜತ್ತಿಯವರು ಶರಣರ ಮಾತುಗಳನ್ನು ತೆಗೆದುಕೊಂಡು ಜಗತ್ತಿನಾದ್ಯಂತ ಎಲ್ಲಾ ಭಾಷೆಗಳಲ್ಲಿ ಅನುವಾದ ಮಾಡಿದ್ದಾರೆ. ಮಹಾದೇವಪ್ಪನವರು ಅದನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಗೊಳಿಸಿದ್ದಾರೆ ಅನುವಾದಿಸಿದ್ದಾರೆ. ಅವರ ಮಾತುಗಳಲ್ಲಿನ ತತ್ವವನ್ನು ಜಗತ್ತಿಗೆ ಕೊಡುತ್ತಿದ್ದಾರೆ. ಎಲ್ಲರೂ ಹಾಗೆ ಪರಮಪೂಜ್ಯ ಬಸವಲಿಂಗ ಪಟ್ಟದೇವರು ಅವರ ದರುಶನದಿಂದ ಬಸವಣ್ಣನವರ ಭಾವ ಸಂಪತ್ತು ಸುತ್ತಮುತ್ತಲು ಹರಡುತ್ತಿದ್ದಾರೆ. ಅವರ ಅನುಭಾವದ ಸೌರಭವನ್ನು ಹರಡುತ್ತಿದ್ದಾರೆ. ಮೌನವಾಗಿ ಕೆಲವರು ಮಾತಿನಿಂದ ಕೆಲವರು ಭಾವದಿಂದ ಕೆಲವರು ಆದ್ದರಿಂದಲೇ ಅವರು ನೀವು. ನಿಮ್ಮನ್ನು ನೋಡುವ ಅವಕಾಶ ನನಗೆ ಸಿಕ್ಕಿದ್ದು ಇಷ್ಟೇ ಸಾಕು ನಮಗಂತೂ ಇಲ್ಲಿ ವಾಸ ಮಾಡಲಿಕ್ಕೆ ಆಗುವುದಿಲ್ಲ ನಿಮ್ಮನ್ನು ನೋಡಿದರೆ ಸಾಕು ನೆನಪು ಇರುವಲ್ಲಿಯೇ ಕಲ್ಯಾಣ ಅಲ್ಲಿಯೇ ಬಸವಣ್ಣ. ಮಾಡಬೇಕು ಮನುಷ್ಯ ಸುಂದರವಾದ ಕಾರ್ಯಗಳನ್ನು ಮಾಡಬೇಕು ಮಧುರವಾದ ಮಾತುಗಳನ್ನು ಆಡಬೇಕು.
ಮಾತು ಹೇಗಿರಬೇಕು ಎಂದರೆ ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು.
ನುಡಿದರೆ ಮುತ್ತಿನ ಹಾರ, ಮುತ್ತಿನ ಹಾರವನ್ನು ನೋಡಿದರೆ ಎಲ್ಲರೂ ಒಂದು ಕ್ಷಣ ತಮ್ಮ ಮೇಲೆ ಹಾಕಿಕೊಳ್ಳಲು ಇಷ್ಟಪಡುತ್ತಾರೆ. ಪುರುಷರಾಗಲಿ ಸ್ತ್ರೀಯರಾಗಲಿ ಎಲ್ಲರೂ ಬಯಸುತ್ತಾರೆ. ಮುತ್ತಿನ ಹಾರದಂತಹ ಮಾತುಗಳು ಇರಬೇಕು ವಚನದ ಹಾರವನ್ನು ಹಾಕಿಕೊಳ್ಳುವುದು. ಇದೆಲ್ಲಾ ಅದ್ಭುತ ಅದನ್ನು ಶ್ರೀಗಳು ನಿಮಗೆ ಹಾಕಿಯೇ ಬಿಟ್ಟಿದ್ದಾರೆ. ಅದು ವಚನ ಅದನ್ನು ಮುತ್ತುಗಳ ಹಾರ ಮಾಡಿ ತಲೆಯೊಳಗಿನಿಂದ ಮನಸ್ಸಿನೊಳಗೆ ಹಾಕಿದ್ದಾರೆ. ಮುತ್ತಿನಹಾರದಂತೆ ಎಲ್ಲರೂ ಮಾತನಾಡಿದರು. ನಿಮ್ಮ ಭಾವವನ್ನು ಕಂಡರೆ ಲಿಂಗ ಮೆಚ್ಚಿ ಅಹುದಹುದೆನಬೇಕು ಹಾಗೆ ಏನು ಮುಖದ ಮೇಲೆ ಪ್ರಸನ್ನತೆ ಬಹಳಷ್ಟು ತಾಸುಗಳಿಂದ ನೀವು ಇಲ್ಲಿ ಕುಳಿತಿರುವಿರಿ
ಆದರೆ ಮುಖ ಬಾಡಿಲ್ಲ ಮತ್ತಷ್ಟು ಅರಳಿದೆ ಇದೆ ಬಸವಣ್ಣನವರಿಗೆ ಸಲ್ಲುತ್ತದೆ. ಸಮರ್ಪಣೆಯಾಗುತ್ತದೆ. ನಿಮ್ಮನ್ನು ನೋಡಿದರೆ ಬಸವಣ್ಣ ನಿಮ್ಮ ಮುಖದಲ್ಲಿ ಮುಖದ ಛಾಯೆಯೊಳಗೆ ಇರುವನು. ಇಲ್ಲಿ ಇಂತಹ ಸಂತೋಷದ ವಾತಾವರಣ ನೋಡಿ ಅವರಿಗೆ ಎಷ್ಟು ಆನಂದವಾಗಿರಬೇಕಲ್ಲ ಕೂಡಲಸಂಗಮನೇ ಇಲ್ಲಿ.
ಬಸವಣ್ಣನವರಷ್ಟು ನಾವು ಕಲಿತಿದ್ದರೆ ಅವರ ಹಾಗೆ ನಮಗೆ ಅಧಿಕಾರ ಹೊಂದಿದ್ದರೆ ನಾವಿಲ್ಲಿ ಬರುತ್ತವೇನೋ ಬಸವಣ್ಣನವರಂತೆ ಒಬ್ಬರೇ ಒಬ್ಬರು ಇರುವರು ಎಲ್ಲರೂ ಅಲ್ಲ. ಯಾವ ಭಾವನೆಗಳಿಲ್ಲದೆ ನೀವೆಲ್ಲ ಇಲ್ಲಿ ಬಂದಿರುವಿರಲ್ಲ ಇದಕ್ಕಿಂತ ದೊಡ್ಡ ಆಧ್ಯಾತ್ಮಿಕ ಅನುಭಾವಧ ಮಾತು ಎಲ್ಲಿದೆ. ಆ ಜೀವನ ಎಲ್ಲಿದೆ ಹೇಳಿ ನೀವೆಲ್ಲಾ ಅಂತಹ ಅನುಭಾವಿಗಳು ಅಂತಹ ಜೀವನವನ್ನು ಸಾಗಿಸುತ್ತಿದ್ದಿರಿ. ಇದೆ ಅಂತರಂಗ ಶುದ್ದಿ ಇದೆ ಬಹಿರಂಗ ಶುದ್ದಿ. ಸಾಕು ಒಳಗೆ ಸ್ವಚ್ಛ ಇರಬೇಕು ಹೊರಗೂ ಸ್ವಚ್ಛ ಇರಬೇಕು.
ಮನೆ ಸ್ವಚ್ಛವಿರಬೇಕು ಅಂಗಣವು ಸ್ವಚ್ಛವಿರಬೇಕು.
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಇರಲು, ಬಹುತೇಕ ಮನೆಯ ಮಾಲೀಕ ಮಲಗಿರಬೇಕು ಎನ್ನುವ ಹಾಗೆ ಆಗಬಾರದು. ಮನೆಯೊಳಗೆ ಸ್ವಚ್ಛತೆ ಇರಬೇಕು ಮನೆ ಹೊರಗೂ ಸ್ವಚ್ಛತೆ ಇರಬೇಕು ಆ ಮನೆಯವರ ಮುಖದ ಮೇಲೆ ಕಳೆ ಇರಬೇಕು. ಕೂಡಲಸಂಗಮದೇವ ಭಾವಾಂತರಂಗದಲ್ಲಿ ಬರಬೇಕು. ಅಂತಹ ಸಾವಿರ ಸಾವಿರ ಜನ ನೀವಿಲ್ಲಿ ಇರುವುದು ಬಸವಣ್ಣನವರಿಗೆ ಎಷ್ಟು ಆನಂದವಾಗಿರಬಹುದು, ಹಿಂದೆ ಆಗಿಲ್ಲ ಅಂತಲ್ಲ ಈಗಿನ ಕಾಲದಲ್ಲಿ ಆಗುವುದು ಮುಖ್ಯ. ಅದಕ್ಕೆ ಅವರು ಶ್ರೀಗಳ ರೂಪದಲ್ಲಿ ಬಂದು ನೋಡುತ್ತಿದ್ದಾರೆ. ಚನ್ನಬಸವ ಪಟ್ಟದೇವರಾಗಲಿ , ಬಸವಲಿಂಗ ಪಟ್ಟದೇವರು ಆಗಲಿ, ಇಲ್ಲಿರುವ ಅನುಭಾವಿಗಳು ಯಾರವರಲ್ಲ ಹೇಳಿ? ಅವರ ಮಾತುಗಳಾಡಿದರೆ ಬಸವಣ್ಣನವರು ಇಲ್ಲವೇನು. ಅವರು ಮಾತನಾಡಿದರೆ ಭಕ್ತಿ ಅವರು ಮಾತನಾಡಿದರೆ ಸಂತೋಷ ಹರಿದಾಡುತ್ತದೆ ಇವರೆಲ್ಲರೂ ಶರಣರು. ಮತ್ತೆ ಆ ಶರಣರು ಬರುತ್ತಾರೆ ಅನ್ನಬೇಡಿ. ಬಾ ಬಸವಣ್ಣ ಎನ್ನಬೇಡಿ ಬಂದಿದ್ದಾರೆ ಎನ್ನುವ ದೃಷ್ಟಿಯಿಂದ ನೋಡಿದರೆ ಇಲ್ಲಿ ಕುಳಿತವರೆಲ್ಲ ಬಸವಣ್ಣ , ಚನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ದರಾಮ, ಅಲ್ಲಮಪ್ರಭುದೇವ, ಅಕ್ಕನಾಗಮ್ಮ ನಂತವರೇ. ಅಕ್ಕನಾಗಮ್ಮ ಸಾವಿರ ಸಾವಿರ ಜನ ಬಂದರು ಮನೆಯೊಳಗೆ ಏನು ಇಲ್ಲದಿದ್ದರೂ ಏನಾದರೂ ಮಾಡಿ ಊಟ ಬಡಿಸುತ್ತಿದ್ದರು. ಅಂತ ಛಲಗಾರ್ತಿ ಆಕೆ. ಆದರೆ ಈಗಿನ ಕಾಲದಲ್ಲಿ ಮನೆಗೆ ಯಾರಾದರೂ ನಾಲ್ಕು ಜನ ಬಂದರೆ ಮನೆಯೊಳಗಿನವರು ಏನೆನ್ನುವರು, ಕೇಳುವುದಿಲ್ಲ ಹೇಳುವುದಿಲ್ಲ ಬಂದುಬಿಡುತ್ತಾರೆ ಎನ್ನುವರು. ಆದರೆ ಬಸವಣ್ಣನವರು ಕರೆಯುತ್ತಿದ್ದರು, ನೀಲಾಂಬಿಕೆ ಗಂಗಾಂಬಿಕೆ ಅಕ್ಕನಾಗಮ್ಮನವರ ವಿಶ್ವಾಸದಿಂದ ಅವರು ಮಾಡಿ ಬಡಿಸುತ್ತಾರೆ ಎನ್ನುವ ಭರವಸೆ.
ಎಷ್ಟೇ ಜನ ಬಂದರೂ ಸಹಿತ ಮಾಡುವವರು ಒಳಗೆ ಇದ್ದಾರೆ ನಾನು ಬರೀ ಕರೆಯುವವನು. ಹಾಗೆಯೇ ನೀವು ಕರೆಯಬೇಕು ನಿಮ್ಮ ಮನೆಯವರು ಮಾಡುತ್ತಿರಬೇಕು ಅದೇ ಬಸವಕಲ್ಯಾಣ.
ಎಲ್ಲಿ ದಾಸೋಹ ಇಲ್ಲವೋ ಅದು ಬಸವಕಲ್ಯಾಣ ಆಗುವುದಿಲ್ಲ. ಅವರು ಹೇಳಿದರು ಅರ್ಚನಾ ಅರ್ಪಣ ಅನುಭಾವ. ಅರ್ಚನಾ
ದೇವರನ್ನು ನೆನೆಸಿಕೊಳ್ಳಬೇಕು, ಅರ್ಪಣಾ ಪ್ರಸಾದವಿರಬೇಕು,
ತಲೆಗೆ ಅನುಭವ ಇರಬೇಕು. ಇನ್ನೇನು ಬೇಕು ಹಾಗೆ ಎಲ್ಲಿ ನಡೆಯುತ್ತದೆಯೋ ಅದುವೇ ಬಸವಕಲ್ಯಾಣ. ಅಂತಹ ಕಲ್ಯಾಣದಲ್ಲಿ ನೀವೆಲ್ಲಾ ಹುಟ್ಟಿದ್ದೀರಿ ಬದುಕನ್ನು ಕಟ್ಟು ಕೊಂಡಿದ್ದೀರಿ ಹಗಲು-ರಾತ್ರಿ ಬದುಕನ್ನು ಅವರು ನಡೆದಲ್ಲಿ ನೆಲದ ಮೇಲೆ ನಡೆಯುತ್ತಿದ್ದೇವೆ ಎಂತಹ ವೈಭವ ಇದು. ಇಲ್ಲಿ ಅಲ್ಲಮನಂತಹ ಶ್ರೇಷ್ಠ ಜಂಗಮರು, ಇಲ್ಲಿ ಸಿದ್ದರಾಮಣ್ಣನಂತಹ ಶ್ರೇಷ್ಠ ಯೋಗಿಗಳು ನಡೆದಾಡಿದರು, ಇಲ್ಲಿ ಚನ್ನಬಸವಣ್ಣನಂತಹ ಮಹಾಜ್ಞಾನಿಗಳು ಜ್ಞಾನವನ್ನು ಹರವಿದರು, ಭಕ್ತಿಯ ಹಾಸಿಗೆಯನ್ನು ಹಾಸಿದವರು ಬಸವಣ್ಣನವರು, ಇಂತಹ ನಾಡಿನಲ್ಲಿ ಬದುಕುತ್ತಿದ್ದಿರಲ್ಲ ಅದಕ್ಕಿಂತ ಸೌಭಾಗ್ಯ ಯಾವುದು. ಅದಕ್ಕಾಗಿ ಇಲ್ಲಿ ಬಿಟ್ಟು ಹೋಗುವ ವಿಚಾರ ಮಾಡಬೇಡಿ, ಇರುವ ವಿಚಾರ ಮಾಡಿ ಮಕ್ಕಳಾಗಲಿ ಮುಂದಿನ ಪೀಳಿಗೆಯವರಾಗಲಿ ಎಲ್ಲೇ ಹೋಗಿ ದುಡಿದರೂ ಕೊನೆಗೆ ಬಸವಕಲ್ಯಾಣದಲ್ಲಿರಬೇಕು ಎನಿಸಬೇಕು. ಅಂತಹ ಸುಂದರ ಪ್ರದೇಶದಲ್ಲಿ ನಾವೆಲ್ಲರೂ ಇದ್ದೇವೆ.
*ಸಂಗ್ರಹ: ???ಸಿದ್ದಲಿಂಗ ಶಿವಯೋಗಿ ಮಠಪತಿ ಉಚ್ಚ ತಾ ಭಾಲ್ಕಿ ಜಿ. ಬೀದರ