ದಾವಣಗೆರೆ.ಜೂ.೧೦; ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಎಲ್ಲಾ ಸಮುದಾಯಗಳ ರೈತರಿಗೆ ಸಾಲ ಸೌಲಭ್ಯ ಸಿಗಬೇಕು. ರೈತರಿಂದ ದೂರು ಬಂದರೆ ನಾನು ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.ಮಾಯಕೊಂಡ ಕ್ಷೇತ್ರದ ಚನ್ನಗಿರಿ ತಾಲೂಕಿನ ಗುಡದಕೊಮರನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಹಕಾರಿ ಬಂಧು ದಿ.ಕೆ.ಜಿ.ತಿಮ್ಮಪ್ಪನವರ ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಕೆಲವು ರೈತರಿಗೆ ಸಾಲಸೌಲಭ್ಯ ಸಿಗುತ್ತದೆ ಎಂಬ ಈ ಬಗ್ಗೆ ಸಾಕಷ್ಟು ದೂರುಗಳು ಇವೆ. ಇದು ಆಗಬಾರದು. ರೈತರು ಎಷ್ಟೇ ಜಮೀನು ಹೊಂದಿದ್ದರೂ ಅವರಿಗೆ ಸಾಲಸೌಲಭ್ಯ ಸಿಗಬೇಕು. ಜತೆಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ನೀವು ನನ್ನನ್ನು ನಂಬಿ ಮತ ಹಾಕಿದ್ದೀರಿ. ನಿಮಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು. ಸರ್ಕಾರಿ ಬಸ್ ಸೌಲಭ್ಯ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂಬುದು ಸಹಕಾರಿ ಬಂಧು ದಿ.ಕೆ.ಜಿ.ತಿಮ್ಮಪ್ಪನವರ ಕನಸು ಆಗಿತ್ತು ಎಂಬುದು ಗ್ರಾಮಸ್ಥರ ಆಶಯವಾಗಿದೆ. ಅವರು ಮಾಡಿರುವ ಒಳ್ಳೆಯ ಕೆಲಸಗಳಿಂದ ಇಂದು ಇಲ್ಲಿ ಅವರ ಪ್ರತಿಮೆ ಸ್ಥಾಪನೆ ಆಗಿದೆ. ಹೀಗಾಗಿ ನಾನು ಕೂಡ ಅವರ ಶಿಷ್ಯನಾಗಿ ಈ ಭಾಗಕ್ಕೆ ಬಸ್ ಸೌಲಭ್ಯ, ಹಾಸ್ಟೆಲ್ ಸೌಲಭ್ಯ ಕಲ್ಪಿಸಿ ಅವರ ಕನಸು ನನಸು ಮಾಡುತ್ತೇನೆ ಎಂದು ಭರವಸೆ ನೀಡಿದರು.ಮಾಯಕೊಂಡ ಕ್ಷೇತ್ರದ ಕಾಡಂಚಿನ ಭಾಗಗಳಲ್ಲಿ ಚಿರತೆ ಸೇರಿದಂತೆ ಸಾಕಷ್ಟು ಕಾಡು ಪ್ರಾಣಿಗಳ ದಾಳಿ ಹೆಚ್ಚಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇನೆ. ಕ್ಷೇತ್ರದ ಜನರ ಏನೇ ಸಮಸ್ಯೆಗಳಿದ್ದರೂ ಆ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಆಭಯ ನೀಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ, ಗುಡ್ಡದಕೊಮರನಹಳ್ಳಿ ಗ್ರಾಪಂ ಅಧ್ಯಕ್ಷ, ಆರ್.ಮಂಜುನಾಥ ರುದ್ರಪ್ಪ, ಡಾ.ಜೆ.ಆರ್.ಷಣ್ಮುಖಪ್ಪ, ಜಿ.ಎನ್.ಸ್ವಾಮಿ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗಣ್ಣ ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಗ್ರಾಮಸ್ಥರು ಭಾಗವಹಿಸಿದ್ದರು.