ಎಲ್ಲಾ ವಾರ್ಡ್‌ಗಳಲ್ಲಿ ಲಸಿಕೆಗೆ ಒತ್ತಾಯ

ರಾಯಚೂರು.ಜೂ.೦೩- ಕೊರೊನಾ ಲಸಿಕೆ ಹಾಕಲು ಪ್ರತಿ ವಾರ್ಡಗಳಲ್ಲಿ ಕೇಂದ್ರ ಆರಂಭಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಂಟಿ ಕಾರ್ಯದರ್ಶಿ ಕೆ.ಪ್ರವೀಣ್ ಪ್ರಭು ಶೆಟ್ಟರ್ ಅವರು ಆಗ್ರಹಿಸಿದ್ದಾರೆ.
ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೇ, ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ತಿಳಿಸಿ ಹಾಗೂ ಪ್ರತಿ ವಾರ್ಡ್ ಗಳಲ್ಲಿ ಕೋವಿಡ್ ಲಸಿಕೆ ಕೇಂದ್ರ ಆರಂಭಿಸಬೇಕು. ವಯಸ್ಸಾದವರು, ಅನಾರೋಗ್ಯ ಜನರು ಲಸಿಕೆ ಕೇಂದ್ರಕ್ಕೆ ಹೋಗಲು, ಬರಲು ಬಹಳ ತೊಂದರೆಯಾಗುತ್ತಿದೆ. ಕೆಲ ವಾರ್ಡಗಳಿಗೆ ಬಹಳ ದೂರ ಇರುತ್ತವೆ. ಅದರಲ್ಲಿ ಲಾಕ್ ಡೌನ್ ಇದೆ. ಹೊರಗಡೆ ಪೊಲೀಸರಿಗೆ ತಿಳಿಸಿ ಹೋಗಿ ಬರುವುದು ಬಹಳ ಕಷ್ಟ. ಹೋದ ಮೇಲೆ ಲಸಿಕೆ ಇಲ್ಲ ಎಂದರೆ ಇನ್ನೂ ಕಷ್ಟ. ದಯವಿಟ್ಟು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ನೀವು ಪತ್ರಿಕೆಗಳಲ್ಲಿ ಯಾವ ದಿನ ಸ್ಥಳ ಮತ್ತು ಸಮಯ ಎಂದು ವೇಳಾಪಟ್ಟಿ ಮತ್ತು ಮೊದಲನೆಯ ಲಸಿಕೆ ಅಥವಾ ಎರಡನೆಯ ಲಸಿಕೆ ಹಾಗೂ ಯಾವ ಕಂಪನಿಯ ಲಸಿಕೆ ಯಾವ ವಯಸ್ಸಿನವರಿಗೆ ಎಂದು ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ. ಸಾರ್ವಜನಿಕರನ್ನು ಪರಿದಾಡಿಸಬೇಡಿ ಎಂದು ಮನವಿ ಮಾಡಿದ್ದಾರೆ.