ಎಲ್ಲಾ ವರ್ಗದ ಹಿತ ಕಾಪಾಡುವುದಕ್ಕೆ ಜೆಡಿಎಸ್‍ಗೆ ಸ್ವತಂತ್ರವಾಗಿ ಆಡಳಿತ ನಡೆಸಲು ಅವಕಾಶ ನೀಡಿ:ಎಚ್‍ಡಿಕೆ ಮನವಿ

ಬಸವಕಲ್ಯಾಣ:ಮಾ.26: ಬಡವರು ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಹಿತ ಕಾಪಾಡುವುದಕ್ಕೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಜೆಡಿಎಸ್ ಪಕ್ಷಕ್ಕೆ ಸ್ವತಂತ್ರವಾಗಿ ಆಡಳಿತ ನಡೆಸಲು ಅವಕಾಶ ನೀಡಬೇಕು ಅದು ಕ್ಷೇತ್ರದಲ್ಲಿ ಎದುರಾಗಿರುವ ಉಪ ಚುನಾವಣೆಯ ಮೂಲಕ ನಾಂದಿ ಹಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಕ್ಷೇತ್ರದ ಮತದಾರರ ಬಳಿ ಮನವಿ ಮಾಡಿದರು.

ನಗರದ ಅಕ್ಕ ಮಹಾದೇವಿ ಕಾಲೇಜು ಮೈದಾನದಲ್ಲಿ ಗುರುವಾರ ಸಂಜೆ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡಿ, ಜೆಡಿಎಸ್‍ಗೆ ಸ್ವತಂತ್ರವಾಗಿ ಆಡಳಿತ ನಡೆಸಲು ಅವಕಾಶ ಸಿಕ್ಕರೆ ಇಡೀ ದೇಶವೇ ಇತ್ತ ತಿರುಗಿ ನೋಡುವಂತೆ ಅಭಿವೃದ್ದಿ ಪಡಿಸಲಾಗುವದು ಎಂದ ಅವರು, ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡುವ ಮೂಲಕ ಅವರ ಕಷ್ಟಗಳಲ್ಲಿ ಭಾಗಿಯಾಗಿದ್ದೇನೆ ಎಂದರು.

ನನ್ನ ಅವಧಿಯಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿಯೇ 89 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಜೊತೆಗೆ 75 ಕೋಟಿ ಹಣ ಅಭಿವೃದ್ದಿಗೆ ನೀಡಲಾಗಿದ್ದು ಜಿಲ್ಲೆಗೆ ಕೆರೆ ತುಂಬಿಸಲು 300 ಕೋಟಿ ಹಣ ನೀಡಲಾಗಿತ್ತು. ಆದರೆ ಬಿಜೆಪಿ ಸರಕಾರ ರಚನೆಯಾದ ಮೇಲೆ ನಾನು ನೀಡಿರುವ ಅನುದಾನವನ್ನು ವಾಪಸ್ ಪಡೆಯುವ ಮೂಲಕ ಈ ಭಾಗದ ಜನರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಬಿಜೆಪಿ ವಿರುದ್ದ ಹರಿ ಹಾಯ್ದರು.

ಈ ಹಿಂದೆ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿರುವ ಜೆಡಿಎಸ್ ಮಾರುತಿರಾವ ಮುಳೆಗೆ ಒಂದು ಬಾರಿ ಅವಕಶ ನೀಡಿದರೆ, ಮತ್ತೆರಡು ಬಾರಿ ಮಲ್ಲಿಕಾರ್ಜುನ ಖೂಬಾ ಅವರು ನಮ್ಮ ಪಕ್ಷದಿಂದ ಗೆದ್ದಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ಏಳು ಬಾರಿ ಗೆದ್ದಿರುವ ಜೆಡಿಎಸ್‍ಗೆ ಈ ಬಾರಿಯೂ ಕ್ಷೇತ್ರದ ಜನರು ಆಶಿರ್ವಾದ ಮಾಡಬೇಕು ಎಂದು ಕೋರಿದರು.

ಏಪ್ರೀಲ 3ರಿಂದ 15ನೇ ತಾರಿಕಿನÀವರೆಗೂ ನಾನು ಮತ್ತು ನಮ್ಮ ಪಕ್ಷದ ಪ್ರಮುಖ ನಾಯಕರು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡುವ ಮೂಲಕ ಮತದಾರರ ಮನೆ-ಬಾಗಿಲಿಗೆ ತೆರಳುತ್ತೇವೆ. ನಮ್ಮ ಸರಕಾರದ ಅವಧಿಯಲ್ಲಿ ಮಾಡಿರುವ ಸಾಧನೆ ನಿಮ್ಮ ಮುಂದೆ ಇಡುವ ಮೂಲಕ ನಿಮ್ಮ ಬಳಿ ಮತ ಕೇಳುವದಾಗಿ ತಿಳಿಸಿದರು. ಕಾಂಗ್ರೇಸ್ ಹಾಗೂ ಬಿಜೆಪಿಯವರಿಗೆ ಚುನಾವಣೆಯಲ್ಲಿ ಸೋಲಿಸಲು ನಿಮ್ಮ ಬಳಿ ಬಂದಿದ್ದೇನೆ. ಬಿಜೆಪಿಯವರು ನೀಡುವ ಹಣಕ್ಕೆ ಮರುಳಾಗದಿರಿ ನಿಮ್ಮ ತೆರಿಗೆ ಹಣ ಲೂಟಿ ಹೊಡೆದು ನಿಮಗೇ ನೀಡುತ್ತಾರೆ ಹೀಗಾಗಿ ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಠ ಕಲಿಸಬೇಕು ಎಂದರು.

ಬಿಜೆಪಿ ಸರಕಾರ ಜಾತಿ ರಾಜಕಾರಣ ಮಾಡಲು ಮುಂದಾಗಿದೆ. ಜಾತಿಗೊಂದು ನಿಗಮ ಸ್ಥಾಪಿಸಿದೆ. ಆದರೆ ಇವರ ಬಳಿ ಹಣವೇ ಇಲ್ಲ ಎಂದು ಎಚ್‍ಡಿಕೆ ಕುತಂತ್ರ ರಾಜಕಾರಣ ಮಾಡಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರು. ಆದರೆ ಅವರು ಅಧಿಕಾರಕ್ಕೆ ಬಂದ ಮೇಲೆ ಕೋವಿಡ್, ನೆರೆ ಬಂದು ಜನ ಜೀವನ ಅಸ್ಥ ವ್ಯಸ್ಥಗೊಂಡಿದೆ. ಅವರ ಮನಸ್ಸು ಶುದ್ದ ಇದ್ದರೆ ದೇವರು ಅವರಿಗೆ ಇಷ್ಟೊಂದು ಕಷ್ಟ ಕೊಡುತ್ತಿರಲಿಲ್ಲ ಎಂದು ಟೀಕಿಸಿದರು.

ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರು ಜೆಡಿಎಸ್‍ಗೆ ಮತ ನೀಡಿದರೆ ಅದು ಬಿಜೆಪಿಯ ಬಿ ಟೀಂಗೆ ಮತ ನೀಡಿದಂತೆ ಎಂದು ಕಾಂಗ್ರೇಸ್ ಪಕ್ಷದವರು ಅಪ ಪ್ರಚಾರ ನಡೆಸಿದರು. ಇಂದೇನಾಗಿದೆ ಯಾರು ಅಧಿಕಾರದಲ್ಲಿದ್ದಾರೆ. ಕಾಂಗ್ರೇಸ್ ಅಪ ಪ್ರಚಾರ ನಡೆಸಿದ್ದರಿಂದಲೇ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈಗಲಾದರೂ ಈ ಕ್ಷೇತ್ರದ ಮತದಾರರು ಅರ್ಥ ಮಾಡಿಕೊಂಡು ಜೆಡಿಎಸ್ ಪಕ್ಷ ಅಭ್ಯರ್ಥಿ ಸೈಯದ್ ಯಶ್ರಬ್ ಅಲಿ ಖಾದ್ರಿಗೆ ಮತ ನೀಡುವಂತೆ ಮನವಿ ಮಾಡಿದರು.

ಕೇಂದ್ರ ಸರಕಾರ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಹೇರಿ ಜನರಿಗೆ ಅತಂತ್ರ ಸ್ಥಿತಿಗೆ ಸಿಲುಕಿಸಿದೆ ಇಂದು ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ವಿರೋಧ ಪಕ್ಷದವರನ್ನು ದಮನಗೊಳಿಸುವ ಕೆಲಸ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಖಾಸಗೀ ಶಾಲೆಗಳಲ್ಲಿ ನೀಡುವ ಶಿಕ್ಷಣವನ್ನೇ ಸರಕಾರದ ಶಾಲೆಯಲ್ಲಿ ನೀಡಲಾಗುವದು ರಾಜ್ಯದ 5600 ಗ್ರಾಪಂಗಳಿಗೆ ಒಂದು ಗ್ರಾಪಂ ಐದು ಕೋಟಿ ವೆಚ್ಚ ಮಾಡಿ ಶಾಲೆ ತೆರೆದು ಶಿಕ್ಷಣ ಕಲ್ಪಿಸಲು ಮುಂದಾಗಲಾಗುವದು ಎಂದರು.

ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರ ಮಾತನಾಡಿ, ಸಾಲಾ ಮನ್ನಾ ಸೇರಿದಂತೆ ಅನೇಕ ಜನಪರ ಯೊಜನೆಗಳನ್ನು ಜಾರಿಗೆ ತರುವ ಮೂಲಕ ಹಿಂದಿನ ಜೆಡಿಎಸ್ ಪಕ್ಷದ ಸರಕಾರದಿಂದ ನಾಡಿನ ಸಮಗ್ರ ಪ್ರಗತಿಗೆ ಮಹತ್ವದ ಕೊಡುಗೆ ನೀಡಲಾಗಿದೆ. ಸಮಾಜದ ಸರ್ವರ ಹಿತ ಕಾಪಾಡಲು ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸುವ ಮೂಲಕ ಭ್ರಷ್ಟ ಬಿಜೆಪಿ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.

ಉಪ ಚುನಾವಣೆ ವೇಳೆ ಬಿಜೆಪಿ ಪಕ್ಷ ಹಣದ ಹೊಳೆ ಹರಿಸಲಿದೆ. ಆದರೆ ಜಗತ್ತಿಗೆ ಮಾನವೀಯತೆ ಸಂದೇಶ ಸಾರಿದ ವಿಶ್ವ ಗುರು ಬಸವಣ್ಣನವರ ಕಾಯಕ ಭೂಮಿಯಲ್ಲಿ ಬಿಜೆಪಿ ಆಟ ನಡಿಯಲ್ಲ. ಇಲ್ಲಿಯ ಜನ ಅತ್ಯಂತ ಪ್ರಬುದ್ಧರಾಗಿದ್ದಾರೆ ಎಂದ ಅವರು, ಸಮಾಜದ ಸರ್ವರ ಹಿತ ಕಾಪಾಡಲು ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಖಾಶೆಂಪೂರ ಮನವಿ ಮಾಡಿದರು.

ಶಾಸಕ ವೆಂಕಟ್‍ಗೌಡ ನಾಡ್‍ಗೌಡ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಂದ ಪ್ರಗತಿ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ನಾಡಿನ ಸಮಗ್ರ ಪ್ರಗತಿಗೆ ಸಾಧ್ಯವಿದೆ. ನೆಲ, ಜಲ, ಭಾಷೆ ಸಂರಕ್ಷಣೆಗೆ ಪ್ರಾದೇಶಿಕ ಪಕ್ಷಗಳು ನೀಡಿದ ಕೊಡುಗೆ ಮಹತ್ವದ್ದಾಗಿದೆ ಎಂದ ಅವರು, ವೀರಶೈವ ಲಿಂಗಾಯತರಿಗೆ ಜೆಡಿಎಸ್ ಪಕ್ಷದಲ್ಲಿ ಮಹತ್ವದ ಸ್ಥಾನ, ಮಾನ ಕಲ್ಪಿಸಲಾಗಿದೆ. ವೀರಶೈವ ಲಿಂಗಾಯತ ಮುಖಂಡರಿಗೆ ಶಾಸಕ, ಸಚಿವರನ್ನಾಗಿ ಮಾಡಿದ ಕೀರ್ತಿ ಜೆಡಿಎಸ್ ಪಕ್ಷಕ್ಕೆ ಸಲ್ಲುತದೆ ಎಂದರು.

ಮುಖಂಡರಾದ ನಾಸೀರ ಹುಸೇನ್, ಅಯಿಲಿನ್ ಮಠಪತಿ, ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪೂರೆ, ಜಿಪಂ ಸದಸ್ಯ ಆನಂದ ಪಾಟೀಲ್, ಪಕ್ಷದ ಅಭ್ಯರ್ಥಿ ಸೈಯದ್ ಯಶ್ರಬ್ ಅಲಿ ಖಾದ್ರಿ, ತಿಮ್ಮಯ್ಯ ಪುರಲೆ, ಪಕ್ಷದ ತಾಲೂಕು ಅಧ್ಯಕ್ಷ ಶಬ್ಬೀರ ಪಾಶಾ ಮುಜಾವರ, ಕಾರ್ಯಾಧ್ಯಕ್ಷ ರಾಜಕುಮಾರ ಸುಗರೆ, ತುಕಾರಾಮ ಮಲ್ಲಪ್ಪ, ಬಂಡೆಪ್ಪ ಮೇತ್ರೆ, ಮಹೇಶ ಅಗಡಿ, ಅನೀಲ ಪರೆಪ್ಪ, ಸುಶೀಲ್ ಅವಸ್ತಿ, ಸೂರ್ಯಕಾಂತ ರಾಜೋಳೆ, ಶಿವಪುತ್ರ ಮಾಳಗೆ, ಡಾ: ಇನಾಮದಾರ, ಚಂದ್ರಕಾಂತ ಲಾತೂರೆ, ಸಂಜಯ ಶ್ರೀವಾಸ್ತವ, ನದೀಮ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಮೆರವಣಿಗೆ: ಇದಕ್ಕು ಮುನ್ನ ನಗರದ ಐತಿಹಾಸಿಕ ಕೋಟೆಯಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಅಕ್ಕ ಮಹಾದೇವಿ ಕಾಲೇಜು ಮೈದಾನದವರೆಗೂ ರ್ಯಾಲಿ ಜರುಗಿತು. ತೆರೆದ ವಾಹನದಲ್ಲಿ ಎಚ್‍ಡಿಕೆ, ಪಕ್ಷದ ಅಭ್ಯರ್ಥಿ ಸೈಯದ್ ಯಶ್ರಬ್ ಅಲಿ ಖಾದ್ರಿ, ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಭಾಜಾ ಭಜಂತ್ರಿಯೊಂದಿಗೆ ಹೆಜ್ಜೆ ಹಾಕಿದ ಕಾರ್ಯಕರ್ತರು ಮುಂದೆ ಕಾಲ್ನಡಿಗೆಯಲ್ಲಿ ಸಾಗಿದರೆ ತೆರೆದ ವಾಹನದಲ್ಲಿ ಪಕ್ಷದ ನಾಯಕರು ಜನರತ್ತ ಕೈ ಬೀಸಿ ನಮಿಸುತ್ತಿದ್ದರು. ರಸ್ತೆಯ ಎರಡೂ ಬದಿಯಲ್ಲಿ ನಿಂತು ಜನರು ನಾಯಕರನ್ನು ನೋಡುತ್ತಿದ್ದರೆ ಅವರತ್ತ ನಾಯಕರು ಕೈ ಮುಗಿಯುತ್ತಿದ್ದರು.