ಬೀದರ, ಮಾ. 31: ಬೀದರ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಇದನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಕರ್ನಾಟಕ ಸಾರ್ವತ್ರಿಕಾ ಚುನಾವಣೆ-2023ರ ಪ್ರಯುಕ್ತ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಕಟ್ ಔಟ್, ಪೋಸ್ಟರ್, ಬಂಟಿಂಗ್, ಧ್ವಜ, ಗೋಡೆ ಬರಹ ಮತ್ತು ಬ್ಯಾನರಗಳನ್ನು ಕೂಡಲೇ ತೆರೆವುಗೊಳಿಸಬೇಕು. ಚಾಲ್ತಿಯಲ್ಲಿರುವ ಕಾಮಗಾರಿಗಳು ಮಾತ್ರ ಮುಂದುವರೆಸುವುದು ಹೊಸದಾಗಿ ಯಾವುದೇ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವಂತಿಲ್ಲ. ಅಭ್ಯರ್ಥಿಯು ನಾಮಪತ್ರ ಹಾಕುವವರೆಗೂ ರಾಜಕೀಯ ಪಕ್ಷಕ್ಕೆ ಖರ್ಚು ಹಾಕಲಾಗುವುದು. ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ನಂತರ ಖರ್ಚು ಅವರಿಗೆ ಹಾಕಲಾಗುತ್ತದೆ. ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಿಗೆ ಜಿಲ್ಲೆಯಾದ್ಯಂತ ಪ್ರಯಾಣಿಸಲು ಪಕ್ಷ ಒಂದಕ್ಕೆ ಮೂರು ವಾಹನಗಳಿಗೆ ಅನುಮತಿ ನೀಡಲಾಗುವುದು. ನಾಮಪತ್ರ ದಿನದಿಂದ ಅಭ್ಯರ್ಥಿಯು ಮತಕ್ಷೇತ್ರದಲ್ಲಿ ಸಂಚಾರಿಸಲು ಆರ್.ಓ. ಅವರಿಂದ ಅನುಮತಿ ಪಡೆಯಬೇಕು. ಅನುಮತಿ ಇಲ್ಲದ ವಾಹನಗಳಿಗೆ ಧ್ವಜ, ಪೋಸ್ಟರ್ ಹಾಗೂ ಬ್ಯಾನರ ಅಂಟಿಸಿದಲ್ಲಿ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜಕೀಯ ಪಕ್ಷಗಳು ಸಭೆ-ಸಮಾರಂಭ ಮತ್ತು ಮೆರವಣಿಗಳಿಗೆ ಆರ್.ಓ. ಅವರಿಂದ ಸುವಿಧ ಆನ್‍ಲೈನ್ ಪೋರ್ಟಲ್ ಮೂಲಕ ಅನುಮತಿ ಪಡೆಯಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಒಂದು ತಾಸು ಮೊದಲು ಮತ್ತು ಒಂದು ತಾಸು ನಂತರದ ವರೆಗೆ ಮಾತ್ರ ಬ್ಯಾನರ ಮತ್ತು ಪೋಸ್ಟರ್‍ಗಳನ್ನು ಅಳವಡಿಸಬೇಕು.
ಹೆಲಿಕ್ಯಾಪ್ಟರ್ ಅನುಮತಿಯನ್ನು ಪಡೆಯಬೇಕು. ಸರ್ಕಾರಿ ಅತಿಥಿ ಗೃಹಗಳು ಮತ್ತು ಸರ್ಕಾರಿ ವಾಹನಗಳನ್ನು ಹಿಂಪಡೆಯಲಾಗಿದೆ. ಆಯುಧಗಳನ್ನು ಹಿಂತಿರುಗಿಸಲು ಆದೇಶಿಸಲಾಗಿದೆ.
ಸೀರೆ, ಕುಕ್ಕರ, ಗಡಿಯಾರ ಇತ್ಯಾಧಿಗಳ ಮೇಲೆ ಭಾವಚಿತ್ರ ಅಥವಾ ಹೆಸರಿರುವವರ ಮೇಲೆ ಮೊಕ್ಕದ್ದಮೆಯನ್ನು ದಾಖಲಿಸಲಾಗುವುದು. ಸಾರ್ವಜನಿಕರು ಛಿ-ಗಿIಉIಐ ಂಠಿಠಿ ಮೂಲಕ ದೂರುಗಳನ್ನು ದಾಖಲಿಸಬಹುದಾಗಿದೆ. ಆರ್.ಓ. ಕಂಟ್ರೋಲ್ ರೂಂ ಮತ್ತು ಡಿ.ಸಿ ಕಂಟ್ರೋಲ್ ರೂಂ. ಗೆ ದೂರಗಳನ್ನು ದಾಖಲಿಸಬಹುದು. ಎಫ್.ಎಸ್.ಟಿ ಮತ್ತು ಎಸ್.ಎಸ್.ಟಿ ತಂಡಗಳು ಸಕ್ರೀಯವಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಚೆಕ್ ಪೋಸ್ಟ್‍ಗಳಲ್ಲಿ ದಾಖಲೆಗಳಿಲ್ಲದೆ ಸಿಗುವ ಹಣದ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ತಂಡ ಕ್ರಮವಹಿಸಲಿದೆ. ಒರ್ವ ವ್ಯಕ್ತಿಯು 50,000 ರೂಪಾಯಿಗಳ ವರೆಗೆ ಹಣ ಇಟ್ಟು ಕೊಳ್ಳಬಹುದಾಗಿದೆ. ಸ್ಟಾರ್ ಪ್ರಚಾರಕರ ಖರ್ಚಿನ ಮಿತಿ 1 ಲಕ್ಷದ ವರೆಗೆ ಇದ್ದು, ಅಭ್ಯರ್ಥಿಯು 40 ಲಕ್ಷದ ವರೆಗೆ ಚುನಾವಣೆ ಖರ್ಚು ವೆಚ್ಚಗಳನ್ನು ಮಾಡಬಹುದಾಗಿದೆ.
ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶ, ಮಾಧ್ಯಮ ಮೇಲ್ವಿಚಾರಣಾ ಕೋಶ ಮತ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಫಾರಂ-6 ಅರ್ಜಿಯನ್ನು ಏಪ್ರಿಲ್ 10 ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆರ್.ಓ ಕಚೇರಿಯಲ್ಲಿ ಸಿಂಗಲ್ ವಿಂಡೋ ಸಿಸ್ಟಮ್ ಅನ್ನು ಜಾರಿಗೊಳಿಸಲಾಗಿದೆ. ದಿವ್ಯಾಂಗರಿಗೆ ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮತದಾನ ಕೇಂದ್ರಕ್ಕೆ ಕರೆ ತರಲು ಅಟೋ ವ್ಯವಸ್ಥೆ ಮಾಡಲಾಗಿದ್ದು, ಆಟೋದಲ್ಲಿ ಬರಲು ತೊಂದರೆ ಇದ್ದವರಿಗೆ ಪೋಸ್ಟಲ್ ಬ್ಯಾಲೇಟ್ ವ್ಯವಸ್ಥೆ ಮಾಡಲಾಗಿದೆ.
ಮತದಾನ ಕೇಂದ್ರಗಳಿಗೆ ರ್ಯಾಪ್, ಶೌಚಾಲಯ ಮತ್ತು ಕುಡಿಯುವ ನೀರು ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಸಿಬ್ಬಂದಿಗಳಿಗೆ ಕೇಂದ್ರ ಸ್ಥಾನದಲ್ಲಿರಲು ಮತ್ತು ದೀರ್ಘ ರಜೆ ಮೇಲೆ ತೆರಳದಿರಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 13,48,019 ಮತದಾರರಿದ್ದು, ಪುರಷ ಮತದಾರರು-6,96,687 ಮತ್ತು ಮಹಿಳಾ ಮತದಾರರು-6,51,332 ಮತದಾರರು ಹಾಗೂ ಅಂಗವಿಕಲ ಮತದಾರರು-22,883 ಹಾಗೂ ತೃತೀಯ ಲಿಂಗದ ಮತದಾರರು-43 ಮತದಾರರು ಇದ್ದು, ಜಿಲ್ಲೆಯಲ್ಲಿ ಒಟ್ಟು 1,504 ಮತಗಟ್ಟೆಗಳು ಇವೆ. ಇದರಲ್ಲಿ 348 ಸುಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದರು.
ಈ ಬಾರಿ ಒಟ್ಟು 44 ವಿಶೇಷ ಮತಗಟ್ಟೆಗಳು ನಿರ್ಮಿಸಲಾಗುತ್ತಿದೆ. ಫ್ಲೈಯಿಂಗ್ ಸ್ವ್ಕಾಡ್‍ನ 38 ತಂಡಗಳು ಹಗಲು-ರಾತ್ರಿ ಸೇವೆ ಸಲ್ಲಿಸುತ್ತಿವೆ. ಹಾಗೂ ಜಿಲ್ಲೆಯಲ್ಲಿ 30 ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿವೆ.
ಏಪ್ರಿಲ್ 13 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಏಪ್ರಿಲ್ 20 ರಂದು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರಲಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮೇ 10 ರ ಬುಧವಾರ ಮತದಾನ ನಡೆಯಲಿದ್ದು, ಮೇ 13 ರಂದು ಮತ ಏಣಿಕೆ ನಡೆಯಲಿದೆ. ಮೇ 15 ರೊಳಗೆ ಮತದಾನದ ಪ್ರಕ್ರಿಯೆ ಸಂಪೂರ್ಣ ಮುಗಿಯಲಿದೆ.
ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ ಈ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಬೀದರ ದೂರವಾಣಿ ಸಂಖ್ಯೆ: 08482-224316, 08482-224317, ಸಹಾಯಕ ಆಯುಕ್ತರು, ಬಸವಕಲ್ಯಾಣ ಮೊಬೈಲ್ ಸಂಖ್ಯೆ: 9480347656, ಸಹಾಯಕ ಆಯುಕ್ತರು ಹುಮನಾಬಾದ ದೂರವಾಣಿ ಸಂಖ್ಯೆ: 08483-270051, ಸಹಾಯಕ ಆಯುಕ್ತರು ಬೀದರ ದಕ್ಷಿಣ ದೂರವಾಣಿ ಸಂಖ್ಯೆ: 08482-226459, 08482-221191, ಸಹಾಯಕ ಆಯುಕ್ತರು ಬೀದರ ದೂರವಾಣಿ ಸಂಖ್ಯೆ: 08482-225373, 08482-226373, ಸಹಾಯಕ ಆಯುಕ್ತರು ಭಾಲ್ಕಿ ದೂರವಾಣಿ ಸಂಖ್ಯೆ: 08484-260160, 08484-262218, ಸಹಾಯಕ ಆಯುಕ್ತರು ಔರಾದ ದೂರವಾಣಿ ಸಂಖ್ಯೆ: 08485-280024 ಗಳಿಗೆ ಸಂಪರ್ಕಿಸಬಹುದಾಗಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾಂ ಎಂ. ಅವರು ಮಾತನಾಡಿ, ಮತಗಟ್ಟೆಗಳಿಗೆ ಈಗಾಗಲೇ ಕುಡಿಯುವ ನೀರು, ಶೌಚಾಲಯ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಹಾಗೂ 2018 ರಲ್ಲಿ ಕಡಿಮೆ ಮತದಾನವಾಗಿರುವ ಕ್ಷೇತ್ರಗಳಲ್ಲಿ ಸ್ವೀಪ್ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಪ್ರಚಾರ ಮಾಡುವ ಮೂಲಕ ಜನರು ಹೆಚ್ಚು ಹೆಚ್ಚು ಮತದಾನ ಮಾಡಲು ಅರಿವು ಮೂಡಿಸಲಾಗುತ್ತದೆ ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಕಾಮಗಾರಿಗಳು ಹಾಗೂ ನರೇಗಾ ಕಾಮಗಾರಿಗಳು ಮುಂದುವರೆಯುತ್ತವೆ. ಆದರೆ ಹೊಸದಾಗಿ ಯಾವುದೇ ಕಾಮಗಾರಿಗಳು ಪ್ರಾರಂಭ ಮಾಡುವಂತಿಲ್ಲ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಚನ್ನಬಸವಣ್ಣ ಎಸ್.ಎಲ್. ಅವರು ಮಾತನಾಡಿ, ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಅನುಮತಿ ಪಡೆದು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಒಂದು ವೇಳೆ ಅನುಮತಿ ಪಡೆಯದ ಕಾರ್ಯಕ್ರಮಗಳನ್ನು ಮಾಡಿದರೆ ಅಂತಹವರ ಮೇಲೆ ಕೇಸ ದಾಖಲಿಸಬೇಕಾಗುತ್ತದೆ ಮತ್ತು ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ಸಮಯದಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಬೇಕು. ಪೊಲೀಸರು ನಿಗದಿಪಡಿಸಿ ಗುರುತು ಮಾಡಿದ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬೇಕು. ಚುನಾವಣಾ ಕರ್ತವ್ಯಕ್ಕೆ ಬೇರೆ ರಾಜ್ಯಗಳಿಂದ ಅರೆ ಸೇನಾ ಪಡೆಗಳು ಆಗಮಿಸುತ್ತಿದ್ದು ಅವರೊಂದಿಗೆ ಯಾರು ವಾದ ವಿವಾದ ಮಾಡಬಾರದು ಮತ್ತು ಅವರು ಯಾರ ಮಾತನ್ನು ಕೇಳುವುದಿಲ್ಲ ತಮ್ಮ ಯಾವುದಾದರೂ ಸಮಸ್ಯೆಗಳಿದ್ದರೆ ಮೊದಲು ನಮ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಗಮನಕ್ಕೆ ತರಬೇಕು. ಬೈಕ್ ರ್ಯಾಲಿ ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೇಘಣ್ಣನವರ, ಚುನಾವಣಾ ತಹಸೀಲ್ದಾರ ಕಚೇರಿಯ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಪ್ರತಿನಿಧಿ ಎಂ.ಡಿ.ಸಮಿ, ಬಿ.ಜೆ.ಪಿ.ಪಕ್ಷದ ಜಿಲ್ಲಾ ಸಂಚಾಲಕರಾದ ಬಸವರಾಜ ಪವಾರ, ಜೆ.ಡಿ.ಎಸ್.ಪಕ್ಷದ ಪ್ರತಿನಿಧಿ ಅಶೋಕ ಕೋಡಗೆ, ಸಿಪಿಐ ಪಕ್ಷದ ಪ್ರತಿನಿಧಿ ಬಾಬುರಾವ ಹೊನ್ನಾ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.