ಎಲ್ಲಾ ಮಾದರಿಯ ಕ್ರಿಕೆಟ್ ಗೆ ರಾಬಿನ್ ಉತ್ತಪ್ಪ ಗುಡ್ ಬೈ

ಬೆಂಗಳೂರು, ಸೆ.14- ರಾಬಿನ್ ಉತ್ತಪ್ಪ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ರಾಬಿನ್ ಉತ್ತಪ್ಪ ನಿವೃತ್ತಿಯ ಘೋಷಿಸಿದ್ದು, ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ನಿವೃತ್ತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ವೈಟ್‌ಬಾಲ್ ಕ್ರಿಕೆಟ್‌ನ ಎರಡು ಮಾದರಿಯಲ್ಲಿಯೂ ರಾಬಿನ್ ಉತ್ತಪ್ಪ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ರಾಬಿನ್ ಉತ್ತಪ್ಪ ಆರಂಭದಲ್ಲಿಯೇ ಸಾಕಷ್ಟು ಭರವಸೆಯನ್ನು ಹುಟ್ಟುಹಾಕಿದ್ದರು. ನಂತರ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಸದ್ದು ಮಾಡಲು ಸಾಧ್ಯವಾಗಲಿಲ್ಲ. ಆದರೆ ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ.
ವೃತ್ತಿಪರ ಕ್ರಿಕೆಟ್ ಆಡಲು ಆರಂಭಿಸಿ ಇಪ್ಪತ್ತು ವರ್ಷಗಳಾಗಿದೆ. ನನ್ನ ದೇಶ ಹಾಗೂ ನನ್ನ ರಾಜ್ಯವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದು ಶ್ರೇಷ್ಠ ಗೌರವವಾಗಿದೆ. ಈ ಸುಂದರವಾದ ಪ್ರಯಣ ಬಹಳಷ್ಟು ಏಳು ಬೀಳುಗಳಿಂದ ಕೂಡಿದೆ. ಈ ಸಂದರ್ಭದಲ್ಲಿ ನಾನು ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಂದ ನಿವೃತ್ತನಾಗುತ್ತಿದ್ದೇನೆ. ನನ್ನ ಪುಟ್ಟ ಕುಟುಂಬದೊಂದಿಗೆ ಸಮಯ ಕಳೆಯಲು ನಾನು ಬಯಸಿದ್ದು ಜೀವನದ ಮತ್ತೊಂದು ಹಂತವನ್ನು ಎದುರು ನೋಡುತ್ತಿರುವುದಾಗಿ ಉತ್ತಪ್ಪ ಬರೆದುಕೊಂಡಿದ್ದಾರೆ.
ರಾಬಿನ್ ಉತ್ತಪ್ಪ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. 2006ರಲ್ಲಿ ಇಂಗ್ಲೆಂಡ್ ವಿರುದ್ಧ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ್ದರು. ಮೊದಲ ಪಂದ್ಯದಲ್ಲಿಯೇ ಭರ್ಜರಿ 86 ರನ್ ಸಿಡಿಸಿ ಮಿಂಚಿದ್ದರು ಉತ್ತಪ್ಪ. ಒಟ್ಟು 46 ಏಕದಿನ ಹಾಗೂ 13 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಆಪ್ರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿ ಟಿ20 ವಿಶ್ವಕಪ್ ಟೂರ್ನಿಯನ್ನು ಗೆದ್ದ ಭಾರತ ತಂಡದ ಭಾಗವಾಗಿದ್ದರು.