ಎಲ್ಲಾ ಭಾಷೆ ಒಪ್ಪಿಕೊಳ್ಳಿ, ಕನ್ನಡ ಭಾಷೆಯನ್ನು ಅಪ್ಪಿಕೊಳ್ಳಿ : ನಾಗಾಭರಣ

ಬೀದರ:ಜ.6: ಪ್ರತಿಯೊಂದು ಭಾಷೆಗಳು ದೇವರ ಭಾಷೆಗಳಾಗಿವೆ. ಹೀಗಾಗಿ ಎಲ್ಲಾ ಭಾಷೆಗಳನ್ನು ಒಪ್ಪಿಕೊಳ್ಳಬೇಕು. ಮಾತೃಭಾಷೆ ಕನ್ನಡವನ್ನು ಅಪ್ಪಿಕೊಂಡು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಇಂದು ಪ್ರತಿಯೊಬ್ಬ ಕನ್ನಡ ನಾಡಿನ ನಾಗರಿಕನ ಕರ್ತವ್ಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ನುಡಿದರು.
ಕರ್ನಾಟಕ ಸಾಹಿತ್ಯ ಸಂಘ, ಕರ್ನಾಟಕ ಜಾನಪದ ಪರಿಷತ್ತು ಬೀದರ ವತಿಯಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಗಡಿ ಜಿಲ್ಲೆ ಬೀದರನಲ್ಲಿ ಕನ್ನಡ ಕಟ್ಟುವ ಕೆಲಸ ಬಹಳಷ್ಟು ಆಗುತ್ತಿವೆ. ಸಾಹಿತ್ಯ ಮತ್ತು ಸಂಸ್ಕøತಿಯಿಂದ ಮಾತ್ರ ಕನ್ನಡ ಕಟ್ಟಲು ಸಾಧ್ಯ. ಆದ್ದರಿಂದ ಹೆಚ್ಚು ಹೆಚ್ಚು ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಾಗಲು ಕನ್ನಡದ ಮನಸ್ಸುಗಳು ನಿರಂತರ ಪ್ರಯತ್ನಿಸಬೇಕು ಎಂದರು. ಅಲ್ಲದೆ ಪಠ್ಯದ ಜೊತೆಗೆ ಕನ್ನಡ ಶಿಕ್ಷಕರು ಪಠ್ಯೇತರ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಮಕ್ಕಳಿಗೆ ಪ್ರಾಮಾಣಿಕವಾಗಿ ಜ್ಞಾನಾರ್ಜನೆ ಮಾಡುವ ಕಾರ್ಯ ಮಾಡಬೇಕು. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಎಲ್ಲವನ್ನೂ ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಇಂದಿನ ಕೆಲಸ ನಾಳೆ ಮಾಡೋಣ ಎಂದು ಕೈಕಟ್ಟಿ ಕುಳಿತುಕೊಳ್ಳದೆ ತಕ್ಷಣವೇ ಮಾಡಿ ಮುಗಿಸುವ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದು ನುಡಿದರು. ಈ ನಿಟ್ಟಿನಲ್ಲಿ ಜಾನಪದ ವಿದ್ವಾಂಸರಾದ ಡಾ.ಜಗನ್ನಾಥ ಹೆಬ್ಬಾಳೆಯವರು ಗಡಿಯಲ್ಲಿ ಅನೇಕ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮುಖಾಂತರ ಕನ್ನಡ ಕಟ್ಟುವ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಜಗನ್ನಾಥ ಹೆಬ್ಬಾಳೆ “ಕರ್ನಾಟಕ ಸಾಹಿತ್ಯ ಸಂಘವು ಸುಮಾರು 50 ವರ್ಷಗಳಿಂದ ನಿರಂತರ ರಚನಾತ್ಮಕ ಕಾರ್ಯ ಮಾಡುತ್ತ ಬಂದಿದೆ. ಗಡಿಯಲ್ಲಿ ಕನ್ನಡಮಯ ವಾತಾವರಣ ನಿರ್ಮಾಣ ಮಾಡುವಲ್ಲಿ ಅವಿರತ ಶ್ರಮಿಸಿದೆ. ಜನಪದ ಸಂಸ್ಕøತಿ ಹಾಗೂ ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಎಂದು ತಿಳಿಸಿದರಲ್ಲದೆ ಟಿ.ಎಸ್.ನಾಗಾಭರಣ ಅವರ ಪರಿಚಯ ಸುದೀರ್ಘವಾಗಿ ಮಾಡಿಕೊಟ್ಟರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೀದರ ತಾಲೂಕಾ ಘಟಕದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎಸ್.ಬಿ.ಕುಚಬಾಳ ನಿರೂಪಿಸಿದರು. ಡಾ.ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಡಾ.ಮಹಾನಂದ ಮಡಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ಚನ್ನಬಸಪ್ಪ ಹಾಲಹಳ್ಳಿ, ಶಂಕ್ರೆಪ್ಪಾ ಹೊನ್ನಾ, ಸಿದ್ರಾಮ ಶಿಂಧೆ, ವಿಜಯಕುಮಾರ ಸೋನಾರೆ, ಡಾ.ಸಾವಿತ್ರಿಬಾಯಿ ಹೆಬ್ಬಾಳೆ, ಮಲ್ಲಮ್ಮ ಸಂತಾಜಿ, ಪ್ರಕಾಶ ಕನ್ನಾಳೆ, ಅಕ್ಕಮಹಾದೇವಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕು ಗಣ್ಯರು, ಸಾಹಿತಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.