
ಪಾಲಕರು ಮಕ್ಕಳ ಮೇಲೆ ಅತಿಯಾದ ಒತ್ತಡ ಹಾಕಬಾರದು ಅದರಲ್ಲಿ ನಮ್ಮ ವಿದ್ಯಾರ್ಥಿಗಳು ಎಲ್ಲಾ ಪರೀಕ್ಷೆಗಳಿಗಿಂತ ಜೀವನ ಪರೀಕ್ಷೆ ದೊಡ್ಡದು ಅದರಲ್ಲಿ ಫೇಲಾಗಬಾರದು.
ಶೈಕ್ಷಣಿಕ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೆದರದೆ ಎದುರಿಸಬೇಕು, ಹೆಚ್ಚು ಅಂಕಗಳನ್ನು ಗಳಿಸಲು ಪ್ರಯತ್ನಿಸಬೇಕು. ನಾವು ಅಂದುಕೊಂಡಂತೆ ಫಲಿತಾಂಶ ಬರದಿದ್ದಾಗ ಬೇಜಾರು ಮಾಡಿಕೊಂಡು ಅನಾಹುತ ಮಾಡಿಕೊಳ್ಳಬಾರದು.
ಅನೇಕರು, ಅನೇಕ ಪರೀಕ್ಷೆಗಳಲ್ಲಿ ಫೇಲಾಗಿದ್ದರೂ ಮುಂದೆ ಅದೇ ಸೋಲನ್ನೆ ಸೋಲಿಸಿ ಗೆದ್ದು ಸಾಧಿಸಿದ ಸಾಧಕರಿದ್ದಾರೆ. ಅವರನ್ನು ಮಾದರಿಯನ್ನಾಗಿಟ್ಟುಕೊಳ್ಳಬೇಕು. ಸಾವಿಗಾಗಿ ಯಾರು ಯಾವ ಸಂದರ್ಭಗಳಲ್ಲೂ ಪ್ರಯತ್ನಿಸಬಾರದು. ನಾವು ಪ್ರಯತ್ನ ಮಾಡದಿದ್ದರೂ ಬರುವ ಸಮಯದಲ್ಲಿ ಅದು ಬಂದೇ ಬರುತ್ತದೆ. ಕಾಲನ ಕರೆ ಬಂದಾಗ ಹೋಗೋದು ಇದ್ದೇ ಇದೆ.
ಪಾಲಕರು ತಮ್ಮ ಮಕ್ಕಳಿಗೆ ಇಷ್ಟು ಅಂಕ ತೆಗೆದುಕೊಳ್ಳಲೇಬೇಕು ಎಂದು ಅತಿಯಾದ ಒತ್ತಡ ಹಾಕಲೇಬಾರದು. ನೀನು ಇಂಜಿನಿಯರಿಂಗ್ ಮಾಡಬೇಕು ಮೆಡಿಕಲ್ ಓದಬೇಕು ಎಂದು ಪಾಲಕರು ತಮ್ಮ ಸ್ವ ಪ್ರತಿಷ್ಠೆಗಾಗಿ ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡಿ ನಮ್ಮ ಮಕ್ಕಳ ಬಾಳನ್ನು ನಾವೇ ಹಾಳುಗೆಡುವಬಾರದು. ಮಕ್ಕಳಲ್ಲಿ ಪಾಲಕರು ಸಕಾರಾತ್ಮಕ ಭಾವನೆಗಳನ್ನು ಬೆಳೆಸಬೇಕು. ನೀನು ಜಾಣ, ನೀನು ಜಾಣೆ, ನೀನು ಓದಬಲ್ಲೆ, ನೀನು ಬರೆಯಬಲ್ಲೆ ಎಂದು ಆತ್ಮವಿಶ್ವಾಸ ತುಂಬಬೇಕು.
ಪಾಲಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಅಪ್ಪಿ ತಪ್ಪಿ ಹೋಲಿಸಬಾರದು, ಅವರನ್ನು ಕುಬ್ಜರನ್ನಾಗಿಸಬಾರದು. ನಮ್ಮ ಸಂಬಂಧಿಕರು, ನೆರೆಹೊರೆಯವರು, ನಮ್ಮ ಗೆಳೆಯರ ಮಕ್ಕಳು ಮಾಡಿದ ಕೋರ್ಸ್ ನೀನು ಮಾಡಬೇಕು, ಅವರು ಸೇರಿಸಿದ ಕಾಲೇಜಿಗೆ ನಿನ್ನನ್ನು ಸೇರಿಸುತ್ತೇವೆ ಎಂದು ಬಲವಂತ ಮಾಡಬಾರದು.
ನಮ್ಮ ಮಕ್ಕಳು ಉತ್ತಮವಾಗಿ ಬದುಕು ಸಾಗಿಸಬೇಕಾದರೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ನೈತಿಕತೆ ಮಕ್ಕಳಿಗೆ ತಿಳಿಸಿಕೊಡಬೇಕು ಜೊತೆಗೆ ನಮ್ಮ ಮಕ್ಕಳಿಗೆ ಲೋಕಜ್ಞಾನ, ವ್ಯವಹಾರ ಜ್ಞಾನವನ್ನು ಹೆತ್ತವರು ಒದಗಿಸುವುದು ಅತ್ಯಾವಶ್ಯಕ.
ಪ್ರತಿಯೊಬ್ಬ ತಂದೆ ತಾಯಿ ತಮ್ಮ ಮಕ್ಕಳಿಗೆ ತಾವೇ ಮಾದರಿಯಾಗಬೇಕು. ಪಾಲಕರ ವರ್ತನೆಗಳನ್ನೇ ನಮ್ಮ ಮಕ್ಕಳು ಬಹುಬೇಗ ಅನುಸರಿಸುವುದರಿಂದ,ಪಾಲಕರ ನಡೆ, ನುಡಿಗಳೇ ಬಹುದೊಡ್ಡ ಸಿದ್ದಾಂತವಾಗಬೇಕು.
ಪ್ರತಿ ವಿದ್ಯಾರ್ಥಿಯಲ್ಲೂ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ನಾವುಗಳೆಲ್ಲ ಗುರುತಿಸಬೇಕು, ಪ್ರೋತ್ಸಾಹಿಸಬೇಕು, ಮಕ್ಕಳ ರುಚಿ, ಅಭಿರುಚಿಗಳೆರಡನ್ನು ತಿಳಿದುಕೊಂಡು ಸ್ಪಂದಿಸಬೇಕು. ಸಂಸ್ಕಾರರಹಿತ ವಿದ್ಯಾರ್ಥಿಗಳಿಂದ ಭಯಾನಕ ಸಮಾಜ ಸೃಷ್ಟಿಯಾಗುತ್ತದೆ. ಆದ್ದರಿಂದ ಪಾಲಕರೇ ಮಕ್ಕಳ ಮುಂದೆ ಸಂಸ್ಕಾರದಿಂದ ವರ್ತಿಸಬೇಕು.
ಮಕ್ಕಳಿಗೆ ಕೇವಲ ಅವಶ್ಯಕತೆಗಳನ್ನು ಒದಗಿಸಿದರೆ ಸಾಲದು. ನಮ್ಮ ಮಕ್ಕಳೊಂದಿಗೆ ಒಂದಿಷ್ಟು ಬೆರೆಯಲು ಸಮಯ ಮಾಡಿಕೊಳ್ಳಬೇಕು. ಅವರ ಭಾವನೆಗಳನ್ನು ತುಂಬಾ ಆಸಕ್ತಿಯಿಂದ ಆಲಿಸಬೇಕು, ತಂದೆ ತಾಯಿಗಳ ಪ್ರೀತಿಯಿಂದ ನಮ್ಮ ಮಕ್ಕಳು ವಂಚಿತರಾಗಬಾರದು. ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎಂಬ ಮಾತಿನಂತೆ ನಮ್ಮ ಮಕ್ಕಳ ಆರೋಗ್ಯ ಕಾಪಾಡುವುದು ಹೆತ್ತವರ ಹೊಣೆಗಾರಿಕೆ ಎಂಬುದನ್ನು ಮರೆಯಬಾರದು.
ವಿದ್ಯಾರ್ಥಿಗಳು ಸಹ ಇಷ್ಟಪಟ್ಟು ಓದಬೇಕು, ನಮಗಾಗಿ ಹೆತ್ತವರು ಎಷ್ಟು ಕಷ್ಟ ಪಡುತ್ತಿದ್ದಾರಲ್ಲ ಎಂಬುದರ ಕುರಿತು ಅರಿವಿರಬೇಕು. ನಿಮ್ಮ ಏಳಿಗೆ ನಿಮ್ಮ ಕೈಯಲ್ಲಿಯೇ ಇದೆ. ನಿಮ್ಮ ಪರಿಶ್ರಮದ ಮೇಲೆ ನಿಮ್ಮ ಭವಿಷ್ಯ ನಿರ್ಧಾರವಾಗುತ್ತದೆ ಎಂಬುದನ್ನು ಮರೆಯಬಾರದು. ಓದುವ ಸಮಯದಲ್ಲಿ ಓದದೇ ಇನ್ನೇನೇನೂ ಮಾಡಬಾರದು. ಓದಿನಲ್ಲಿ ಏಕಾಗ್ರತೆ, ಸತತ ಪ್ರಯತ್ನ ನಿಮ್ಮದಾದರೆ ಗೆಲುವು ನಿಮ್ಮದಾಗುವುದರಲ್ಲಿ ಅನುಮಾನವೇ ಬೇಡ.
ಸಮಯ ಕಳೆದು ಹೋಗುತ್ತದೆ ಸುಮ್ಮನೆ ಕಾಲಹರಣ ಮಾಡಬೇಡಿ. ಕೇವಲ ಬಯಕೆಗಳ ಭದ್ರ ಬುನಾದಿಯ ಮೇಲೆ ಮನೆ ಕಟ್ಟಬೇಡಿ. ವಾಸ್ತವದ ಬಗ್ಗೆ ಅರಿವು ಬೆಳೆಸಿಕೊಳ್ಳಿ. ಯಾಕೆಂದರೆ ಜೀವನ ಎಂದರೆ ಹುಡಗಾಟವಲ್ಲ ಅದೊಂದು ಹುಡುಕಾಟ ಎಂಬುದನ್ನು ಮರೆಯಬೇಡಿ.
ಕೊನೆಗೆ ಹೇಳೋದು ಏನೆಂದರೆ ನಮ್ಮ ಮಕ್ಕಳು ಉತ್ತಮ ಮನುಷ್ಯರಾಗಿ ಬಾಳಲಿ. ಈ ನಾಡಿನ ಸಂಪತ್ತಾಗಿ ರೂಪುಗೊಳ್ಳಲಿ ನಮ್ಮ ಉತ್ತಮ ಮಕ್ಕಳಿಂದ ಉತ್ತಮ ಸಮಾಜ ನಿರ್ಮಾಣವಾಗಲಿ. ಎಲ್ಲರಿಗೂ ಶುಭವಾಗಲಿ, ಲಾಭವೂ ಆಗಲಿ, ಶೈಕ್ಷಣಿಕವಾಗಿ ನಾವು ಅಭಿವೃದ್ಧಿಯಾದಾಗ ಮಾತ್ರ ಸಾಮಾಜಿಕವಾಗಿ ಬೆಳೆಯಲು ಬೆಳಗಲೂ ಸಾಧ್ಯ.
ಸಾವೇ ಸೋಲಿಗೆ ಪರಿಹಾರವಲ್ಲ ಆ ಸೋಲನ್ನು ನೀನೇ ಒಂದಿಲ್ಲೊಂದು ದಿನ ಸೋಲಿಸಿ ಗೆದ್ದು ಬೀಗಲು ಸಾಧ್ಯವಿದೆ ಎಂಬುದನ್ನು ಮಾತ್ರ ನೀ ಮರೆಯದಿರು. ನಮ್ಮ ಮಕ್ಕಳಲ್ಲಿ ಇಂತಹ ಆತ್ಮವಿಶ್ವಾಸ ತುಂಬುವ ಅಗತ್ಯತೆ ತುಂಬಾ ಇದೆ.
ರಮೇಶಬಾಬು ಯಾಳಗಿ.
ಸಾಹಿತಿಗಳು ಹಾಗೂ ಉಪನ್ಯಾಸಕರು