ಎಲ್ಲಾ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆ ನೀಡಲು ಆಗ್ರಹ

ಕಲಬುರಗಿ,ಮೇ.23-ಎಲ್ಲಾ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಆರ್ಗನೈಸೇಷನ್ (ಎಐಡಿವೈಓ) ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ, ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಹೆಚ್.ಆಗ್ರಹಿಸಿದ್ದಾರೆ.
ಮೇ.20 ರಂದು ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮೊದಲ ಮಂತ್ರಿಮಂಡಲದ ಸಭೆಯಲ್ಲಿಯೇ ತೀರ್ಮಾನಿಸಿ ಷರತ್ತುಬದ್ಧ ಆದೇಶ ಹೊರಡಿಸಿದ್ದಾರೆ. ಈ ಮೂಲಕ ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಹೆಮ್ಮೆಯಿಂದ ಘೋಷಿಸಿದ್ದಾರೆ. ಆದರೆ, ಪದವಿ ಮತ್ತು ಡಿಪ್ಲೋಮಾ ಮುಗಿಸಿರುವ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ಪ್ರಕಾರ, 2022-23ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ನಿರುದ್ಯೋಗ ಭತ್ಯೆಯನ್ನು, ಅದೂ ಎರಡು ವರ್ಷಗಳ ಅವಧಿಗೆ ಮಾತ್ರ ನೀಡಲಾಗುವುದು ಎಂಬ ಷರತ್ತು ವಿಧಿಸಲಾಗಿದೆ. ಹಾಗಾದರೆ ಈ ಅವಧಿಗೆ ಮುನ್ನ ಪದವಿ, ಡಿಪ್ಲೋಮಾ, ಇನ್ನಿತರ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿ ಉದ್ಯೋಗಕ್ಕಾಗಿ ಹಗಲಿರಳು ಶ್ರಮಿಸುತ್ತ, ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಯುವಜನರು ನಿರುದ್ಯೋಗಿಗಳಲ್ಲವೇ? ಸ್ವಾವಲಂಬಿಗಳಾಗಿ ಬದುಕಲು ತಕ್ಕದಾದ ಒಂದು ಉದ್ಯೋಗಕ್ಕಾಗಿ ಹತ್ತು-ಹದಿನೈದು ವರ್ಷಗಳಿಂದ ಮನೆಬಿಟ್ಟು ನಗರಗಳಿಗೆ ಬಂದು ಸ್ವಂತ ಕರ್ಚಿನಲ್ಲಿ ಬಾಡಿಗೆ ಕೊಠಡಿಗಳಲ್ಲಿದ್ದುಕೊಂಡು ಊಟ ನಿದ್ರೆ ಬಿಟ್ಟು ಖಾಸಗಿ ಗ್ರಂಥಾಲಯಗಳಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿಕೊಂಡು ಓದುತ್ತಿರುವವರು ನಿರುದ್ಯೋಗಿಗಳಲ್ಲವೇ? ಅಥವಾ ಅವರಿಗೆ ಈಗಾಗಲೇ ಸರ್ಕಾರ ಉದ್ಯೋಗ ನೀಡಿಬಿಟ್ಟಿದೆಯೇ? ನಿಜವಾಗಿಯೂ ನಿರುದ್ಯೋಗದ ಬಿಸಿ ತಟ್ಟುತ್ತಿರುವುದು ಈ ರೀತಿ ಹತ್ತಾರು ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರಿಗೆ. ಅವರನ್ನು ನಿರುದ್ಯೋಗಿಗಳೆಂದು ಗುರುತಿಸಿ ನಿರುದ್ಯೋಗ ಭತ್ಯೆ ನೀಡಬೇಕಾಗಿರುವುದು ಅತ್ಯವಶ್ಯಕ. ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನ ಎಲ್ಲಾ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ನೀಡಿದ್ದ ಭರವಸೆಯನ್ನು ನಂಬಿಕೊಂಡು, ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಈಗಲಾದರೂ ಒಂದು ರಾಜಕೀಯ ಪಕ್ಷ ಅಧಿಕೃತವಾಗಿ ಒಪ್ಪಿಕೊಂಡಿದೆ ಎಂಬ ಆಶಾಭಾವನೆಯೊಂದಿಗೆ ರಾಜ್ಯದ ಬಹುತೇಕ ಯುವಜನರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಇಂತಹ ಯುವಸಮುದಾಯದ ನಿರೀಕ್ಷೆಯನ್ನು ಹುಸಿಗೊಳಿಸಿ ಕೇವಲ 2022-23ನೇ ಸಾಲಿನಲ್ಲಿ ತೇರ್ಗಡೆಯಾದವರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂಬುದು ಎಷ್ಟು ಸರಿ ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಎಲ್ಲ ಯುವಕರು ತಮ್ಮ ಮೊದಲ ಆದ್ಯತೆಯಾಗಿ ಕೇಳುತ್ತಿರುವುದು ಉದ್ಯೋಗವನ್ನೇ ಹೊರತು ನಿರುದ್ಯೋಗ ಭತ್ಯೆಯನ್ನಲ್ಲ. ಆದರೆ ಅವರ ಯೋಗ್ಯತೆಗೆ ತಕ್ಕದಾದ ಉದ್ಯೋಗವನ್ನು ಒದಗಿಸಲಾಗದ ಸರ್ಕಾರ, ಅವರು ಆತ್ಮ ಗೌರವದಿಂದ ಬದುಕಲು ಬೇಕಾದ ನಿರುದ್ಯೋಗ ಭತ್ಯೆಯನ್ನು ಕೊಡಬೇಕಾಗಿರುವುದು ಒಂದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿನ ಚುನಾಯಿತ ಸರ್ಕಾರವೊಂದರ ಕನಿಷ್ಠ ಜವಾಬ್ದಾರಿ. ಅಲ್ಲದೇ ನಿರುದ್ಯೋಗ ಭತ್ಯೆ ಎಂಬುದು ನಿರುದ್ಯೋಗಿ ಯುವಜನರ ಹಕ್ಕೇ ಹೊರತು ಸರ್ಕಾರದ ಕೃಪಾ ಭಿಕ್ಷೆಯಲ್ಲ. ಇದನ್ನು ಈಡೇರಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರ ಈ ರೀತಿ ‘ನಿರುದ್ಯೋಗಿ’ ಎಂಬ ಪದವನ್ನು ತನ್ನ ಮನಸೋ ಇಚ್ಛೆ ವ್ಯಾಖ್ಯಾನಿಸಿಕೊಂಡು ಅವರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡುತ್ತೇವೆ ಎನ್ನುವುದು ನಾಡಿನ ಯುವ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಸರ್ಕಾರವೇ ನಿಗದಿಪಡಿಸಿರುವ ವಯೋಮಿತಿಯಲ್ಲಿರುವ ಎಲ್ಲಾ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆಯನ್ನು ಅವರಿಗೆ ಉದ್ಯೋಗ ದೊರಕುವವರೆಗೂ ನೀಡಬೇಕೆಂದು ಆಗ್ರಹಿಸಿದ್ದಾರೆ.