ಎಲ್ಲಾ ಚಿತಾಗಾರಗಳಲ್ಲಿ ಅಂತ್ಯಕ್ರಿಯೆಗೆ ಅವಕಾಶ

ಬೆಂಗಳೂರು, ಏ. ೨೧- ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಆಗುತ್ತಿರುವ ವಿಳಂಬ, ಹಾಗೂ ತೊಂದರೆಗಳನ್ನು ತಪ್ಪಿಸಲು ಬೆಂಗಳೂರಿನ ಎಲ್ಲಾ ಚಿತಾಗಾರಗಳಲ್ಲೂ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ ಹೇಳಿದರು.
ನಗರದ ಕೆ.ಸಿ. ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಕೊರೊನಾ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಸತ್ತವರ ಅಂತ್ಯಕ್ರಿಯೆಗೆ ಕೆಲವೇ ಚಿತಾಗಾರಗಳನ್ನು ಮೀಸಲಿರಿಸಲಾಗಿತ್ತು. ಇದರಿಂದ ಶವಗಳ ಸಂಸ್ಕಾರ ವಿಳಂಬವಾಗುತ್ತಿತ್ತು. ಇದನ್ನು ತಪ್ಪಿಸಲು ಎಲ್ಲ ಚಿತಾಗಾರಗಳಲ್ಲೂ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗಿದೆ ಎಂದರು.
ಕೊರೊನಾದಿಂದ ಮೃತಪಟ್ಟವರ ಶವಗಳಿಗೆ ಎಲ್ಲ ರೀತಿಯ ರಾಸಾಯನಿಕಗಳನ್ನು ಸಿಂಪಡಿಸಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಚಿತಾಗಾರದಲ್ಲೂ ಅಂತ್ಯ ಸಂಸ್ಕಾರ ಮಾಡಲು ತೊಂದರೆ ಇಲ್ಲ ಎಂದು ಅವರು ಹೇಳಿದರು.
ಬೇಗ ಪರೀಕ್ಷಾ ವರದಿ
ಕೊರೊನಾ ಸೋಂಕಿತರಿಗೆ ಪರೀಕ್ಷಾ ವರದಿಗಳನ್ನು ೭-೮ ಗಂಟೆಯ ಒಳಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಕೊರೊನಾ ತಪಾಸಣೆ ನಡೆಸುವ ಲ್ಯಾಬ್‌ಗಳ ಜತೆಯೂ ಮಾತನಾಡಿದ್ದೇವೆ. ಇನ್ನು ಮುಂದೆ ಆದಷ್ಟು ಬೇಗ ಕೊರೊನಾ ತಪಾಸಣಾ ವರದಿಗಳನ್ನು ನೀಡುವ ಕೆಲಸ ಆಗಲಿದೆ ಎಂದರು.
ಕೆಮ್ಮು, ಜ್ವರ, ನೆಗಡಿಯಂತಹ ತೊಂದರೆಗಳಿಂದ ಬಳಲುತ್ತಿರುವವರು ಉದಾಸೀನ ಮಾಡದೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಸೋಂಕು ದೃಢಪಟ್ಟರೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಬೇಗ ಚಿಕಿತ್ಸೆ ಆರಂಭಿಸುವುದರಿಂದ ಉಸಿರಾಟ ಮತ್ತಿತರ ಉಲ್ಬಣ ಸ್ಥಿತಿ ಉದ್ಭವಿಸುವುದಿಲ್ಲ. ಹಾಗಾಗಿ ಜನ ಆದಷ್ಟು ಬೇಗ ತಡ ಮಾಡದೆ ಚಿಕಿತ್ಸೆಗೆ ಒಳಪಡುವುದು ಒಳ್ಳೆಯದು ಎಂದು ಅವರು ಹೇಳಿದರು.
ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿತರಿಗೆ ಬೆಡ್‌ಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕೆಲವರು ನಮಗೆ ಇಂತಹದ್ದೇ ಆಸ್ಪತ್ರೆ ಬೇಕು ಎಂದು ಪಟ್ಟು ಹಿಡಿಯುತ್ತಾರೆ. ಇದು ಸಮಸ್ಯೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.