ಎಲ್ಲಾ ಖಾತೆಗಳನ್ನು ವಿಜಿಗೆ ಸಿಎಂ ವಹಿಸಲಿ: ಯತ್ನಾಳ್

ಬೆಂಗಳೂರು, ಏ. ೨- ಸಚಿವರುಗಳ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ರವರಿಗೆ ಎಲ್ಲ ಖಾತೆಗಳನ್ನು ವಹಿಸಿಕೊಡುವುದು ಸೂಕ್ತ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ವಿಜಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಅನುದಾನ ಬಿಡುಗಡೆ ಮತ್ತು ಹಸ್ತಕ್ಷೇಪದ ಬಗ್ಗೆ ರಾಜ್ಯಪಾಲರಿಗೆ ಹಾಗೂ ವರಿಷ್ಠರಿಗೆ ದೂರು ನೀಡಿರುವುದನ್ನು ಸಮರ್ಥಿಸಿಕೊಳ್ಳುವ ದಾಟಿಯಲ್ಲಿ ಮಾತನಾಡಿದ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪನವರು ಈಶ್ವರಪ್ಪನವರ ವಿಚಾರದಲ್ಲಿ ನಡೆದುಕೊಂಡಿದ್ದು ಸರಿಯಲ್ಲ ಎಂದರು.
ಸರ್ಕಾರದ ಇಲಾಖೆಗಳಿಂದ ಹತ್ತು ಕೋಟಿ ರೂ. ಅನುದಾನ ಪಡೆಯಲು ನಾವೆಲ್ಲಾ ಹೆಣಗಾಡಬೇಕಾಗುತ್ತದೆ. ಆದರೆ ಯಾವುದೇ ಅನುಮೋದನೆ ಇಲ್ಲದೆ ಕೆಲವರಿಗೆ ನೂರಾರು ಕೋಟಿ ರೂ. ಅನುದಾನ ನೀಡಲಾಗಿದೆ. ಈ ಬಗ್ಗೆ ಮಾತನಾಡುವುದು ತಪ್ಪೆ ಎಂದು ಅವರು ಈಶ್ವರಪ್ಪನವರ ಪರವಾಗಿ ಬ್ಯಾಟಿಂಗ್ ಮಾಡಿದರು.
ಈಶ್ವರಪ್ಪನವರು ಎತ್ತಿರುವ ವಿಚಾರ ಸರಿ ಇದೆ. ಸಚಿವರುಗಳ ಖಾತೆಗಳಲ್ಲಿ ಹಸ್ತಕ್ಷೇಪ ಸರಿಯಲ್ಲ ಎಂದು ಅವರು ಹೇಳಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಈಶ್ವರಪ್ಪನವರ ನಡಾವಳಿಕೆ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಯತ್ನಾಳ್, ಅರುಣ್‌ಸಿಂಗ್ ರವರು ರಾಜ್ಯ ಬಿಜೆಪಿ ಉಸ್ತುವಾರಿ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ರವರ ಉಸ್ತುವಾರಿ ಅಲ್ಲ ಎಂದು ಟಾಂಗ್ ನೀಡಿದರು.