ಎಲ್ಲಾ ಕ್ಷೇತ್ರಗಳಲ್ಲೂ ಯುವಕರಿಗೆ ಅವಕಾಶ

ನವದೆಹಲಿ/ಕೊಚ್ಚಿ.ಏ.೨೫- ದೇಶದಲ್ಲಿ ಹಿಂದಿನ ಸರ್ಕಾರಗಳು ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ, ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ಯುವಕರಿಗೆ ಅವಕಾಶ ನೀಡುವ ಕಡೆಗೆ ಗಮನ ಹರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ಥಳೀಯರಿಗೆ ಧ್ವನಿ ನೀಡುವ ಮೂಲಕ,ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುತ್ತಿದ್ದೇವೆ, ಯುವಕರಿಗೆ ಬಾಹ್ಯಾಕಾಶ ಮತ್ತು ರಕ್ಷಣೆಯಲ್ಲಿ ಅವಕಾಶ ನೀಡಲಾಗಿದೆ. ದೇಶದಲ್ಲಿ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಕೊಚ್ಚಿಯಲ್ಲಿ “ಯುವಂ ೨೦೨೩” ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಕೇರಳದಲ್ಲಿ ಕೇಂದ್ರ ಸರ್ಕಾರ ತಂದಿರುವ ದೊಡ್ಡ ಮೂಲಸೌಕರ್ಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ ಎಂದರು.ಭಾರತ “ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ” ಆಗಿ ಮಾರ್ಪಟ್ಟಿದೆ. ಅದಕ್ಕಾಗಿಯೇ ದೇಶದ ಯುವಕರನ್ನು ಅಭಿನಂದಿಸುತ್ತೇನೆ ಯುವಜನ ಕಾರ್ಯಕ್ರಮ ಕೇರಳ ರಾಜಕೀಯದಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಸಿದ್ದತೆ:
ಆತ್ಮಹತ್ಯಾ ಬಾಂಬರ್ ಬೆದರಿಕೆ ಪತ್ರದ ಕೆಲವೇ ದಿನಗಳ ನಂತರ ಕೇರಳದಲ್ಲಿ ರೋಡ್‌ಶೋ ನಡೆಸುವ ಮೂಲಕ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಕೇರಳದಲ್ಲಿ ಬಿಜೆಪಿ ಪಕ್ಷದ ಬಲರ್ದನೆಗೆ ಮುಂದಾಗಿದ್ದಾರೆ.
ರಬ್ಬರ್ ಖರೀದಿ ದರವನ್ನು ಪ್ರತಿ ಕೆಜಿಗೆ ೩೦೦ ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದ ಅವರು ಪ್ರಭಾವಿ ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ನ ಹಿರಿಯ ಬಿಷಪ್ ತಲಸ್ಸೆರಿ ಆರ್ಚ್‌ಬಿಷಪ್ ಮಾರ್ ಜೋಸೆಫ್ ಪಾಂಪ್ಲನಿ ಅವರನ್ನು ಭೇಟಿ ಮಾಡಿ ಸಂವಾದ ನಡೆಸಿದರು.

ರೋಡ್ ಶೋ
ಎರಡು ದಿನಗಳ ಕೇರಳ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೊಚ್ಚಿಯಲ್ಲಿ ಬಾರಿ ಬಿಗಿ ಭದ್ರತೆಯಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಕೇರಳದ ಸಾಂಪ್ರದಾಯಿಕ ಉಡುಗೆ ತೊಟ್ಟ ಪ್ರಧಾನಿ ಐಎನ್‌ಎಸ್ ಗರುಡ ನೌಕಾ ವಿಮಾನ ನಿಲ್ದಾಣದಿಂದ ಯುವ ಸಮಾವೇಶದ ಸ್ಥಳದವರೆಗೆ ೨ ಕಿಮೀ ಮಾರ್ಗದ ಎರಡೂ ಬದಿಗಳಲ್ಲಿ ಜನರತ್ತ ಕೈ ಬೀಸುವ ಮೂಲಕ ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸಿದರು.