ಎಲ್ಲಾ ಕಾನೂನುಗಳ ತಾಯಿಬೇರು ನಮ್ಮ ಸಂವಿಧಾನ : ನ್ಯಾ. ವಿಶ್ವನಾಥ

ಸಂಜೆವಾಣಿ ವಾರ್ತೆ,
ವಿಜಯಪುರ.ಜ.27:ಎಲ್ಲ ಕಾನೂನುಗಳ ತಾಯಿ ಬೇರು ನಮ್ಮ ಸಂವಿಧಾನವಾಗಿದೆ. ಸುದೀರ್ಘ ಅಧ್ಯಯನದ ಫಲವಾಗಿ ರಚನೆಗೊಂಡ ಸಂವಿಧಾನ ಗ್ರಂಥವೇ ನಮ್ಮೆಲ್ಲರ ಹಕ್ಕುಗಳನ್ನು ಸಂರಕ್ಷಿಸುವ ಮೂಲ ಶಕ್ತಿಯಾಗಿದೆ. ಸಂವಿಧಾನದ ಸಾರವೆಲ್ಲವೂ ಅದರ ಪೀಠಿಕೆಯಲ್ಲಿ ಅಡಗಿದೆ. ದೇಶದ ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯಲು ಸಂವಿಧಾನವೇ ನಮಗೆ ಮುಖ್ಯ ಆಸರೆ. ಕಾರಣ ಭಾರತದ ಸಂವಿಧಾನ ಕಾನೂನುಗಳ ಮಾತೆಯಾಗಿದೆ ಎಂದು ವಿಜಯಪುರದ ಪ್ರಧಾನ ಹಿರಿಯ ನ್ಯಾಯಾಧೀಶರಾದ ವಿಶ್ವನಾಥ ಯಮಕನಮರಡಿ ನುಡಿದರು.
ವಿಜಯಪುರದ ಕೆ.ಎಸ್.ಆರ್.ಟಿ.ಸಿ ಕಾಲನಿಯಲ್ಲಿರುವ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಜಾತಿ, ಮತ, ಪಂಥ, ವರ್ಗ, ವರ್ಣವನ್ನೆಲ್ಲ ಮೀರಿ ಕಾನೂನಿನ ಮುಂದೆ ನಾವೆಲ್ಲರೂ ಒಂದೆ. ಮಕ್ಕಳಿಗೂ ಕೂಡ ಹಲವಾರು ಹಕ್ಕುಗಳಿವೆ. ಅವುಗಳನ್ನು ತಿಳಿಸಿಕೊಡುವ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಉತ್ತಮ ಮಕ್ಕಳು ಸರ್ವೋತ್ತಮ ಸತ್ಪ್ರಜೆಗಳಾಗಲು ಸಾಧ್ಯ ಎಂದರು.
ಆಕ್ಸಫರ್ಡ ಶಾಲೆಯ ಮುಖ್ಯ ಗುರುಗಳಾದ ಜೆ.ಎಂ. ಇನಾಮದಾರ ಮಾತನಾಡಿ, ಭಾರತವು ಬೇರೆ ದೇಶಗಳ ಮೇಲೆ ಅವಲಂಬಿತವಾಗದೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸುಭದ್ರವಾಗಿದೆ. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಸುಸೂತ್ರವಾಗಿ ನಡೆಯಬೇಕು. ಶಿಕ್ಷಣ, ಕೃಷಿ, ವಿಜ್ಞಾನ ಕ್ಷೇತ್ರಗಳಲ್ಲಿನ ಸಮಸ್ಯೆಗಳ ನಿವಾರಣೆಗಾಗಿ ನಮ್ಮ ಹಿರಿಯರು ಸಾಕಷ್ಟು ಶ್ರಮಿಸಿದ್ದಾರೆ. ವಿದ್ಯಾರ್ಥಿಗಳು ಓದಿನಿಂದ ಪಡೆದ ಜ್ಞಾನವನ್ನು ದೇಶದ ಏಳಿಗೆಗಾಗಿ ಬಳಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ದೇಶದ ಅಭಿವೃದ್ಧಿಯಲ್ಲಿ ಮುಖ್ಯವಾದುದು. ಅದರೊಟ್ಟಿಗೆ ದೇಶದ ಬಗ್ಗೆ ಹೆಮ್ಮೆ, ಸಂವಿಧಾನದ ಕುರಿತು ಗೌರವ, ಸಂಸ್ಕೃತಿ ಸಂಸ್ಕಾರ ಹಾಗೂ ಸಾಮರಸ್ಯದ ಬದುಕು ನಡೆಸುವುದು ಕೂಡ ಬಹುಮುಖ್ಯವಾಗಿದೆ. ಸ್ವಾತಂತ್ರ್ಯ ಮತ್ತು ಸಂವಿಧಾನವನ್ನು ಅರಿತವರು ಘನವೆತ್ತ ಬದುಕು ನಡೆಸಬೇಕು. ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಬೃಹತ್ ಸಂವಿಧಾನ ಹೊಂದಿದ ನಾವು ವಿಶಾಲ ಮನಸ್ಸಿನಿಂದ ಭ್ರಾತೃತ್ವದ ಭಾವದಿಂದ ಬದುಕೋಣ ಎಂದರು.
ವೇದಿಕೆಯ ಮೇಲೆ ಕಾಲೇಜಿನ ಆಡಳಿತಾಧಿಕಾರಿ ಪರಶುರಾಮ ಭವಿಕಟ್ಟಿ ಉಪಸ್ಥಿತರಿದ್ದರು.
ಉಪನ್ಯಾಸಕ ಎಸ್.ಆರ್ ಪಾಟೀಲ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಭವಾನಿ ದೇಶಪಾಂಡೆ ಹಾಗೂ ಸೈಯ್ಯದ ವಾಸಿಂ ಇನಾಮದಾರ ನಿರೂಪಿಸಿದರು. ಎಂ.ಎಂ ಮಲಘಾಣ ವಂದಿಸಿದರು.
ವಿದ್ಯಾರ್ಥಿಗಳಿಂದ ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲೆಯ ಬೋಧಕ ಬೋದಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.