ಎಲ್ಲರ ಪ್ರೀತಿ ಗಳಿಸಿದ್ದ ಅಪ್ಪು ನಟ ವಿಜಯರಾಘವೇಂದ್ರ

ಚಾಮರಾಜನಗರ, ನ.25:- ಸಂಬಂಧ ಇಲ್ಲದಿದ್ದರೂ ಎಲ್ಲರ ಪ್ರೀತಿ ಗಳಿಸಿದ್ದರು ಅಪ್ಪು ಎಂದು ಖ್ಯಾತ ನಟ ವಿಜಯರಾಘವೇಂದ್ರ ಹೇಳಿದ್ದಾರೆ.
ಅವರು ಇಂದು ನಗರದ ಯಡಪುರ ಬಳಿ ಇರುವ ಜಿಲ್ಲಾ ಆಸ್ಪತ್ರೆಯಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರ, ರೋಟರಿ ಸಂಸ್ಥೆ, ರೋಟರಿ ಸಿಲ್ಕ್‍ಸಿಟಿ, ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಪುನೀತ್‍ರಾಜ್‍ಕುಮಾರ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ರಕ್ತದಾನ ಹಾಗೂ ನೇತ್ರದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುನೀತ್ ಅವರು ಬ್ಲೂ ಪ್ರಿಂಟ್ ರೀತಿ ಒಂದು ನೆನಪನ್ನು ಬಿಟ್ಟು ಹೋಗಿದ್ದಾರೆ. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ಬಹಳ ದೊಡ್ಡ ನಟರ ಮಗನಾಗಿ ತಾನೂ ಸಹ ದೊಡ್ಡ ನಟನಾಗಿದ್ದರೂ ಅದ್ಯಾವುದನ್ನೂ ತೋರಿಸಿಕೊಳ್ಳದೆ ತನ್ನ ಸರಳ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಯನ್ನು ಪಡೆದುಕೊಂಡಿರುವುದು ಒಂದು ದೊಡ್ಡ ಸಾಧನೆ.
ಅವರು ಇಲ್ಲದಿದ್ದರೂ ಅವರ ನೆನಪು ಅವರ ವ್ಯಕ್ತಿತ್ವ ಮಾತ್ರ. ಅವರು ಸಮಾಜದ ತುಡಿತ ಹೆಚ್ಚಾಗಿತ್ತು. ಅವರು ತಾನು ಬೆಳೆಯುವದಲ್ಲದೇ ತನ್ನ ಜೊತೆಯವರು ಸಹ ಬೆಳೆಯಬೇಕು ಎಂಬ ಧೈಯವನ್ನು ಹೊಂದಿದ್ದ ಅವರು ಅದಕ್ಕಾಗಿಯೇ ಬಡ ಮಕ್ಕಳ ವಿದ್ಯಾಭ್ಯಾಸ, ಸಮಾಜ ಸೇವೆ ಮೂಲಕ ಎಲ್ಲರ ಮನವನ್ನು ಗೆದ್ದಿದ್ದರು.
ಪುನೀತ್ ಅವರ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಸಮಾಜ ಸೇವೆ ಮುಂದುವರಿಸಿಕೊಂಡು ಹೋಗುತ್ತಿರುವುದು ತುಂಬಾ ಶ್ಲಾಘನೀಯ ಹಾಗೂ ಪುನೀತ್ ರವರಿಗೆ ಸಲ್ಲಿಸುವ ಗೌರವ ಎಂದು ರೋಟರಿ ಸಂಸ್ಥೆಯ ಈ ಕಾರ್ಯವನ್ನು ಶ್ಲಾಘಿಸಿದರು.
ಇದಕ್ಕೂ ಮೊದಲು ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಮಾಜಿ ಜಿಲ್ಲಾ ಗೌರ್ನರ್ ಡಾ.ಆರ್.ಎಸ್. ನಾಗಾರ್ಜುನ್, ಅಧ್ಯಕ್ಷ ಎ. ಶ್ರೀನಿವಾಸನ್, ಕಾರ್ಯದರ್ಶಿ ಎಲ್. ನಾಗರಾಜು, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ರವಿ, ಕಾರ್ಯದರ್ಶಿ ಅಕ್ಷಯ್, ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್ ಇನ್ನೂ ಮುಂತಾದವರು ಹಾಜರಿದ್ದರು.