ಎಲ್ಲರೂ ಮತದಾನ ಮಾಡಿ- ಮೋದಿ ಕರೆ

ಅಹಮದಾವಾದ್,ನ.೨೧- ಗುಜರಾತ್‌ನಲ್ಲಿ ಡಿಸೆಂಬರ್ ೧ ಮತ್ತು ೫ ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಬಿಜೆಪಿಗೆ ಮಾತ್ರ ಮತ ಹಾಕಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಎಂದು ಹೇಳಿದ್ದಾರೆ.
ಗಿರ್ ಸೋಮನಾಥ್ ಜಿಲ್ಲೆಯ ನಾಲ್ವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಮಾತನಾಡಿದ ಅವರು ಚುನಾವಣೆಯಲ್ಲಿ, ಮತದಾನದ ದಿನದಂದು ಜನರು ತಮ್ಮ ತಮ್ಮ ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.
ಗೆಲುವಿಗಾಗಿ ಹೋರಾಟ:
ಪ್ರತಿಯೊಂದು ಬೂತ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದನ್ನು ಖಚಿತಪಡಿಸಿಕೊಳ್ಳಬೇಕು. ಎಲ್ಲಾ ಮತಗಟ್ಟೆಗಳನ್ನು ಗೆಲ್ಲುವ ಮೂಲಕ ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಬೇಕು ಎಂದು ಹೇಳಿದ್ದಾರೆ.
ಗುಜರಾತ್‌ನಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಮಾಧ್ಯಮಗಳು ಹಾಗೂ ವಿವಿಧ ಸಮೀಕ್ಷೆಗಳು ಈಗಾಗಲೇ ಭವಿಷ್ಯ ನುಡಿದಿದ್ದರೂ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗರಿಷ್ಠ ಸ್ಥಾನಗಳನ್ನು ಗೆದ್ದ ಹಿಂದಿನ ದಾಖಲೆ ಮುರಿಯುವುದನ್ನು ನೋಡಲು ಕಾತುರನಾಗಿದ್ದೇನೆ ಎಂದು ತಿಳಿಸಿದ್ದಾರೆ.
ಗುಜರಾತ್ ಅನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ನಾವೆಲ್ಲರೂ ಶ್ರಮಿಸಬೇಕಾಗಿದೆ. ನೀವು ನಮಗೆ ಆಶೀರ್ವಾದವನ್ನು ನೀಡುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ರಾಹುಲ್ ವಿರುದ್ದ ವಾಗ್ದಾಳಿ:
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ, ನರ್ಮದಾ ಯೋಜನೆ ಹಳಿ ತಪ್ಪಿಸಲು ಎಲ್ಲ ಪ್ರಯತ್ನ ಮಾಡಿದ ಮೇಧಾ ಪಾಟ್ಕರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ ಎಂದು ದೂರಿದ್ದಾರೆ.
ನರ್ಮದಾ ಅಣೆಕಟ್ಟಿನ ನೀರಿನಿಂದ ಸ್ಥಳೀಯರ ಸ್ಥಳಾಂತರವನ್ನು ತಡೆಯಲು ನರ್ಮದಾ ಬಚಾವೋ ಆಂದೋಲನ ಮುನ್ನಡೆಸಿದ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಸೇರಿಕೊಂಡಿದ್ದಾರೆ. ಈ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದ್ದಾರೆ.