ಎಲ್ಲರೂ ತಮ್ಮ-ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನುಹಾರಿಸಬೇಕು:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ ಆ.5: ಆಗಸ್ಟ್.13 ರಿಂದ 15 ರವರೆಗೆ ಜಿಲ್ಲೆಯಲ್ಲಿ 2 ಲಕ್ಷ ರಾಷ್ಟ್ರ ಧ್ವಜಗಳನ್ನು ಹಾರಿಸುವ ಗುರಿ ಇದ್ದು, ಇದಕ್ಕೆ ಬೀದರ ಜಿಲ್ಲೆಯ ಎಲ್ಲ ಸಾರ್ವಜನಿಕರು ಸಹಕಾರ ನೀಡುವುದರ ಜೊತೆಗೆ ಎಲ್ಲರೂ ರಾಷ್ಟ್ರಧ್ವಜವನ್ನು ಹಾರಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಗುರುವಾರ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಬೀದರ ನಗರದಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಈ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಒಂದು ಸಾವಿರ ಜನರು ಸೇರುವ ಗುರಿ ಇತ್ತು ಆದರೆ ನಾಲ್ಕು ಸಾವಿರಕ್ಕೂ ಹೆಚ್ಚಿನ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದಕ್ಕೆ ಎಲ್ಲರಿಗೂ ಧನ್ಯವಾದಗಳು. ಇದರ ಮುಂದುವರೆದ ಭಾಗವಾಗಿ ಶುಕ್ರವಾರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದು ಕಿಲೋ ಮೀಟರ ಉದ್ದದ ತ್ರಿವರ್ಣ ಧ್ವಜದ ಕಾಲನಡಿಗೆ (ವಾಕಥಾನ್) ಹಮ್ಮಿಕೊಳ್ಳಲಾಗಿದೆ. ಅಗಸ್ಟ್.10 ರಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಭಾತಪೇರಿ ಇರುತ್ತದೆ. ಆಗಸ್ಟ್.11 ರಂದು ಜಿಲ್ಲಾ ಮಟ್ಟದಲ್ಲಿ ಒಂದು ಕಿಲೋ ಮೀಟರ ಉದ್ದದ ತ್ರಿವರ್ಣ ಧ್ವಜದ ಕಾಲನಡಿಗೆ (ವಾಕಥಾನ್) ಇರುತ್ತದೆ. ಅದೇ ದಿನದಂದು ಭಾರತೀಯ ವಾಯು ಪಡೆಯಿಂದ ಬೀದರ ನಗರದ ಮೇಲೆ ತ್ರಿವರ್ಣ ಬಣ್ಣದಲ್ಲಿ ಹಾರಾಟ ಮಾಡಲಿವೆ. ಆಗಸ್ಟ್.15 ರಂದು ಬೀದರ ಜಿಲ್ಲಾ ಕ್ರೀಡಾಂಗಣದಲ್ಲಿ ನೂರು ಫೀಟ್ ಉದ್ದದ ಧ್ವಜಸ್ತಂಭವನ್ನು ನಿರ್ಮಿಸಿ ಅದರ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ ಮತ್ತು ಸೆಪ್ಟೆಂಬರ್.17 ರಂದು ಕಲ್ಯಾಣ ಕರ್ನಾಟಕ ದಿನಾಚರಣೆ ಸಂದರ್ಭದಲ್ಲಿ ಬಸವಕಲ್ಯಾಣ ಕೋಟೆಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ. ಅವರು ಮಾತನಾಡಿ ಜಿಲ್ಲೆಯಲ್ಲಿ 450 ಸ್ವಸಹಾಯ ಗುಂಪುಗಳಿದ್ದು, ಗ್ರಾಮ ಪಂಚಾಯತಿ ಸ್ವಂತ ಖರ್ಚಿನಿಂದ 83250 ರಾಷ್ಟ್ರ ಧ್ವಜಗಳನ್ನು ಖರೀದಿಸಿ ಸ್ವಸಹಾಯ ಗುಂಪುಗಳ ಮೂಲಕ ಸರ್ಕಾರಿ ಕಚೇರಿ ಹಾಗೂ ಮನೆ ಮನೆಗೆ ಹಂಚಲಾಗುತ್ತದೆ. ಅಮೃತ ಸಮುದಾಯದ ಹತ್ತು ಹಳ್ಳಿ ಮಾನವ ಸೂಚಾಂಕ್ಯ ಕಡಿಮೆ ಇರುವ ಕಡೆಯೂ ಉಚಿತವಾಗಿ ಅವರಿಗೆ ವಿತರಿಸಲಾಗುತ್ತದೆ ಎಂದು ಹೇಳಿದರು.

ಈ ಜಾಥಾ ಕಾರ್ಯಕ್ರಮದಲ್ಲಿ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಮೊಹಮ್ಮದ ನಯೀಮ್ ಮೋಮಿನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ-ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.