ಎಲ್ಲರೂ ತಪ್ಪದೇ ಮತದಾನ ಮಾಡಿ: ಸಚಿವ ಪ್ರಭು ಚವ್ಹಾಣ್

ಬೀದರ, ಏ.16: ಬಸವಕಲ್ಯಾಣದಲ್ಲಿ ವಿಧಾನಸಭೆ ಉಪ ಚುನಾವಣೆ ನಿಮಿತ್ತ ಏ.17ರಂದು ನಡೆಯಲಿರುವ ಮತದಾನದಲ್ಲಿ ಎಲ್ಲ ಮತದಾರರು ತಪ್ಪದೇ ಭಾಗವಹಿಸಬೇಕೆಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮತದಾನ ಪಟ್ಟಿಯಲ್ಲಿರುವ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಸಂವಿಧಾನವನ್ನು ಗೌರವಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಬಸವಕಲ್ಯಾಣ ಉಪ ಚುನಾವಣೆ ಇತರರಿಗೆ ಮಾದರಿಯಾಗಬೇಕು. ಮತದಾನವು ಶಾಂತಿಯುತವಾಗಿ ನಡೆಯುವಂತಾಗಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳಿಗೆ ಸಹಕರಿಸಬೇಕು. ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಸಾರ್ವಜನಿಕರಲ್ಲಿ ಕೋರಿದ್ದಾರೆ.

ಮತದಾನವು ನಾಡಿನ ಏಳಿಗೆಗೆ ಸಂವಿಧಾನಾತ್ಮಕವಾಗಿ ಸಿಕ್ಕಿರುವ ವರದಾನ. ಇದರ ಸದ್ಬಳಕೆಯಾಗಬೇಕು. ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು. ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಾಗರಿಕರು ಸಂಬಂಧಿಸಿದ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಮತಗಟ್ಟೆಗೆ ಹೋದಾಗ ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ವಿನಂತಿಸಿದ್ದಾರೆ.