ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ

Oplus_131072

ಅಥಣಿ :ಮೇ.6: ಕಳೆದ ಬಾರಿ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಿರುವ ಗ್ರಾಮಗಳಲ್ಲಿ ಮತ್ತು ಪಟ್ಟಣ ಪ್ರದೇಶದ ವಿವಿಧ ವಾರ್ಡುಗಳಲ್ಲಿ ಮತದಾನ ಪ್ರಮಾಣವ ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕ ಸ್ವೀಪ್ ಸಮಿತಿಯಿಂದ ವಿವಿಧ ಜನಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜಾಗ್ರತಿ ಮೂಡಿಸಲಾಗುತ್ತಿದೆ.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷ ಶಿವಾನಂದ ಕಲ್ಲಾಪುರ ನೇತೃತ್ವದಲ್ಲಿ ತಾಲೂಕ ಪಂಚಾಯತ ಕಾರ್ಯಾಲಯದಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕಾ ಪಂಚಾಯತ್ ಸಿಬ್ಬಂದಿ ವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಲ್ಯಾಳ ವೃತ್ತ, ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ಮೂಲಕ ಗ್ರಾಮ ಪಂಚಾಯತಿ ಸಂಕೋನಟ್ಟಿಯಲ್ಲಿ ದ್ವಿಚಕ್ರವಾಹನದ ಮೂಲಕ ಬೈಕ್ ಮೆರವಣಿಗೆ ಮೂಲಕ ಮತದಾರರಲ್ಲಿ ಮತದಾನ ಜಾಗೃತಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಮಾತನಾಡಿ ಮತದಾನದ ಹಕ್ಕು ಹೊಂದಿರುವ ಎಲ್ಲ ಮತದಾರರು ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದ ಅವರು ಚುನಾವಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಬಿ ಹೆಚ್ ಮಲ್ಲಿಕಾರ್ಜುನ ಮತದಾನ ಜಾಗೃತಿ ಬೈಕ್ ಮೆರವಣಿಗೆಗೆ ಚಾಲನೆ ನೀಡಿದರು
ಮತದಾನ ಜಾಗೃತಿಯ ಟಿ-ಶರ್ಟ್ ಗಳನ್ನ ಧರಿಸಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮೂಲಕ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ತಾಲೂಕಾ ಪಂಚಾಯತಿ ಸಿಬ್ಬಂದಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಮತದಾರರ ಸ್ಲೋಗನ್ ಗಳನ್ನು ಕೂಗುತ್ತಾ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಕಳೆದ ಚುನಾವಣೆಗಿಂತ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಬೇಕು ಎನ್ನುವುದು ನಮ್ಮ ಗುರಿ. ಯುವಜನರು, ಹೊಸ ಮತದಾರರು, ಹಿರಿಯ ನಾಗರಿಕರು, ಅಂಗವಿಕಲರು, ಗಿರಿಜನರು, ಸೌಲಭ್ಯ ವಂಚಿತರು ಹೀಗೆ ವಿವಿಧ ವರ್ಗಗಳ ಜನರನ್ನು ಕೇಂದ್ರವಾಗಿಸಿಕೊಂಡು ಜನ ಜಾಗೃತಿಯ ಚಟುವಟಿಕೆಗಳನ್ನು ರೂಪಿಸಿದ್ದೇವೆ.

  • ಶಿವಾನಂದ ಕಲ್ಲಾಪುರ, ಅಧ್ಯಕ್ಷರು, ಸ್ವೀಪ್ ಸಮಿತಿ ಅಥಣಿ.