ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ :  ಇಒ ಮಹಾಂತಗೌಡ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.30: ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಮೂಡಿಸಲು  ಆಯೋಜಿಸಿದ್ದ ಬೈಕ್ ರ್ಯಾಲಿಗೆ ತಾಪಂ ಇಓ ಮಹಾಂತಗೌಡ ಪಾಟೀಲ್ ಅವರು ಚಾಲನೆ ನೀಡಿದರು.
ತಾಪಂ ಇಓ ಮಹಾಂತಗೌಡ ಪಾಟೀಲ್ ಅವರು ಮಾತನಾಡಿ, 2023 ರ ವಿಧಾನಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಆಗಬೇಕು. ಚುನಾವಣೆಯಲ್ಲಿ ನಾವೆಲ್ಲ ಸ್ವತಂತ್ರವಾಗಿ ಹಕ್ಕು ಚಲಾಯಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಹೀಗಾಗಿ ಯಾರೊಬ್ಬರೂ ಆಮೀಷಕ್ಕೆ ಬಲಿಯಾಗದೇ ಮತದಾನ ಮಾಡಬೇಕು. ಯಾವುದೇ ಸಬೂಬು ಹೇಳಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದರು.
ಪ್ರತಿಯೊಬ್ಬರೂ ಕಡ್ಡಾಯವಾಗಿ ಚುನಾವಣಾ ಹಬ್ಬದಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಜಾಗೃತಿ ಮೂಡಿಸಲು ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಹೀಗೆ ಮತದಾರರಿಗೆ ಮತದಾನ ಮಹತ್ವ ತಿಳಿಸಲು ತಾಲೂಕು ಸ್ವೀಪ್ ಸಮಿತಿಯಿಂದ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಬೈಕ್ ಜಾಥಾವು ಗಂಗಾವತಿ ತಾಲೂಕು ಪಂಚಾಯತ್ ಆವರಣದಿಂದ- ಸಂಗಾಪುರ, ಆನೆಗೊಂದಿ, ಚಿಕ್ಕರಾಂಪುರ, ಆನೆಗೊಂದಿ ಮಾರ್ಗವಾಗಿ ಸಣಾಪುರವರೆಗೆ ಬೈಕ್ ಜಾಥಾ ನಡೆಸಲಾಯಿತು. ಜಾಥಾದಲ್ಲಿ ಮತದಾನ ಜಾಗೃತಿ ಗೀತೆಗಳನ್ನು ಪ್ರಚುರ ಪಡಿಸುತ್ತಾ ಸಿಬ್ಬಂದಿಗಳು ಜಾಗೃತಿ ಫಲಕಗಳನ್ನು ಹಿಡಿದು ಜನರಿಗೆ ಮತದಾನದ ಮಹತ್ವ ತಿಳಿಸಿದರು. ನಂತರ ವಿವಿಧ ಗ್ರಾಮಗಳಲ್ಲಿ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಅಂಜನಾದ್ರಿ ಭಕ್ತರಿಗೂ ಮತದಾನ ಜಾಗೃತಿ : ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಶನಿವಾರ ದಿ‌ನ ಭಕ್ತರಿಗೆ ಮತದಾನ ಜಾಗೃತಿ ಮೂಡಿಸಲಾಯಿತು. ತಾಪಂ ಸಹಾಯಕ ನಿರ್ದೇಶಕರಾದ  ಸುರೇಶ ಉಪ್ಪಾರ, ಸಹಾಯಕ ನಿರ್ದೇಶಕರಾದ ನಾಗೇಶ ಕುರ್ಡಿ, ಪಿಡಿಓಗಳಾದ ರಾಮುನಾಯ್ಕ್ , ಬಸವರಾಜ ಗೌಡ್ರ, ಮಲ್ಲಿಕಾರ್ಜುನ ಕಡಿವಾಳ, ವತ್ಸಲಾ, ಶರಣಮ್ಮ, ಕೃಷ್ಣಪ್ಪ, ಕಾಶೀನಾಥ ಹಂಚಿನಾಳ, ಕಿರಣ್ ಕುಮಾರ್, ಅಶ್ವಿನಿ, ಕೃಷ್ಣ, ಲಕ್ಷ್ಮಿಬಾಯಿ,  ಜುಬೇರ್ ನಾಯ್ಕ, ತಾ.ಪಂ. ವಿಷಯ ನಿರ್ವಾಹಕರಾದ ಶ್ರೀನಿವಾಸ, ಭೀಮಣ್ಣ, ರಮೇಶ, ತಾ.ಪಂ. ಸಿಬ್ಬಂದಿಗಳು, ಗ್ರಾಪಂ ಕಾರ್ಯದರ್ಶಿಗಳು, ಕರವಸೂಲಿಗಾರರು, ಸಿಬ್ಬಂದಿಗಳು, ಟಿಇಎಗಳು, ಬಿಎಫ್ ಟಿಗಳು ಇದ್ದರು