ಎಲ್ಲರಿಗೂ ಲಸಿಕೆ ನೀಡಲು ಚಿಂತನೆ

ಬೆಂಗಳೂರು, ಜೂ.೭-ಕೋವಿಡ್ ಮೂರನೇ ಅಲೆಯಿಂದ ನಾವು ರಕ್ಷಣೆ ಪಡೆಯಲು ಲಸಿಕೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರಿಗೂ ಕಡ್ಡಾಯ ಲಸಿಕೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಮೂರನೇ ಅಲೆ ಎದುರಿಸಲು ಬಿಬಿಎಂಪಿ ಸಿದ್ಧತೆ ಕೈಗೊಂಡಿದ್ದರು, ಇದರಲ್ಲಿ ಮುಖ್ಯವಾಗಿ ಪ್ರತಿವೊಬ್ಬರು ಲಸಿಕೆ ಪಡೆದುಕೊಳ್ಳಲು ಆದ್ಯತೆ ನೀಡಲಾಗಿದೆ.ತಮ್ಮನ್ನು ತಾವು ರಕ್ಷಣೆ ಪಡೆದುಕೊಳ್ಳಲು ಲಸಿಕೆಯೇ ಪ್ರಧಾನವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುಪ್ತಾ ತಿಳಿಸಿದರು.
ಮತದಾರರ ಗುರುತಿನ ಚೀಟಿ ಪ್ರಕಾರವೇ ಎಲ್ಲರಿಗೂ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.ಎಷ್ಟು ಮಂದಿ ಲಸಿಕೆ ಪಡೆದಿದ್ದಾರೆ.ಅದರಲ್ಲು ಎರಡನೇ ಡೋಸ್ ಯಾರಿಗೆ ಬೇಕಾಗಿದೆ ಎನ್ನುವ ಸಂಕ್ಷಿಪ್ತ ಮಾಹಿತಿಯನ್ನು ನಾವು ಕಲೆಹಾಕಿ, ಪ್ರತಿಯೊಬ್ಬರಿಗೂ ಲಸಿಕೆ ಹಂಚಿಕೆ ಮಾಡಲಗುವುದು ಎಂದರು.
ಬೆಂಗಳೂರು ವ್ಯಾಪ್ತಿಯಲ್ಲಿ ೪೫ ವರ್ಷ ಮೇಲ್ಪಟ್ಟ ಸುಮಾರು ೨೬ ಲಕ್ಷ ಜನರನ್ನು ಗುರುತು ಮಾಡಲಾಗಿದೆ. ಈ ಪೈಕಿ ೧೫.೪೩ ಲಕ್ಷ ಜನರಿಗೆ ಈಗಾಗಲೇ ಮೊದಲನೇ ಡೋಸ್ ನೀಡಲಾಗಿದೆ. ಇದು ಶೇಕಡವಾರು ೬೦ರಷ್ಟು ಜನರಿಗೆ ಲಸಿಕೆ ಹಂಚಿಕೆ ಮಾಡಿದಂತೆ ಆಗಿದೆ.ಇನ್ನು, ಎರಡನೇ ಡೋಸ್ ಪಡೆಯಲು ಮೂರು ತಿಂಗಳು ಕಾಲ ಬೇಕಾಗಿದೆ. ಆ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳಿಗೆ ಸಂಪರ್ಕಿಸಿ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಶೇಕಡ ೭೫ರಷ್ಟು ಮಂದಿಗೆ ಲಸಿಕೆ ನೀಡುವ ಗುರಿಯನ್ನು ಬಿಬಿಎಂಪಿ ಹೊಂದಿದ್ದು, ಕೇಂದ್ರ ಸರ್ಕಾರದಿಂದ ಲಸಿಕೆ ಪಡೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದ ಅವರು, ೧೮ರಿಂದ೪೪ ವಯಸ್ಸಿನವರು ಬೆಂಗಳೂರಿನಲ್ಲಿ ೬೪ ಲಕ್ಷ ಮಂದಿ ಇದ್ದು, ಈ ಪೈಕಿ ೯ ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.ಆದರೆ, ಶೀಘ್ರದಲ್ಲಿಯೇ ೩೨ ಲಕ್ಷ ಮಂದಿಗೆ ಲಸಿಕೆ ದೊರೆಯುವಂತೆ ಕ್ರಮವಹಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಡ್ ಖಾಲಿ: ಕೋವಿಡ್ ಸೋಂಕಿನ ಪ್ರಮಾಣ ತೀವ್ರವಾಗಿ ಕಡಿಮೆಯಾಗಿರುವ ನಡುವೆ ನಗರದೆಲ್ಲೆಡೆ ಆಸ್ಪತ್ರೆಗಳಲ್ಲಿ ಬೆಡ್‌ಗಳ ಲಭ್ಯತೆ ಹೆಚ್ಚಿದೆ. ಇಂದಿನ ಮಾಹಿತಿ ಪ್ರಕಾರ ೧೩ ಸಾವಿರ ಹಾಸಿಗೆಗಳ ಪೈಕಿ ಬರೋಬ್ಬರಿ ೯ ಸಾವಿರ ಬೆಡ್‌ಗಳು ಖಾಲಿಯೇ ಉಳಿದಿವೆ ಎಂದು ವಿವರಿಸಿದರು.
ಸಿಸಿ ಕೇಂದ್ರ ಮುಚ್ಚುವುದಿಲ್ಲ: ಕೋವಿಡ್ ಕಡಿಮೆಯಾಗಿದೆ ಎಂದು ನಗರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕೋವಿಡ್ ಕೇರ್ ಕೇಂದ್ರಗಳಿಗೆ ಬೀಗ ಜಡಿಯುವುದಿಲ್ಲ. ಸದ್ಯ ಈ ಕೇರ್ ಸೆಂಟರ್‌ಗಳಲ್ಲಿ ೩,೪೦೦ ಬೆಡ್‌ಗಳಿವೆ.ಆದರೆ, ಇದರ ಸಂಖ್ಯೆ ಇಳಿಸುವ ಜೊತೆಗೆ ಸೆಂಟರ್‌ಗಳನ್ನನು ಉಳಿಸಿಕೊಳ್ಳಲಾಗುವುದು. ಆದರೆ, ಅಲ್ಲಿನ ವೈದ್ಯಕೀಯ ಸಿಬ್ಬಂದಿಯನ್ನು ಕಡಿತಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವಲ್ಲಿ ಜನರ ಸಹಕಾರ ಹೆಚ್ಚಾಗಿದೆ.ಅದೇ ರೀತಿ, ಆರೋಗ್ಯ ಸಿಬ್ಬಂದಿ ಸೇರಿದಂತೆ ಮುಂಚೂಣಿ ಕಾರ್ಯಕರ್ತರ ಶ್ರಮದಿಂದಲೇ ನಾವು ಇದೀಗ ಸೋಂಕಿನ ಪ್ರಮಾಣ ತಗ್ಗಿಸುವಲ್ಲಿ ಯಶಸ್ವಿಯಾಗಿದ್ದೇವೆ.
ಆದರೆ,ಮುಂದಿನ ದಿನಗಳಲ್ಲೂ ನಾವು ವೈರಾಣು ಕುರಿತು ಜಾಗೃತಿವಹಿಸಬೇಕು.ಜತೆಗೆ, ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೆ ಪಾಲನೆ ಮಾಡಿದರೆ ಮಾತ್ರ ನಾವು ಕೋವಿಡ್ ವಿರುದ್ಧ ಶಾಶ್ವತವಾಗಿ ಗೆಲವು ಸಾಧಿಸಲು ಸಾಧ್ಯ.ಇಲ್ಲದಿದ್ದರೆ, ಮತ್ತೆ ಕೊರೋನಾ ಉಲ್ಬಣಗೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎಂದು ಗೌರವ್ ಗುಪ್ತ ಎಚ್ಚರಿಕೆ ನೀಡಿದರು.

ಕೋವಿಡ್ ಮೂರನೇ ಅಲೆಯೂ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಮಾಹಿತಿ ಹಿನ್ನೆಲೆ ಮಕ್ಕಳ ಸಮೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಜ್ಞರ ಮಾಹಿತಿ ಅನ್ವಯ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.ಜತೆಗೆ, ಆರೋಗ್ಯ ತಜ್ಞ ಡಾ.ದೇವಿಶೆಟ್ಟಿ ಅವರ ನೇತೃತ್ವದಲ್ಲಿ ತಂಡವೊಂದನ್ನು ರಾಜ್ಯ ಸರ್ಕಾರ ರಚನೆ ಮಾಡಿದ್ದು, ಮಕ್ಕಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.
ಮುಂದಿನ ಎರಡು ದಿನಗಳಿನಲ್ಲಿ ಕೋವಿಡ್ ಮೂರನೇ ಅಲೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಈಗಾಗಲೇ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ನಿರ್ಮಿಸುವುದು ಸೇರಿದಂತೆ ಇನ್ನಿತರೆ ಸಿದ್ಧತೆಗಳನ್ನು ಕೈಗೊಳ್ಳುವಂತೆ ಮೌಖಿಕ ಸೂಚನೆಗಳನ್ನು ನೀಡಲಾಗಿದೆ ಎಂದರು.
ಹಲವು ದೇಶಗಳಲ್ಲಿ ಮಕ್ಕಳಿಗೂ ಲಸಿಕೆ ನೀಡಲಾಗಿದೆ.ಆದರೆ, ಭಾರತದಲ್ಲಿ ನೀಡುತ್ತಿಲ್ಲ. ಇದರಿಂದಲೂ ಪರಿಣಾಮ ಸಾಧ್ಯತೆ ಇದೆ ಎಂದು ಕೆಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದ ಅವರು, ಸೂಕ್ತ ವ್ಯವಸ್ಥೆ ಇಲ್ಲದ ಮಕ್ಕಳಿಗೆ ಮಾತ್ರ ನಾವು ಕೋವಿಡ್ ಕೇರ್ ಸೆಂಟರ್‌ಗಳಿಗೆ ಕರೆತರಲಾಗುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ ಎಂದು ತಿಳಿಸಿದರು.