ಎಲ್ಲರಿಗೂ ಲಸಿಕೆ :ಡಾ.ಕೆ.ಸುಧಾಕರ್

ಬೆಂಗಳೂರು, ಮೇ.30- ಎಲ್ಲರಿಗೂ ಆದಷ್ಟು ಶೀಘ್ರ ಕೋವಿಡ್ ಲಸಿಕೆ ನೀಡುವುದು ನಮ್ಮ ಮುಂದಿರುವ ಸದ್ಯದ ಉದ್ದೇಶ. ಇದರಿಂದಾಗಿ ಕೋವಿಡ್ ಮುಂದಿನ ಅಲೆ ತಡೆಯಬಹುದು. ಅಲ್ಲಿಯವರೆಗೆ ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮ ಕಡೆಗಣಿಸಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಲಸಿಕೆ ಪಡೆಯದೇ ಇದ್ದಲ್ಲಿ ಈ ರೀತಿ ಮೂರು, ನಾಲ್ಕನೇ ಅಲೆ ಬರುವ ಸಾಧ್ಯತೆ ಇರುತ್ತದೆ. ಆದಷ್ಟು ಶೀಘ್ರ ಎಲ್ಲರಿಗೂ ಲಸಿಕೆ ನೀಡುವುದು ನಮ್ಮ ಉದ್ದೇಶ. ಮಕ್ಕಳಿಗೂ ಲಸಿಕೆ ನೀಡಲು ಪ್ರಯೋಗ ನಡೆಯುತ್ತಿದೆ.

ವೃದ್ಧರಿಗೆ, ಯುವಜನರಿಗೆ, ಹೆಚ್ಚು ಜನರ ಸಂಪರ್ಕ ನೀಡುವವರಿಗೆ ಮೊದಲಾದವರಿಗೆ ಲಸಿಕೆ ನೀಡಲಾಗುತ್ತಿದೆ. ಎರಡು ಡೋಸ್ ಪಡೆದವರು ಇಡೀ ಪ್ರಕ್ರಿಯೆ ಮುಗಿಯುವವರೆಗೆ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಬೇಕು. ಇನ್ನೂ 6 ತಿಂಗಳು ಅಥವಾ ಒಂದು ವರ್ಷ ಮಾಸ್ಕ್ ಧರಿಸುವ ಹಾಗೂ ಇತರೆ ಕೋವಿಡ್ ಸುರಕ್ಷತಾ ಕ್ರಮ ಕಡೆಗಣಿಸಬಾರದು ಎಂದು ಕೋರಿದರು.

ರಾಜ್ಯಗಳ ಬೇಡಿಕೆಗನುಗುಣವಾಗಿ ರೆಮ್ ಡಿಸಿವಿರ್ ಔಷಧಿಯನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡುತ್ತಿತ್ತು. ಈಗ ಕೆಲ ಕಂಪನಿಗಳು ಮುಂದೆ ಬಂದು ರಾಜ್ಯಕ್ಕೆ ಔಷಧಿ ನೀಡುವುದಾಗಿ ತಿಳಿಸಿವೆ. ಮಾರುಕಟ್ಟೆಯಲ್ಲಿ ಔಷಧಿ ಲಭ್ಯವಿರುವುದರಿಂದಲೇ ಕೇಂದ್ರ ಸರ್ಕಾರ ನೇರವಾಗಿ ಖರೀದಿಸಲು ರಾಜ್ಯಕ್ಕೆ ಸೂಚನೆ ನೀಡಿದೆ ಎಂದರು.

ಬ್ಲ್ಯಾಕ್ ಫಂಗಸ್ ಔಷಧಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಎಂಟಕ್ಕೂ ಅಧಿಕ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಸುಮಾರು 80 ಸಾವಿರ ವೈಲ್ ಮಾರುಕಟ್ಟೆಯಲ್ಲಿದೆ. ರಾಜ್ಯಕ್ಕೆ ಈವರೆಗೆ 8-10 ಸಾವಿರ ವೈಲ್ ದೊರೆತಿದೆ. ರಾಜ್ಯದಲ್ಲಿ ಕಪ್ಪು ಶಿಲೀಂಧ್ರದ 1,250 ಪ್ರಕರಣ ಕಂಡುಬಂದಿದೆ. 30-35 ಸಾವಾಗಿದೆ ಎನ್ನಲಾಗಿದ್ದರೂ ಸರಿಯಾದ ಡೆತ್ ಆಡಿಟ್ ಮಾಡಲು ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗೆ ದಾಖಲಾದ ಕಪ್ಪು ಶಿಲೀಂಧ್ರ ಸೋಂಕಿತರಿಗೆ ಔಷಧಿ ವಿತರಿಸಲಾಗುತ್ತಿದೆ ಎಂದು‌ ತಿಳಿಸಿದರು.

ಲಾಕ್ ಡೌನ್ ನಿಂದ ಏನೆಲ್ಲ ಉತ್ತಮವಾಗಿದೆ ಎಂಬುದನ್ನು ಜನರೇ ನೋಡಿದ್ದಾರೆ. ಪಾಸಿಟಿವಿಟಿ ದರ ಶೇ.47 ರಷ್ಟಿದ್ದು, ಕಳೆದ 15 ದಿನಗಳಲ್ಲಿ ಶೇ‌14-15ರಷ್ಟಿಗೆ ಇಳಿದಿದೆ. ಅನೇಕ ರಾಜ್ಯಗಳಲ್ಲಿ ಶೇ.8-9ರಷ್ಟು ಆಗಿದೆ. ಇವೆಲ್ಲವನ್ನೂ ನೋಡಿಕೊಂಡು, ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದು ಮುಖ್ಯಮಂತ್ರಿಗಳೇ ಮುಂದಿನ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.