ಎಲ್ಲರಿಗೂ, ಎಲ್ಲಾ ಕಡೆಯೂ ಉನ್ನತ ಶಿಕ್ಷಣ ದೊರೆಯಲಿ

ಸಂಜೆವಾಣಿ ನ್ಯೂಸ್
ಮೈಸೂರು: ಜು.03:- ಉನ್ನತ ಶಿಕ್ಷಣವು ಎಲ್ಲರಿಗೂ ಹಾಗೂ ಎಲ್ಲಾ ಕಡೆಯೂ ಸಿಗಬೇಕೆಂಬ ಉದ್ದೇಶದಿಂದ ಮುಕ್ತ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಯಿತು ಎಂದು ಕರ್ನಾಟಕದ ರಾಜ್ಯಪಾಲ ಹಾಗೂ ವಿಶ್ವವಿದ್ಯಾನಿಲಯಗಳ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಕರಾಮುವಿ 18ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಕ್ತ ವಿಶ್ವವಿದ್ಯಾನಿಲಯಗಳು ದೂರ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಕಳೆದ ಎರಡೂವರೆ ದಶಕಗಳಲ್ಲಿ ದೂರ ಶಿಕ್ಷಣದ ಮೂಲಕ ದೇಶದಾದ್ಯಂತ ಉನ್ನತ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ನ್ಯಾಕ್ ಸಂಸ್ಥೆಯಿಂದ ಎ ಪ್ಲಸ್ ಮಾನ್ಯತೆ ಪಡೆದಿದೆ ಎಂದರು.
ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಂದ ಬಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಮುಕ್ತ ವಿಶ್ವವಿದ್ಯಾನಿಲಯಗಳು ಕಾರಣವಾಗಿವೆ. ದೂರ ಶಿಕ್ಷಣವು ಪ್ರಸ್ತುತ ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಉತ್ತಮ ಪರಿಣಾಮ ಬೀರಿದೆ. ಇಂದು ಮಹಿಳೆಯರು ಹೆಚ್ಚು ಪದಕಗಳನ್ನು ಪಡೆದಿರುವುದು ಮಹಿಳಾ ಸಬಲೀಕರಣದ ಪ್ರತೀಕವಾಗಿದೆ. ವಿವೇಕಾನಂದರ ಯುವಕರಿಗೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ನೀಡಿದ ಕರೆಯಂತೆ ಎಲ್ಲರೂ ದೇಶದ ಸರ್ವತೋಮುಖ ಪ್ರಗತಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅಶೋಕ್ ಎಸ್ ಕಿಣಗಿ ಮಾತನಾಡಿ, ವಿವಿಧ ಶೈಕ್ಷಣಿಕ ಅಧ್ಯಯನ ವ್ಯಾಸಂಗ ಕ್ರಮಗಳಲ್ಲಿ ಯಶಸ್ವಿಯಾಗಿ ಪ್ರಶಸ್ತಿಗಳನ್ನು ಮತ್ತು ಪದವಿಗಳನ್ನು ಸ್ವೀಕರಿಸುವ ಎಲ್ಲಾ ಪದವೀಧರರಿಗೆ ಹೃತ್ಪೂರ್ವಕ ಅಭಿನಂದನೆ. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡಿ ಉನ್ನತ ಸ್ಥಾನವನ್ನು ಅಂಗೀಕರಿಸಿ ಜಾಗತಿಕ ವ್ಯಕ್ತಿಗಳಾಗಿ ಪ್ರಸಿದ್ಧಿ ಪಡೆಯಿರಿ ಎಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪೆÇ್ರ. ಶರಣಪ್ಪ ವಿ ಹಲಸೆ ಅವರು ಮಾತನಾಡಿ, ಈ ಸಮಾರಂಭದಲ್ಲಿ ಕಲಾನಿಕಾಯದ ಒಬ್ಬ ಸಂಶೋಧನಾ ವಿದ್ಯಾರ್ಥಿಗೆ ಪಿ.ಹೆಚ್ ಡಿ ಪದವಿಯನ್ನು 44 ವಿವಿಧ ಪದವಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು 48 ವಿವಿಧ ಪದವಿ ವಿದ್ಯಾರ್ಥಿಗಳಿಗೆ ರಾಂಕ್ ಗಳನ್ನು ಮತ್ತು 27 ವಿವಿಧ ಪದವಿಗಳ ವಿದ್ಯಾರ್ಥಿಗಳಿಗೆ ನಗದು ಬಹುಮಾನಗಳನ್ನು ಪ್ರಧಾನ ಮಾಡಲಾಗುತ್ತಿದೆ. ಅಲ್ಲದೆ 5240 ಮಹಿಳಾ ವಿದ್ಯಾರ್ಥಿಗಳೊಳಗೊಂಡಂತೆ ಒಟ್ಟು 8721 ವಿದ್ಯಾರ್ಥಿಗಳಿಗೆ ವಿವಿಧ ಸ್ನಾತ್ತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪ್ರಧಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮುಕ್ತ ಮತ್ತು ದೂರ ಶಿಕ್ಷಣ ಪದ್ಧತಿಯ ಮೂಲಕ ಬೋಧನಾ ಕ್ರಮದಲ್ಲಿ ಅತ್ಯಂತ ಕಿರಿಯ ಹಾಗೂ ಪ್ರತಿಬಿಂಬ ವಿಶ್ವವಿದ್ಯಾನಿಲಯವಾಗಿದೆ. ಸಿಜಿಪಿಎ 3.31 ಗ್ರೇಡ್ ನೊಂದಿಗೆ ನ್ಯಾಕ್ ಸಂಸ್ಥೆಯಿಂದ ಎ+ ದರ್ಜೆಯ ಮಾನ್ಯತೆಯನ್ನು ಪಡೆದುಕೊಂಡಿದ್ದು, ದೇಶದಲ್ಲಿಯೇ ಮುಕ್ತ ಮತ್ತು ದೂರ ಶಿಕ್ಷಣ ಪದ್ಧತಿಯ ವಿಶ್ವವಿದ್ಯಾನಿಲಯಗಳಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಎಐಸಿಟಿಇ ಮತ್ತು ಎನ್ ಸಿ ಟಿ ಇ ಸಂಸ್ಥೆಗಳ ಮಾನ್ಯತೆಯನ್ನು ಪಡೆದುಕೊಂಡಿದ್ದು, ಯುಜಿಸಿ-ಡಿಇಬಿ ಸಂಸ್ಥೆಯು ಪ್ರಸ್ತುತದಲ್ಲಿ 39 ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಮಾನ್ಯತೆ ನೀಡಿದೆ. ಹೊಸ 12 ಪದವಿ ಕಾರ್ಯಕ್ರಮಗಳಿಗೆ ಸದರಿ ಸಂಸ್ಥೆಯ ಮಾನ್ಯತೆಯನ್ನು ಶೀಘ್ರದಲ್ಲಿ ನಿರೀಕ್ಷಿಸಲಾಗಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷ 2023-24 ರಿಂದ ಹೊಸದಾಗಿ 13 ಆನ್ಲೈನ್ ಶಿಕ್ಷಣ ಕ್ರಮಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೂವರಿಗೆ ಗೌರವ ಡಾಕ್ಟರೇಟ್: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು, ಧನ್ವಂತ್ರಿ ಎಜುಕೇಶನಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಶ್ರೀ ಲಕ್ಷ್ಮಿ ಶಿಕ್ಷಣ ಸಂಸ್ಥೆಗಳ ಸಮೂಹದ ಮುಖ್ಯಸ್ಥ ಎನ್ ರಾಮಚಂದ್ರಯ್ಯ ಹಾಗೂ ಚಿಲ್ಡ್ರನ್ಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಹಾಗೂ ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್ ಎನ್ ವೆಂಕಟಲಕ್ಷ್ಮಿ ನರಸಿಂಹರಾಜು ಅವರಿಗೆ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿತು. ರಾಷ್ರಪತಿ ಮರ್ಮು ಅವರು ಗೈರಾಗಿದ್ದರು. ಅವರು ರಾಜ್ಯಕ್ಕೆ ಆಗಮಿಸಿದ ವೇಳೆ ಅವರಿಗೆ ನೀಡುವುದಾಗಿ ವಿವಿ ಕುಲಪತಿಗಳು ತಿಳಿಸಿದರು. ಘಟಿಕೋತ್ಸವದಲ್ಲಿ 52 ವಿದ್ಯಾರ್ಥಿಗಳಿಗೆ 44 ಚಿನ್ನದ ಪದಕಗಳನ್ನು ಹಾಗೂ 27 ನಗದು ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲ ಸಚಿವರಾದ ಪೆÇ್ರ. ಕೆ.ಎಲ್.ಎನ್ ಮೂರ್ತಿ,ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪೆÇ್ರ. ಕೆ ಬಿ ಪ್ರವೀಣ, ಪೆÇ್ರ. ಲಕ್ಷ್ಮಿ ಸೇರಿ ಅನೇಕರು ಉಪಸ್ಥಿತರಿದ್ದರು.