ಎಲ್ಲರನ್ನೂ ಪ್ರೀತಿಸುವ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು

ಸಂಜೆವಾಣಿ ವಾರ್ತೆ

ದಾವಣಗೆರೆ.ಅ.೨೭; ನಮ್ಮೊಳಗೆ ಧರ್ಮ ಭೇದದ ಬೇಲಿ ಸುಟ್ಟು, ಗೋಡೆಗಳನ್ನು ಕೆಡವಿ, ಎಲ್ಲರನ್ನೂ ಪ್ರೀತಿಸುವ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು. ಆಗ ನಿಜವಾದ ಸಮಾಜದ ಸುಧಾರಣೆ ಆಗಲಿದೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ  ಜಮಾ ಅತೆ  ಇಸ್ಲಾಮಿ ಹಿಂದ್‌ನಿಂದ ಹಮ್ಮಿಕೊಂಡಿದ್ದ ಪ್ರವಾದಿ ಮುಹಮ್ಮದ್ ಅವರ ಜೀವನ ಸಂದೇಶ ಕುರಿತ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮಲ್ಲಿ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳದ ಹೊರತು ಯಾವ ಧರ್ಮವೂ ನಮ್ಮನ್ನು ಉದ್ಧಾರ ಮಾಡದು. ಎಲ್ಲ ಧರ್ಮಗಳೂ ಶ್ರೇಷ್ಟವಾಗಿವೆ. ಮನುಷ್ಯನಲ್ಲದೆ ಪಾಣಿ-ಪಕ್ಷಿ, ಪರಿಸರ ಸಂರಕ್ಷಣೆ ಮಾಡುವ ಸದ್ಭಾವನೆಯೇ ಧರ್ಮದ ಹಾದಿಗೆ ಸಾಧ್ಯವಾಗಲಿದೆ.  ಇಲ್ಲವಾದಲ್ಲಿ ಧರ್ಮದಿಂದ ದೂರವಾಗುತ್ತೇವೆ ಎಂದರು. ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸಿಲ್ಲ. ಆದರೆ ಧರ್ಮಕ್ಕೆ ವಿರುದ್ಧವಾದ ಆಚರಣೆಗಳನ್ನು ಆಯಾ ಧರ್ಮಾನುಯಾಯಿಗಳು ಮಾಡುತ್ತಿದ್ದಾರೆ. ಇದಕ್ಕೆ ಧರ್ಮಾಂಧತೆ ಹೊರತಾಗಿ ಧರ್ಮ ಕಾರಣವಲ್ಲ ಎಂದು ಹೇಳಿದರು.ಧರ್ಮಾಂಧತೆಯು ಭಯೋತ್ಪಾದಕರು, ಅಜ್ಞಾನಿಗಳು ಹಾಗೂ ಸಮಾಜಘಾತುಕರನ್ನು ಸೃಷ್ಟಿಸುತ್ತಿದೆ. ಮನೆ-ಮಠ, ಸಮಾಜದಿಂದ ಒಳ್ಳೆಯ ಸಂಸ್ಕಾರ ನೀಡಬೇಕಿತ್ತು. ಆದರೆ ಧರ್ಮ ಕೇಂದ್ರದಲ್ಲೂ ಧರ್ಮದ ವ್ಯಾಪಾರ ನಡೆಯುತ್ತಿದೆ. ಇದರಿಂದ ಸಮಾಜವನ್ನು ಸನ್ಮಾರ್ಗದಲ್ಲಿ ಕರೆದೊಯ್ಯಲು ಸಾಧ್ಯವಿಲ್ಲ ಎಂದರು. ಮುಹಮ್ಮದ್ ಪೈಗಂಬರ್ ಅವರ ಚಿಂತನೆ ಅರ್ಥ ಮಾಡಿಕೊಂಡಿದ್ದರೆ ಇಸ್ರೇಲ್ ಪ್ಯಾಲೆಸ್ತೇನ್ ನಡುವೆ ಯುದ್ಧ ಸಂಭವಿಸುತ್ತಿರಲಿಲ್ಲ. ಮಾನವನ ಬೆಳವಣಿಗೆಗೆ ಬೌದ್ಧಿಕತೆ ಜತೆಗೆ ನೈತಿಕ ಬೆಳವಣಿಗೆಯೂ ಬೇಕು. ವ್ಯಕ್ತಿ ತಾನು ಬದಲಾದರೆ ಲೋಕವೂ ಸುಧಾರಣೆ ಆಗಲಿದೆ ಎಂದು ಹೇಳಿದರು. ಜಮಾಅತೆ  ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಮಾತನಾಡಿ ಮೌಲ್ಯಗಳಿಲ್ಲದ ಬದುಕು ಮರುಭೂಮಿ. ಪ್ರವಾದಿ ಮುಹಮ್ಮದ್ ಪೈಗಂಬರರು ಎಲ್ಲ ಮಹಾಪುರುಷರು ವೈಲೆನ್ಸ್ ಬಿತ್ತಲಿಲ್ಲ. ಬದಲಾಗಿ ವ್ಯಾಲ್ಯೂಗಳನ್ನು ಮೂಡಿಸಿದರು. ಅವರೆಲ್ಲರ ಮೌಲ್ಯಗಳನ್ನು ಮನೆ-ಮಂದಿರ ಎಲ್ಲೆಂದರಲ್ಲಿ ಹೆಚ್ಚು ಬಿತ್ತಬೇಕು ಎಂದರು. ಜಗತ್ತಿನಲ್ಲಿ ದೇವರ ಹೆಸರಿನಲ್ಲಿ ಅನ್ಯಾಯ ನಡೆಯುತ್ತಿವೆ. ಬಂಡವಾಳಶಾಹಿಗಳು ಜಗತ್ತನ್ನು ಹಾಳು ಮಾಡುತ್ತಿದ್ದಾರೆ. ನಾವು ಧರ್ಮವನ್ನು ಸರಿಯಾಗಿ ಪಾಲಿಸದ ಕಾರಣಕ್ಕೆ ಅನರ್ಥಗಳು ನಡೆಯುತ್ತಿವೆ. ಸಮಾಜದ ಆರೋಗ್ಯ ಕ್ವಾಲಿಟಿಯಲ್ಲಿದೆ, ಬದಲಾಗಿ ಕ್ವಾಂಟಿಟಿಯಲ್ಲಿಲ್ಲ. ಹೀಗಾಗಿ ಅಂತಹ ಗುಣಗಳನ್ನು ಬೆಳೆಸಬೇಕಿದೆ ಎಂದು ಆಶಿಸಿದರು. ಲೇಖಕ ಯೋಗೇಶ್ ಮಾಸ್ಟರ್ ಮಾತನಾಡಿ ಯಾವುದೇ ಬರವಣಿಗೆಯು ಭ್ರಮೆ ಹೋಗಲಾಡಿಸಬೇಕು. ಧಾರ್ಮಿಕ ಆಚರಣೆಗಳ ಜತೆಗೆ ಅಂತರ್ಗತವಾಗಿ ನಮ್ಮ ಅರಿವನ್ನು ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದರು. ಇದೇ ವೇಳೆ ಅವರು ಬರೆದ ‘ನನ್ನರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ ಮಾಡಲಾಯಿತು. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ ಮುಹಮ್ಮದ್ ಪೈಗಂಬರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರೂ ಮುಸ್ಲಿಮರಿನ್ನೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದರು. ಇನ್‌ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿಜಯಕುಮಾರ್, ಎಂ. ಗುರುಸಿದ್ದಸ್ವಾಮಿ, ಆವರಗೆರೆ ರುದ್ರಮುನಿ, ಹೆಗ್ಗೆರೆ ರಂಗಪ್ಪ, ಎಚ್. ಮಲ್ಲೇಶ್, ಕೆ. ಸರಸ್ವತಿ, ಜಮಾ ಅತೆ  ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಅಯೂಬ್ ಖಾನ್ ಇತರರಿದ್ದರು.