ಯೋಗಕ್ಕೆ ಪ್ರತಿರೋಧ ಎದುರಿಸುವ ಶಕ್ತಿ ಇದೆ: ಮೋದಿ

ನವದೆಹಲಿ/ನ್ಯೂಯಾರ್ಕ್,ಜೂ.೨೧- ಯೋಗಕ್ಕೆ ವಿರೋಧಾಬ್ಯಾಸ, ಅಡೆತಡೆ, ಪ್ರತಿರೋಧಗಳನ್ನು ಎದುರಿಸುವ ಶಕ್ತಿ ಹೊಂದಿದೆ. ಈ ಮೂಲಕ “ಏಕ್ ಭಾರತ್ ಶ್ರೇಷ್ಠ ಭಾರತ”ದ ಮನೋಭಾವವನ್ನು ಜಗತ್ತಿಗೆ ಪ್ರಸ್ತುತ ಪಡಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ಭಾರತ ಯಾವಾಗಲೂ ಒಗ್ಗೂಡಿಸುವ, ಅಳವಡಿಸಿಕೊಳ್ಳುವ ಮತ್ತು ಸಂಪ್ರದಾಯ ಪೋಷಿಸುವ ಗುಣವನ್ನು ಹೊಂದಿದೆ. ಜೊತೆಗೆ ಯೋಗ ಜನರ ಭಾವನೆ ಬಲಪಡಿಸುತ್ತದೆ, ಆಂತರಿಕ ದೃಷ್ಟಿ ವಿಸ್ತರಿಸುತ್ತದೆ ಮತ್ತು ಪ್ರಜ್ಞೆಯೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ, ಸಕಲ ಜೀವಿಗಳ ಐಕ್ಯತೆಗೆ ಸಹಕಾರಿಯಾಲಿದೆ ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅವರು ಭಾರತೀಯರು ಹೊಸ ಆಲೋಚನೆಗಳನ್ನು ಸ್ವಾಗತಿಸಿದ್ದಾರೆ, ಅವುಗಳನ್ನು ಸಂರಕ್ಷಿಸಿದ್ದಾರೆ ಮತ್ತು ದೇಶದ ಶ್ರೀಮಂತ ವೈವಿಧ್ಯತೆಯನ್ನು ಯೋಗದ ಮೂಲಕ ಆಚರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತದ ಸಂಶೋಧನಾ ಕೇಂದ್ರಗಳ ಸಂಶೋಧಕರು ಸಹ ಈ ಆಚರಣೆಯಲ್ಲಿ ಭಾಗವಹಿಸುತ್ತಿರುವುದರಿಂದ ಈ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷವಾಗಿದೆ ಯೋಗದ ಕಲ್ಪನೆ ಮತ್ತು ಸಾಗರದ ವಿಸ್ತಾರದ ನಡುವಿನ ಪರಸ್ಪರ ಸಂಬಂಧವನ್ನು ಆಧರಿಸಿದ ’ಓಷನ್ ರಿಂಗ್ ಆಫ್ ಯೋಗ’ದ ಕಲ್ಪನೆ ಯೋಗ ದಿನವನ್ನು ಇನ್ನಷ್ಟು ವಿಶೇಷವಾಗಿಸಿದೆ ಎಂದು ಹೇಳಿದ್ದಾರೆ.ಈ ವಿಶಿಷ್ಟ ಆಚರಣೆಯಲ್ಲಿ ದೇಶ ಮತ್ತು ಪ್ರಪಂಚದಾದ್ಯಂತದ ಕೋಟ್ಯಂತರ ಜನರು ಸ್ವಯಂಪ್ರೇರಿತವಾಗಿ ಭಾಗವಹಿಸುವುದು ಯೋಗದ ಅಗಾಧತೆ ಮತ್ತು ಖ್ಯಾತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನೇತೃತ್ವ:
ಅಮೇರಿಕಾದ ಅಧಿಕೃತ ರಾಜ್ಯ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸಂಜೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ.೨೦೧೪ ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಲಾದ ಅಂತರಾಷ್ಟ್ರೀಯ ಯೋಗ ದಿನದ ಪ್ರಸ್ತಾಪವನ್ನು ಉಲ್ಲೇಖಿಸಿ, “ಭಾರತದ ಕರೆಗೆ ೧೮೦ಕ್ಕೂ ಹೆಚ್ಚು ದೇಶಗಳು ಒಗ್ಗೂಡಿರುವುದು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ” ಎಂದು ಮೋದಿ ಹೇಳಿದರು.

ಧನ್ಕರ್ ಭಾಗಿ
ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಪಾಲ್ಗೊಂಡರು.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ ಭವನದ ಆವರಣದಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು, ದೇಶದ ವಿವಿಧ ಭಾಗಗಳಲ್ಲಿ ಕೇಂದ್ರ ಸಚಿವರು ವಿವಿಧ ನಗರಗಳಲ್ಲಿ ಯೋಗಾಭ್ಯಾಸ ಮಾಡಿದರು.
ಐಎನ್‌ಎಸ್ ವಿಕ್ರಾಂತ್‌ನಲ್ಲಿ ಯೋಗ
ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಭಾರತದ ಮೊದಲ ವಿಮಾನ ವಾಹನ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗಾಭ್ಯಾಸ ನಡೆಸಿದರು. ನೌಕಾಪಡೆಯ ಮುಖ್ಯಸ್ಥ ಆರ್. ಹರಿಕುಮಾರ್, ಹಿರಿಯ ಸಿಬ್ಬಂದಿಗಳು, ರಕ್ಷಣಾ ಇಲಾಖೆಯ ಅಧಿಕಾರಿಗಳು ನೌಕಾಪಡೆಯ ನೂರಾರು ಸಿಬ್ಬಂದಿಗಳು ಪಾಲ್ಗೊಂಡರು.
ಸುಮಾರು ಒಂದು ಗಂಟೆಗಳ ಕಾಲ ಯೋಗಾಭ್ಯಾಸ ನಡೆಯಿತು. ಅಗ್ನಿವೀರ ಯೋಧರು ಸಾಮೂಹಿಕ ಯೋಗ ಪ್ರದರ್ಶನ ನೀಡಿ ಗಮನ ಸೆಳೆದರು.